ಭಾರತ್ ಬಂದ್: ಕೃಷ್ಣನಗರಿಯಲ್ಲಿ ಯಾವುದೇ ಪರಿಣಾಮವಿಲ್ಲ
ಉಡುಪಿ, ಡಿಸೆಂಬರ್ 8: ಕರ್ನಾಟಕ ಬಂದ್, ಭಾರತ್ ಬಂದ್‌ಗೆ ಕರಾವಳಿಯಲ್ಲಿ ಭಾಗದಲ್ಲಿ ಯಾವತ್ತೂ ನೀರಸ ಪ್ರತಿಕ್ರಿಯೆ ಕಟ್ಟಿಟ್ಟ ಬುತ್ತಿ ಎಂದೇ ಹೇಳಬಹುದು. ಮಂಗಳವಾರ ಕೂಡ ರೈತ ಸಂಘಟನೆಗಳು ಮತ್ತು ಕೆಲವು ವಿರೋಧ ಪಕ್ಷಗಳು ನೀಡಿದ್ದ ಭಾರತ್ ಬಂದ್ ಕರೆಗೆ ಕೃಷ್ಣನಗರಿ ಉಡುಪಿಯ ಜನತೆ ಕ್ಯಾರೇ ಎನ್ನಲಿಲ್ಲ.
ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕರೆ ನೀಡಿರುವ ಭಾರತ್ ಬಂದ್‌ಗೆ ಉಡುಪಿಯಲ್ಲಿ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ.
ಭಾರತ್ ಬಂದ್‌ಗೆ ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಂದಿನಂತೆ ಬೆಳಿಗ್ಗಿನಿಂದಲೇ ಉಡುಪಿ ನಗರದ ಜನ ತಮ್ಮ ಮಾಮೂಲಿ ಕೆಲಸ ಕಾರ್ಯಗಳಿಗೆ ತೆರಳಿದರು. ಅಂಗಡಿ ಮುಂಗಟ್ಟುಗಳು, ಬಸ್ ಗಳು ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ವಿರೋಧ ಪಕ್ಷಗಳೂ ಮಧ್ಯಾಹ್ನದ ತನಕ ಯಾವುದೇ ಪ್ರತಿಭಟನೆಗಳನ್ನು ಮಾಡಿದ ವರದಿಗಳಿಲ್ಲ.

ಈತನಕ ಯಾವುದೇ ಸಂಘಟನೆಗಳು ಪ್ರತಿಭಟನೆಯಾಗಲೀ, ಬಂದ್ ಆಗಲೀ ನಡೆಸಲಿಲ್ಲ. ಸಂಜೆಯ ವೇಳೆಗೆ ಎಡಪಕ್ಷ ಹಾಗೂ ಕಾಂಗ್ರೆಸ್ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆಯಾದರೂ, ಅದು ಕೇವಲ ಸಾಂಕೇತಿಕ ಪ್ರತಿಭಟನೆಯಾಗಿರಲಿದೆ.

ಗಮನಾರ್ಹ ಸಂಗತಿ ಎಂದರೆ ಎರಡು ದಿನಗಳ ಹಿಂದೆ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೂ ಇಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.












Click it and Unblock the Notifications