ಉಡುಪಿಯ ಈ ಎರಡು ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸುತ್ತಾ ಕಾಂಗ್ರೆಸ್? ಗೆಲುವಿಗೆ ಕಾರಣಗಳೇನು?
ಉಡುಪಿ, ಏಪ್ರಿಲ್ 4: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದ ಅಸಲಿ ಆಟ ಈಗ ಆರಂಭವಾಗಿದೆ. ಚುನಾವಣಾ ದಿನಾಂಕ ಘೋಷಣೆ ಆದ ಬಳಿಕ ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬದಲಾವಣೆ ಈವರೆಗೂ ಜನರು ಹಾಗೂ ಜನಪ್ರತಿನಿಧಿಗಳು ಹಾಕಿದ್ದ ಲೆಕ್ಕಚಾರವನ್ನು ತಲೆ ಕೆಳಗಾಗಿಸುತ್ತಿದೆ. ಇದರಲ್ಲಿ ಉಡುಪಿ ಜಿಲ್ಲೆ ಹೊರತಲ್ಲ.
ಉಡುಪಿ ಜಿಲ್ಲೆ ಬಿಜೆಪಿ ಭದ್ರಕೋಟೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ. ಉಡುಪಿಯಲ್ಲಿ ರಘುಪತಿ ಭಟ್, ಬೈಂದೂರಿನಲ್ಲಿ ಸುಕುಮಾರ ಶೆಟ್ಟಿ, ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾಪು ನಲ್ಲಿ ಲಾಲಾಜಿ ಮೆಂಡನ್ ಹಾಗೂ ಕಾರ್ಕಳದಲ್ಲಿ ಸುನೀಲ್ ಕುಮಾರ್ ಶಾಸಕರಾಗಿದ್ದು, ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲುಣಿಸಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಲೆಕ್ಕ ತಪ್ಪುವ ಸ್ಥಿತಿ ಎದುರಾಗಿದೆ.

ಸದ್ಯ ಉಡುಪಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಸದ್ಯ ರಾಜಕೀಯದಲ್ಲಾದ ಬದಲಾವಣೆಯಿಂದ ಈ ನಿರೀಕ್ಷೆ ಸುಳ್ಳಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮೇಲು ಗೈ ಸಾಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಕರಾವಳಿಯಲ್ಲಿ ಬಿಜೆಪಿ ಹಿನ್ನಡೆಗೆ ಕಾರಣವಾಗುವ ಅಂಶಗಳ ವಿಶ್ಲೇಷಣೆ ಇಲ್ಲಿದೆ.
ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಹಾಲಾಡಿ ಶ್ರೀನಿವಾಸ ಶೆಟ್ಟಿ
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಐದು ಬಾರಿ ಗೆದ್ದು ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷೇಂತರರಾಗಿಯೂ ನಿಂತು ಒಮ್ಮೆ ಗೆಲುವು ಸಾಧಿಸಿದ್ದರು. ಇದರ ಅರ್ಥ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗತವಾಗಿರದೆ, ವ್ಯಕ್ತಿಗತವಾಗಿತ್ತು. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ವ್ಯಕ್ತಿತ್ವಕ್ಕೆ ಜನರ ಬೆಂಬಲವಿತ್ತು.

ಪಕ್ಷ ಸಂಘಟನೆ ಮಾಡದೇ, ಚುನಾವಣಾ ಪ್ರಚಾರ ನಡೆಸದೇ ಗೆಲುವು ಸಾಧಿಸುವ ವರ್ಚಸ್ಸು ಹೊಂದಿದ್ದರು. ಆದರೆ ಸದ್ಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಪರಿಣಾಮ ನೇರವಾಗಿ ಬಿಜೆಪಿ ಮೇಲೆ ಬೀಳಲಿದೆ. ಇಷ್ಟು ವರ್ಷ ಹಾಲಾಡಿ ಅವರಿಗೆ ಮತ ಹಾಕುತ್ತಿದ್ದ ಬಹುತೇಕ ಮತದಾರರು ಈ ಬಾರಿ ಗೊಂದಲಕ್ಕೀಡಾಗಿದ್ದಾರೆ.
ಈ ಬಾರಿ ಮತ ಚಲಾಯಿಸುವುದಿಲ್ಲ, ನೋಟಾಗೆ ನಮ್ಮ ಮತ ಎಂದು ಹಲವರು ಹೇಳುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಇದು ಪ್ಲಸ್ ಪಾಯಿಂಟ್ ಆಗಲಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಯಸದಿದ್ದರೂ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಹೆಸರಿಗೆ ಮತ ಹಾಕುತ್ತಿದ್ದ ಬಹುತೇಕರ ಮತಗಳು ಈ ಬಾರಿ ವಿಭಜನೆಯಾಗುವ ಸಾಧ್ಯತೆ ಇದೆ.

ಮ್ಮ ರಾಜಕೀಯ ಗುರು ದಿ.ಎ.ಜಿ.ಕೊಡ್ಗಿಯವರ ಪುತ್ರ ಮತ್ತು ತಮ್ಮ ಬಲಗೈ ಬಂಟ ಕಿರಣ ಕೊಡ್ಗಿಯವರಿಗೆ ಕ್ಷೇತ್ರವನ್ನು ಬಿಟ್ಟು ಕೊಡಲು ಹಾಲಾಡಿ ಶ್ರೀನಿವಾಸ ಶೆಟ್ಟಿ ನಿರ್ಧರಿಸಿದ್ದಾರೆ. ಕಿರಣ ಕೊಡ್ಗಿಯವರಿಗೂ ಬಿಜೆಪಿ ಕಾರ್ಯಕರ್ತರು ಸಂಪೂರ್ಣ ಬೆಂಬಲ ಸೂಚಿಸುತ್ತಿದ್ದು, ಒಂದು ವೇಳೆ ಬಿಜೆಪಿ ಕಿರಣ ಕೊಡ್ಗಿಯವರಿಗೆ ಟಿಕೆಟ್ ನೀಡಿದರೆ ಪ್ರಚಾರದ ಮೂಲಕವೇ ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳಬಹುದಾಗಿದೆ.
ಸುಕುಮಾರ್ ಶೆಟ್ಟಿ ವಿರುದ್ಧ ಅಸಮಧಾನ, ಗೋಪಾಲ ಪೂಜಾರಿ ಕೈ ಹಿಡಿತಾರಾ ಬೈಂದೂರು ಮಂದಿ
ಸದ್ಯ ಬಿಜೆಪಿ ತೆಕ್ಕೆಯಲ್ಲಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕೆ. ಗೋಪಾಲ ಪೂಜಾರಿ ಅವರಿಗೆ ಕಾಂಗ್ರೆಸ್‌ನಿಂಧ ಟಿಕೆಟ್ ನೀಡಲಾಗಿದೆ. ಈಗಾಗಲೇ ಬೈಂದೂರು ಕ್ಷೇತ್ರದಲ್ಲಿ ಹಲವು ಬಾರಿ ಗೆಲುವು ಕಂಡಿರುವ ಗೋಪಾಲ ಪೂಜಾರಿ ಈ ಬಾರಿಯೂ ಗೆಲುವು ಸಾಧಿಸಬಹುದು ಎನ್ನಲಾಗಿದೆ. ಇದಕ್ಕೆ ಹಾಲಿ ಶಾಸಕರ ಮೇಲೆ ಕಾರ್ಯಕರ್ತರ ಅಸಮಧಾನವೇ ಕಾರಣ ಎನ್ನಲಾಗುತ್ತಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕು ಎನ್ನುವ ಕೂಗು ಜೋರಾಗಿ ಕೇಳಿ ಬರುತ್ತಿದೆ. ಶಾಸಕರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿದೆ. ಹೀಗಾಗಿ ಬಿಜೆಪಿಯೊಳಗಿನ ಭಿನ್ನಮತ ಕಾಂಗ್ರೆಸ್ ಗೆಲುವಿನಿಗೆ ಸಹಕಾರಿಯಾಗುವ ಸಾಧ್ಯತೆ ಇದೆ. ಇನ್ನು ಗೋಪಾಲ ಪೂಜಾರಿ ಅವರ ಮೇಲೆ ಬೈಂದೂರು ಜನತೆಗೆ ಅನುಕಂಪವಿದ್ದು, ಈ ಬಾರಿ ಅವರ ಪರ ನಿಲ್ಲುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.












Click it and Unblock the Notifications