ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ; ತೀರ್ಪು ಮುಂದೂಡಿದ ಕೋರ್ಟ್
ಉಡುಪಿ, ಮೇ 31; ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ತೀರ್ಪನ್ನು ಜಿಲ್ಲಾ ನ್ಯಾಯಾಲಯ ಮುಂದೂಡಿ ಆದೇಶ ಹೊರಡಿಸಿದೆ. ಭಾಸ್ಕರ ಶೆಟ್ಟಿ ಪತ್ನಿ, ಪುತ್ರ ಈ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.
ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ ಪ್ರಿಯಕರ ಮತ್ತು ಪುತ್ರನ ಜೊತೆ ಸೇರಿ ಗಂಡನನ್ನು ಕೊಂದು, ಹೋಮಕುಂಡದಲ್ಲಿ ಹಾಕಿ ಸುಟ್ಟ ಪ್ರಕರಣವಿದು. ರಾಜ್ಯಾದ್ಯಂತ ಈ ಕೊಲೆ ಪ್ರಕರಣ ಭಾರೀ ಸಂಚಲನ ಮೂಡಿಸಿತ್ತು.
ಪ್ರಕರಣದ ತೀರ್ಪನ್ನು ಮುಂದೂಡಿ ಜಿಲ್ಲಾ ಸತ್ರ ನ್ಯಾಯಾಧೀಶ ಸುಬ್ರಮಣ್ಯ ಸೋಮವಾರ ಆದೇಶ ಹೊರಡಿಸಿದ್ದಾರೆ. ಜೂನ್ 8ರಂದು ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಹಾಗೂ ಸಾಕ್ಷ್ಯ ನಾಶದ ಆರೋಪಿ ರಾಘವೇಂದ್ರ ಹಾಜರಾಗಲು ಆದೇಶ ನೀಡಲಾಗಿದೆ.

ಕೊಲೆ ಪ್ರಕರಣ ಆರೋಪಿಗಳಾದ ನವನೀತ್ ಶೆಟ್ಟಿ ಹಾಗೂ ನಿರಂಜನ್ ಜೈಲಿನಲ್ಲಿದ್ದಾರೆ. ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
2016ರ ಜುಲೈ ತಿಂಗಳಲ್ಲಿ ಈ ಭೀಕರ ಕೊಲೆ ನಡೆದಿತ್ತು. ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಮತ್ತು ಪ್ರಿಯಕರ ನಿರಂಜನ್ ಜೊತೆ ಸೇರಿ ಭಾಸ್ಕರ ಶೆಟ್ಟಿಯನ್ನು ಮನೆಯಲ್ಲೇ ಹತ್ಯೆ ಮಾಡಿದ್ದರು. ಕಾರಿನಲ್ಲಿ ಪ್ರಿಯಕರನ ಮನೆ ನಂದಳಿಕೆಗೆ ಶವವನ್ನು ತೆಗೆದುಕೊಂಡು ಹೋಗಿ ಹೋಮಕುಂಡದಲ್ಲಿ ಶವವನ್ನು ಸುಟ್ಟು ಹಾಕಿದ್ದರು.












Click it and Unblock the Notifications