ದನದ ವ್ಯಾಪಾರಿ ಹುಸೈನಬ್ಬ ಪೊಲೀಸ್ ಕಸ್ಟಡಿಯಲ್ಲೇ ಸಾವು

ಉಡುಪಿ, ಜೂನ್ 4 : ಇಲ್ಲಿನ ಪೆರ್ಡೂರು ಗ್ರಾಮದಲ್ಲಿ ಮೇ 30ರಂದು ನಡೆದ ದನದ ವ್ಯಾಪಾರಿಯ ಅನುಮಾನಾಸ್ಪದ ಸಾವಿಗೆ ಹೊಸ ತಿರುವು ಸಿಕ್ಕಿದೆ. ದನದ ವ್ಯಾಪಾರಿ ಹುಸೈನಬ್ಬ ಪೊಲೀಸರ ಕಸ್ಟಡಿಯಲ್ಲೇ ಸಾವನ್ನಪ್ಪಿದ ವಿಷಯ ಇದೀಗ ಬಹಿರಂಗವಾಗತೊಡಗಿದೆ.

ಅಷ್ಟೇ ಅಲ್ಲ, ಭಜರಂಗದಳದ ಆರೋಪಿಗಳ ಜೊತೆ ಸೇರಿ ಪೊಲೀಸರೇ ಶವವನ್ನು ಹಾಡಿಗೆ ಎಸೆದು ಬಂದಿದ್ದು ತನಿಖೆಯ ವೇಳೆ ಗೊತ್ತಾಗಿದೆ. ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯ ಎಸ್ಸೈ ಡಿ.ಎನ್ ಕುಮಾರ್, ಜೀಪ್ ಚಾಲಕ ಗೋಪಾಲ್ ಮತ್ತು ಹೆಡ್ ಕಾನ್ ಸ್ಟೇಬಲ್ ಮೋಹನ್ ಕೊತ್ವಾಲ್ ಸಹಿತ ಹತ್ತು ಮಂದಿಯನ್ನು ಬಂಧಿಸಲಾಗಿದೆ.

ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ ಸಾವು ಸಂಭವಿಸಿದ್ದು ಹೃದಯಾಘಾತದಿಂದಲ್ಲ; ಬದಲಾಗಿ ಭಜರಂಗದಳದ ಕಾರ್ಯಕರ್ತರ ಜೊತೆ ಪೊಲೀಸರೂ ಹಲ್ಲೆ ನಡೆಸಿದ್ದರಿಂದ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯ ಎಸ್ಸೈ ಸಹಿತ ಮೂವರು ಪೊಲೀಸರನ್ನು ಭಾನುವಾರ ರಾತ್ರಿ ಬಂಧಿಸಲಾಗಿದೆ.

Cow trader Husainabba died in police custody

ಎಸ್ಸೈ ಡಿ.ಎನ್ ಕುಮಾರ್ ಈಗಾಗಲೇ ಕರ್ತವ್ಯ ಲೋಪದ ಆರೋಪದಿಂದ ಅಮಾನತುಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಭಜರಂಗದಳ ಕಾರ್ಯಕರ್ತರೂ ಸೇರಿದಂತೆ ಈ ತನಕ ಒಟ್ಟು 10 ಮಂದಿಯನ್ನು ಬಂಧಿಸಿದಂತಾಗಿದೆ.

ದನದ ವ್ಯಾಪಾರಿ ಹುಸೈನಬ್ಬ ಭಜರಂಗದಳ ಕಾರ್ಯಕರ್ತರಿಂದ ತಪ್ಪಿಸಿಕೊಳ್ಳುವಾಗ ಹೃದಯಾಘಾತವಾಗಿ ಸತ್ತರು ಎಂದು ಪೊಲೀಸರು ಬಿಂಬಿಸಿದ್ದರು. ಈ ಪ್ರಕರಣವನ್ನು ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಪೊಲೀಸ್ ಜೀಪಲ್ಲೇ ಹುಸೈನಬ್ಬ ಮೃತಪಟ್ಟಿರುವುದು ಸಾಬೀತಾಗಿದೆ.

ಪೊಲೀಸರ ಎದುರೇ ಹಲ್ಲೆ ನಡೆಸಿದ್ದರು

ಮೇ 30 ರಂದು ಮುಂಜಾನೆ ಹುಸೈನಬ್ಬ ಮತ್ತು ಇಬ್ಬರು ಸ್ಕಾರ್ಪಿಯೋದಲ್ಲಿ ದನ ಸಾಗಾಟ ಮಾಡುತ್ತಿದ್ದರು. ಈ ವೇಳೆ ಪೆರ್ಡೂರು ಗ್ರಾಮದ ಶೇಣೆರಬೆಟ್ಟು ಎಂಬಲ್ಲಿ ಭಜರಂಗದಳ ಕಾರ್ಯಕರ್ತರು ಮತ್ತು ಪೊಲೀಸರು ಜಂಟಿಯಾಗಿ ಅಡ್ಡಗಟ್ಟಿದ್ದರು. ಆಗ ವಾಹನದಲ್ಲಿದ್ದ ಮತ್ತಿಬ್ಬರು ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಹುಸೈನಬ್ಬರಿಗೆ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದ್ದ ಭಜರಂಗದಳ ಕಾರ್ಯಕರ್ತರು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದರು.

ಪೊಲೀಸರು ಹುಸೈನಬ್ಬ ಅವರನ್ನು ಠಾಣೆಗೆ ಕರೆತರುತ್ತಾರೆ. ದನದ ವ್ಯಾಪಾರಿಗಳ ಸ್ಕಾರ್ಪಿಯೋ ಜೀಪನ್ನು ಭಜರಂಗದಳದವರು ಠಾಣೆಗೆ ತರುತ್ತಾರೆ. ಈ ವೇಳೆ ಜೀಪಲ್ಲಿ ಕುಳಿತಿದ್ದ ಹುಸೈನಬ್ಬ ಸಾವನ್ನಪ್ಪಿದ್ದು, ಪೊಲೀಸರು ಮತ್ತೆ ಕೃತ್ಯ ನಡೆದ ಸ್ಥಳಕ್ಕೆ ಶವವನ್ನು ಎಸೆದು ಬರುತ್ತಾರೆ.

Cow trader Husainabba died in police custody

ಮರುದಿನ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿದ ಹಿರಿಯಡ್ಕ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಸಿದ್ದಾರೆ. ಆದರೆ ಮೃತರ ಕಡೆಯವರು ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ಈ ಭಾನಗಡಿ ಬೆಳಕಿಗೆ ಬಂದಿದೆ.

ಮೂವರು ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉಳಿದ 4 ಮಂದಿ ಪೊಲೀಸರು ಕಸ್ಟಡಿಯಲ್ಲಿದ್ದು, ತನಿಖೆ ಮುಂದುವರಿದಿದೆ. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ಸತ್ಯಾಂಶ ಹೊರ ಬರುವಂತೆ ಮಾಡಿದ ಉಡುಪಿ ಜಿಲ್ಲಾ ಎಸ್ಪಿ ನಿಂಬರ್ಗಿಯವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+