ಕಾರ್ಕಳದಲ್ಲಿ ಕರಿಮಣಿ ಮಾಲೀಕ ನೀನಲ್ಲ ಸಾವಿನ ಕಥೆ: ಅಷ್ಟಕ್ಕೂ ಅಸಲಿಗೆ ಅಂದು ಆಗಿದ್ದೇನು..?
ಉಡುಪಿ, ಅಕ್ಟೋಬರ್ 28: ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಅಜೆಕಾರಿನಲ್ಲಿ ನಡೆದ ಆ ಒಂದು ಕೊಲೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಪ್ರೀತಿಯಾಗಿದ್ದ ಯುವಕನಿಗಾಗಿ ಮಹಿಳೆಯೊಬ್ಬಳು ಗಂಡನ ಜೀವವನ್ನೇ ತೆಗೆದೆ ಘಟನೆ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ.
ಚಿಕಿತ್ಸೆ ಮುಗಿಸಿ ಮನೆಗೆ ಕರೆದುಕೊಂಡು ಬಂದು ಈಗಷ್ಟೇ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದ ವ್ಯಕ್ತಿಯನ್ನು ಪತ್ನಿಯೇ ಮಲಗಿದಲ್ಲೇ ಹೆಣವಾಗಿಸಿದ ಕಥೆ ತಲ್ಲಣ ಹೆಚ್ಚಿಸಿದೆ. ಈ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ. ಬಾಲಕೃಷ್ಣ ಪೂಜಾರಿ ಕೊಲೆಯಾದ ಪತಿಯಾಗಿದ್ದು, ದಿಲೀಪ್ ಹೆಗ್ಡೆ ಹಾಗೂ ಬಾಲಕೃಷ್ಣ ಪೂಜಾರಿ ಪತ್ನಿ ಪ್ರತಿಮಾ ಕೊಲೆಯ ಆರೋಪಿಗಳಾಗಿದ್ದಾರೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಅಜಕಾರಿನ ಬಾಲಕೃಷ್ಣ ಪೂಜಾರಿ, ಕೋವಿಡ್‌ಗೂ ಮುನ್ನ ಮುಂಬೈನಲ್ಲಿ ಬೇರೆಯವರ ಹೋಟೆಲ್‌ನಲ್ಲಿ ಮೆನೇಜರ್ ಆಗಿ ದುಡಿಯುತ್ತಿದ್ದರು. ಕೋವಿಡ್ ನಂತರ ಊರಿಗೆ ಬಂದು ನಿಟ್ಟೆ ಕಾಲೇಜ್‌ನಲ್ಲಿ ಕ್ಯಾಂಟೀನ್ ತೆರೆದು ನಡೆಸುತ್ತಿದ್ದರು. ಜೊತೆಗೆ ಹೆಂಡತಿ ಪ್ರತಿಮಾಗೆ ಅಜೆಕಾರು ಪೇಟೆಯಲ್ಲಿ ಬ್ಯೂಟಿ ಪಾರ್ಲರ್ ಹಾಕಿಸಿಕೊಟ್ಟಿದ್ದರು.
ಅಜೆಕಾರಿಗೆ ವಾಪಸ್ ಬಂದ ನಂತರ ಹಿರಿಯರ ಮನೆಗೆ ಬದಲಾಗಿ, ಹೊಸದಾಗಿ ಮನೆ ಕಟ್ಟಿಸಿದ್ದರು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಹೊಸ ಮನೆಯ ಗೃಹಪ್ರವೇಶ ಆಗಿತ್ತು. ಪ್ರತಿಮಾ ಬ್ಯೂಟಿಷನಾಗಿದ್ದ ಕಾರಣ ಚೆನ್ನಾಗಿ ಡ್ರೆಸ್ ಮಾಡಿಕೊಂಡು ರೀಲ್ಸ್ ಮಾಡುತ್ತಿದ್ದಳು. ಈಕೆಗೆ ಸೋಶಿಯಲ್ ಮೀಡಿಯಾದಲ್ಲಿ ದಿಲೀಪ್ ಹೆಗ್ಡೆ ಪರಿಚಯವಾಗಿತ್ತು. ಈತ ಕಾರ್ಕಳ ಪೇಟೆಯಲ್ಲಿರುವ ಬಾಲಾಜಿ ಎಂಬ ಲಾಡ್ಜ್ ಕಮ್ ರೆಸ್ಟೋರೆಂಟ್ ಮಾಲೀಕರ ಮಗ ಎನ್ನಲಾಗಿದೆ.

ಇನ್ಸ್ಟಾಗ್ರಾಮ್‌ನಲ್ಲಿ ಇಬ್ಬರ ಪರಿಚಯವಾಗಿದ್ದು, ತನಗಿಂತ ಎಂಟು ವರ್ಷ ಹಿರಿಯವಳಾದ ಪ್ರತಿಮಾಳನ್ನು ದಿಲೀಪ್ ಪ್ರೀತಿಸುತ್ತಿದ್ದನಂತೆ. ಇಬ್ಬರು ಒಟ್ಟಿಗೆ ಓಡಾಡುವುದನ್ನು ಊರ ಜನ ಗಮನಿಸಿ ಪ್ರತಿಮಾ ಕುಟುಂಬಸ್ಥರಿಗೂ ಹಾಗೂ ಪತಿಗೂ ವಿಚಾರ ತಿಳಿಸಿದ್ದರಂತೆ. ಒಂದೆರಡು ಬಾರಿ ಪೊಲೀಸ್ ಠಾಣೆಗೂ ಈ ವಿಚಾರ ಹೋಗಿತ್ತು. ಆದರೆ ಬಾಲಕೃಷ್ಣ ಹೆಂಡತಿಯನ್ನು ಬಿಟ್ಟುಕೊಡದೇ ಮತ್ತೆ ಮನೆಗೆ ಕರೆತಂದಿದ್ದರು.
ತಮ್ಮ ಪ್ರೀತಿಗೆ ಅಡ್ಡಗಾಲಾಗಿರುವ ಬಾಲಕೃಷ್ಣ ಪೂಜಾರಿಯನ್ನು ಮುಗಿಸಲು ದಿಲೀಪ್ ಹಾಗೂ ಪ್ರತಿಮಾ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಮೊದಲು ಆಹಾರದಲ್ಲಿ ಸ್ವಲ್ಪ ಸ್ವಲ್ಪವೇ ವಿಷವುಣಿಸಿ, ಆರೋಗ್ಯ ಕೆಡುವಂತೆ ಮಾಡುತ್ತಾರೆ. ಪದೇ ಪದೇ ವಿಷಪ್ರಾಶನದಿಂದ ಬಾಲಕೃಷ್ಣ ಕಿಡ್ನಿ ಲಿವರ್ ಹಾಳಾಗಿರುತ್ತದೆ. ನರಗಳಲ್ಲಿ ಪದೇ ಪದೇ ಸಮಸ್ಯೆ ಕಂಡು ಬರುತ್ತದೆ.
ಬಳಿಕ ಸಂಪೂರ್ಣ ಆರೋಗ್ಯ ಹದಗೆಟ್ಟು ಬಾಲಕೃಷ್ಣ ಆಸ್ಪತ್ರೆ ಸೇರುತ್ತಾರೆ. ಮೊದಲು ಕಾರ್ಕಳದ ಕೆಎಂಸಿ ಕ್ಯಾಂಪ್‌ನಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಹೀಗೆ ನಾಲ್ಕೈದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊನೆಯಲ್ಲಿ ಕುಟುಂಬಸ್ಥರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ತಕ್ಕಮಟ್ಟಿಗೆ ಆರೋಗ್ಯ ಸುಧಾರಿಸಿಕೊಂಡು ವಾಪಸ್ ಅಜೆಕಾರಿಗೆ ಅವರನ್ನು ಕೆಲವು ದಿನಗಳ ಹಿಂದಷ್ಟೇ ಕರೆತರಲಾಗಿತ್ತು.
ಪತಿ ಚೇತರಿಸಿಕೊಳ್ಳುತ್ತಿದ್ದಂತೆ ಮತ್ತೆ ಚುರುಕಾದ ಪ್ರತಿಮಾ, ದಿಲೀಪ್ ಹೆಗ್ಡೆಯನ್ನು ನಡುರಾತ್ರಿ ಫೋನ್ ಮಾಡಿ ಕರೆಸಿಕೊಂಡು ದಿಂಬಿನ ಮೂಲಕ ಬಾಲಕೃಷ್ಣ ಪೂಜಾರಿ ಅವರ ಉಸಿರು ನಿಲ್ಲಿಸಿದ್ದಾರೆ ಎನ್ನಲಾಗಿದೆ. ಇತ್ತ ಪತಿ ಸಾಯುತ್ತಿದ್ದಂತೆ ಪಕ್ಕದಲ್ಲಿ ಇರುವ ಸಂಬಂಧಿಕರ ಮನೆಗೆ ಕರೆ ಮಾಡಿ ಸ್ವತಃ ಪ್ರತಿಮಾಳೇ ವಿಚಾರ ತಿಳಿಸಿದ್ದಾಳೆ.
ಬಾಲಕೃಷ್ಣ ಪೂಜಾರಿ ಅಂತ್ಯಕ್ರಿಯೆ ಬಳಿಕ ಐದನೇ ದಿನಕ್ಕೆ, ಶವ ಸಂಸ್ಕಾರ ನಡೆದ ಸ್ಥಳದಲ್ಲಿ ಒಂದು ಪೂಜೆ ನಡೆಸಲಾಗಿದೆ. ಇಲ್ಲಿಗೆ ಹೋಗಿ ಬಂದ ಬಳಿಕ ಪ್ರತಿಮಾಗೆ ಏನಾಯ್ತೋ ಗೊತ್ತಿಲ್ಲ ತನ್ನ ಸಹೋದರಿಯನ್ನು ಕರೆದು ಎಲ್ಲಾ ಸತ್ಯವನ್ನು ಬಾಯಿಬಿಟ್ಟಿದ್ದಾಳೆ. ಅಕ್ಕನ ಕ್ರೌರ್ಯ ಕಂಡು ಗಾಬರಿಯಾಗಿ ಸಹೋದರಿ ಗೋಳಾಡಿ ಅಣ್ಣ ಸಂದೀಪ್‌ನನ್ನು ಕರೆದು ವಿಚಾರ ತಿಳಿಸಿದ್ದಾಳೆ. ಮೊದಲೇ ಪ್ರತಿಮಾಳ ಮೇಲೆ ಸಂಶಯವಿದ್ದ ಸಂದೀಪ್ ಆಕೆ ಹೇಳಿದ ಎಲ್ಲಾ ವಿಚಾರವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಕಾರ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಸ್ಥಳ ಮಹಜರು ನಡೆಸಿ ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications