ಸಿಎಂಗೆ ಆಹ್ವಾನ ನೀಡದ್ದು ಮೋದಿ ಸಣ್ಣತನವನ್ನು ತೋರಿಸುತ್ತದೆ: ಗುಂಡೂರಾವ್
ಉಡುಪಿ, ಫೆಬ್ರವರಿ 18: ಮೈಸೂರಿನಲ್ಲಿ ಆಯೋಜಿಸಲಾಗಿರುವ ರೈಲಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸದಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಸಣ್ಣತನವನ್ನು ತೋರಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮೈಸೂರಿನ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸಬೇಕಾಗಿರುವುದು ಕೇಂದ್ರದ ಜವಾಬ್ದಾರಿ. ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಅವರಿಗೆ ಆಹ್ವಾನ ನೀಡದಿರುವುದು ಪ್ರಧಾನಿ ಮೋದಿಯವರ ಮನಸ್ಥಿತಿ ಸೂಚಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಶಾ ರಾಜ್ಯ ಪ್ರವಾಸ ವಿಚಾರದ ಕುರಿತು ಮಾತನಾಡಿದ ಗುಂಡುರಾವ್, "ಶಾ ಅವರು ಮೂರ್ನಾಲ್ಕು ಬಾರಿ ರಾಜ್ಯಕ್ಕೆ ಬಂದಿದ್ದಾರೆ. ಆದರೆ ಈ ಬಾರಿಯಾದರೂ ಸತ್ಯ ಮಾತನಾಡಲಿ," ಎಂದು ವ್ಯಂಗ್ಯವಾಡಿದರು.

"ಅಮಿತ್ ಶಾ ಅವರ ಮಾತು ರಾಜ್ಯದಲ್ಲಿ ಕೋಮು ಭಾವನೆ ಕೆರಳಿಸದಿರಲಿ," ಎಂದು ಹೇಳಿದ ಅವರು ರಾಜ್ಯಕ್ಕೆ ಬಂದು ಜನರ ಮನಸ್ಸಲ್ಲಿ ವಿಷ ಬೀಜ ಬಿತ್ತಬೇಡಿ ಎಂದು ಶಾ ಬಳಿ ಮನವಿ ಮಾಡಿಕೊಂಡರು.
"ರಾಜ್ಯಕ್ಕೆ ಬಂದಾಗ ರಾಜ್ಯ ಸರ್ಕಾರದ ಬಗ್ಗೆ ಅಮಿತ್ ಶಾ ಜವಾಬ್ದಾರಿಯುತವಾಗಿ ಮಾತನಾಡಲಿ. ಹೆದರಿಸಿ ಬೆದರಿಸುವ ರಾಜಕಾರಣ ರಾಜ್ಯಕ್ಕೆ ಬೇಡ. ಅಮಿತ್ ಶಾ ಕರ್ನಾಟಕಕ್ಕೆ ಬಂದಾಗ ರಾಜ್ಯ-ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಲಿ," ಎಂದು ಅಭಿಪ್ರಾಯಪಟ್ಟರು.
ಮುಂಬರುವ ಮಾರ್ಚ್ ತಿಂಗಳಲ್ಲಿ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಪ್ರವಾಸ ಯಶಸ್ವಿಯಾಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, "ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋಗಲು ಯಾರ ಒಪ್ಪಿಗೆಯೂ ಬೇಕಾಗಿಲ್ಲ. ದೇವಸ್ಥಾನ ಬಿಜೆಪಿಯವರಿಗೆ ಮಾತ್ರ ಗುತ್ತಿಗೆ ಕೊಟ್ಟಿಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇದರನಾಥಕ್ಕೂ ರಾಹುಲ್ ಪಾದಯಾತ್ರೆ ಮಾಡಿದ್ದಾರೆ ಎಂದು ಹೇಳಿದ ಅವರು, "ಹಿಂದೂ ಧರ್ಮ ಬಿಜೆಪಿಗೆ ಮಾತ್ರ ಅಂತ ಬಿಜೆಪಿ ಮುಖಂಡರು ಭಾವಿಸಿದ್ದಾರೆ. ರಾಜ್ಯದ ಕರಾವಳಿ ಜಿಲ್ಲೆಗಳ ಪ್ರವಾಸ ವೇಳೆ ಅಮಿತ್ ಶಾ ಮಸೀದಿಗೂ ಭೇಟಿ ಕೊಡಲಿ. ಚರ್ಚ್, ದರ್ಗಾಕ್ಕೂ ಹೋಗಲಿ," ಎಂದು ಕರೆ ನೀಡಿದರು.
ದುಷ್ಕರ್ಮಿಗಳ ದಾಳಿಯಲ್ಲಿ ಮೃತ ಪಟ್ಟವರ ಮನೆಗೆ ಅಮಿತ್ ಶಾ ಭೇಟಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಗುಂಡುರಾವ್ , "ಶಾ ಅವರು ಬರೀ ಹಿಂದೂಗಳ ಮನೆಗೆ ಯಾಕೆ ಹೋಗಬೇಕು. ಮುಸಲ್ಮಾನರ ಮನೆಗೂ ಭೇಟಿ ನೀಡಲಿ. ಸತ್ತವರ ವಿಚಾರದಲ್ಲಿ ಜಾತಿ ಧರ್ಮ ನೋಡಬೇಡಿ," ಎಂದು ಅವರು ಹೇಳಿದರು.












Click it and Unblock the Notifications