ಬ್ರಹ್ಮಾವರ: ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಟ್ವಿಸ್ಟ್, ಆ ಒಂದು 'ಪೆಟ್ಟಿಗೆ'ಗಾಗಿ ನಡೀತಾ ಹತ್ಯೆ..?
ಉಡುಪಿ, ಮಾರ್ಚ್ 18: ಉಡುಪಿಯಲ್ಲಿ ನಡೆದ ದಲಿತ ಯುವಕನ ಹತ್ಯೆ ಪ್ರಕರಣ ಸಂಬಂಧ ಈವರೆಗೂ ಯಾವುದೇ ಆರೋಪಿ ಬಂಧನವಾಗಿಲ್ಲ. ಘಟನೆ ನಡೆದು ಎರಡು ವಾರ ಕಳೆಯುತ್ತಾ ಬಂದರೂ ಒಂಟಿಯಾಗಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದೇಕೆ ಎನ್ನುವ ಕಾರಣ ನಿಗೂಢವಾಗಿಯೇ ಉಳಿದು ಹೋಗಿದೆ.
ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ ಮಾರ್ಚ್ 2ರ ರಾತ್ರಿ ತನ್ನದೇ ಮನೆಯಲ್ಲಿ ನಡೆದ ಕೃಷ್ಣ ಎಂಬ ಯುವಕನ ಹತ್ಯೆ ಪ್ರಕರಣ ನಡೆದು ಎರಳು ವಾರ ಕಳೆದಿದೆ. ಇರುವ ಅಲ್ಪ ಸ್ವಲ್ಪ ಸಾಕ್ಷಿಗಳ ಎಳೆಯ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯ ಮನೆಯೊಳಗಿದ್ದ ಟ್ರಂಕ್ ಕಾಣೆಯಾಗಿದೆ ಎಂದು ಕುಟುಂಬಿಕರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಮೃತ ಕೃಷ್ಣನ ಮೊಬೈಲ್ ಅನ್ನು ಪೋಲಿಸರು ವಶಕ್ಕೆ ಪಡೆದು ಪ್ರಾಥಮಿಕ ತನಿಖೆಯನ್ನು ನಡೆಸಿ, ಸಿಡಿಆರ್ ಪಡೆದಿದ್ದಾರೆ. ಅದರಲ್ಲಿ ಹೆಚ್ಚಿನ ಮಾಹಿತಿಗಳು ದೊರಕದ ಹಿನ್ನಲೆಯಲ್ಲಿ ಮೊಬೈಲ್‌ಅನ್ನು ಬೆಂಗಳೂರಿನ ಎಫ್.ಎಸ್.ಎಲ್ ಗೆ ಕಳುಹಿಸಲಾಗಿದೆ. ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಹಾಸನದ ಜಿಲ್ಲೆಯ ಬೇಲೂರು ಬಳಿ ಅಕ್ರಮ ಪಿಸ್ತೂಲು ಹೊಂದಿದ್ದ ವ್ಯಕ್ತಿಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಬ್ರಹ್ಮಾವರದಲ್ಲಿ ನಡೆದ ಹತ್ಯೆಗೂ, ಈ ವ್ಯಕ್ತಿಗಳಿಗೂ ಸಂಬಂಧ ಇದೆಯಾ ಎಂದು ಪರಿಶೀಲಿಸಲು ಒಂದು ತಂಡ ಹಾಸನಕ್ಕೆ ತೆರಳಿದ್ದು, ಮತ್ತೊಂದು ತಂಡ ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ. ಕೃಷ್ಣನ ಹೆಂಡತಿ ಮನೆಯಲ್ಲಿದ್ದ ಒಂದು ಟ್ರಂಕ್ ಕಾಣೆಯಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಪೋಲಿಸರು ಟಂಕ್‌ಗೂ ಹತ್ಯೆಗೂ ಸಂಬಂಧ ಇದೆಯಾ ಎನ್ನುವ ಆಯಾಮದಲ್ಲಿ ತನಿಖೆ ಆರಂಭಿಸಿದ್ದಾರೆ.
ಆರೋಪಿಗಳು ಕೃಷ್ಣನನ್ನು ಗುಂಡು ಹಾರಿಸಿ ಕೊಂದು ಟ್ರಂಕ್ ತೆಗೆದುಕೊಂಡು ಹೋಗಿರಬಹುದೇ..? ಅಥವಾ ಘಟನೆಗೂ ಮುನ್ನವೇ ಟ್ರಂಕ್ಅನ್ನು ಕೃಷ್ಣನೇ ಮಾರಿದ್ದಾನೋ. ಅಥವಾ ಸ್ಥಳಾಂತರಿಸಿದ್ದನೇ ಎಂಬ ಆಯಾಮದಲ್ಲೂ ಕೂಡ ಇಲಾಖೆ ತನಿಖೆಯನ್ನು ನಡೆಸುತ್ತಿದೆ.
ಸದ್ಯ ಬ್ರಹ್ಮಾವರದಲ್ಲಿ ನಡೆದ ಶೂಟೌಟ್ ಪ್ರಕರಣ ಸಂಬಂಧಿಸಿ ತನಿಖೆ ಪ್ರಗತಿಯಲ್ಲಿದೆ. ಎಲ್ಲಾ ಆಯಾಮದಲ್ಲೂ ತನಿಖೆಯನ್ನು ಇಲಾಖಾ ತಂಡ ನಡೆಸುತ್ತಿದೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಎಸ್‌ಪಿ ಡಾ| ಅರುಣ್ ಮಾಹಿತಿ ನೀಡಿದ್ದಾರೆ. ಆದರೆ ರೋಪಿಗಳು ಪತ್ತೆಯಾಗದೆ ಇರುವ ಕಾರಣ ದಲಿತ ಸಂಘಟನೆಗಳು ಆಕ್ರೋಶಗೊಂಡಿದ್ದು, ಶೀಘ್ರವಾಗಿ ಆರೋಪಿಗಳನ್ನು ಪತ್ತೆ ಹಚ್ಚದೆ ಇದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications