ಉಡುಪಿ ಬಿಜೆಪಿಯಲ್ಲಿ ಬಿರುಗಾಳಿ: ಕೆಲವರು ಸಾರಾಯಿ ಬಿಟ್ಟವರ ತರ ಆಡ್ತಿದ್ದಾರೆ ಎಂದ ಬಿ.ಎಲ್ ಸಂತೋಷ್
ಉಡುಪಿ, ಮೇ 31: ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಾಜಿ ಶಾಸಕ ರಘುಪತಿ ಭಟ್ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಂಡಾಯದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಜಿಲ್ಲಾ ಬಿಜೆಪಿಯಲ್ಲಿ ಬಿರುಗಾಳಿ ಎದ್ದಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಉಡುಪಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಿಜೆಪಿ ಪಕ್ಷ ಟಿಕೆಟ್ ನೀಡುತ್ತದೆ ಎಂದು ರಘುಪತಿ ಭಟ್ ಲೆಕ್ಕಾಚಾರ ಹಾಕಿದ್ದರು. ಆದರೆ ಪಕ್ಷ ಹೊಸಬರಿಗೆ ಮಣೆ ಹಾಕುವ ನಿಟ್ಟಿನಲ್ಲಿ, ರಘುಪತಿ ಭಟ್ ಅವರ ಗರಡಿಯಲ್ಲಿಯೇ ಪಳಗಿದ ಮೊಗವೀರ ಸಮುದಾಯದ ಯಶ್ ಪಾಲ್ ಸುವರ್ಣ ಅವರಿಗೆ ಈ ಬಾರಿ ಉಡುಪಿಯ ಶಾಸಕನಾಗಲು ಅವಕಾಶ ಮಾಡಿಕೊಟ್ಟಿತ್ತು.

ಇದರಿಂದ ರಘುಪತಿ ಭಟ್ ಅವರು ಬೇಸರದಿಂದ ಇದ್ದರು, ಮುಂದೆ ಬರುವ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷ ತನಗೆ ಟಿಕೆಟ್ ನೀಡಬಹುದು ಎನ್ನುವ ಆಸೆಯಲ್ಲಿ ಹೊಸ ಪದವೀಧರ ಮತದಾರರನ್ನು ಸೇರ್ಪಡೆಸುವ ನಿಟ್ಟಿನಲ್ಲಿ ರಘುಪತಿ ಭಟ್ ಹಗಲಿರುಳು ಶ್ರಮಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಪಕ್ಷ ಡಾ. ಧನಂಜಯ್ ಸರ್ಜಿ ಅವರಿಗೆ ಟಿಕೆಟ್ ನೀಡಲಾಯಿತು.
ಇದರಿಂದ ಮನನೊಂದ ರಘುಪತಿ ಭಟ್ ಈ ಬಾರಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು, ಉಡುಪಿ ಜಿಲ್ಲಾ ಬಿಜೆಪಿಯಲ್ಲಿ ಬಿರುಕು ಮೂಡಲು ಕಾರಣವಾಗಿದೆ. ಈ ಅಸಮಾಧಾನ ಕಾರ್ಯಕರ್ತರ ಗೊಂದಲ ನಿವಾರಣೆಗಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಉಡುಪಿಗೆ ಆಗಮಿಸಿದ್ದಾರೆ.

ಉಡುಪಿಯ ಕಿದಿಯೂರು ಸಭಾಂಗಣದಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವ ಸಿದ್ಧತೆಯ ಘಟನೆ ಆಗಮಿಸಿದ ಬಿ.ಎಲ್ ಸಂತೋಷ್, ಕಾರ್ಯಕರ್ತರಿಗೆ ಘಟನಾಯಕರಿಗೆ ಪಕ್ಷ ನಿಷ್ಠೆಯ ಪಾಠ ಮಾಡಿದ್ದಾರೆ. ಕೆಲವರು ಅಧಿಕಾರ ಇಲ್ಲದೆ ಗುಟ್ಕಾ , ಸಾರಾಯಿ ಬಿಟ್ಟವರ ತರ ಆಡುತ್ತಿದ್ದಾರೆ. ಒಬ್ಬರಿಗೆ ಟಕೆಟ್ ಕೊಡಬೇಕು ಎಂದರೆ ನಾವೆಲ್ಲಿ ಹೋಗಬೇಕು. ಅಧಿಕಾರದಿಂದ ಇಳಿದು ಸರಿಯಾಗಿ ಒಂದು ವರ್ಷ ಆಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ರಘುಪತಿ ಭಟ್ ಹಾಗೂ ಈಶ್ವರಪ್ಪ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ದೇಶದಲ್ಲಿ ಬಿಜೆಪಿ ಶಕ್ತಿಯುತವಾಗುತ್ತಾ ಹೋಗುತ್ತಿದೆ.
ರಾಮಮಂದಿರ, ಹಿಂದೂ ಹಿತ, ಸ್ಥಳೀಯ ಸಮಸ್ಯೆಗೆ ನೀವು ಬಂಡಾಯ ಎದ್ದಿದ್ದೀರಾ?. ನಿಮ್ಮ ಆತ್ಮಸಾಕ್ಷಿ ಎಷ್ಟಿದೆ ಎಂದು ಎಲ್ಲರ ಮುಂದೆ ಪ್ರದರ್ಶನ ಆಗಿದೆ. ಸಾರ್ವಜನಿಕ ಹಿತ ಮತ್ತು ವ್ಯಕ್ತಿಗತ ಸ್ವಾರ್ಥದಿಂದ ನಿರ್ಧಾರ ತೆಗೆದುಕೊಂಡಿದ್ದೀರಿ. ಸಮಾಜ ಹಿತ ಮತ್ತು ಸಂಘಟನೆಯೇ ನಮ್ಮ ಧರ್ಮ. ಮೂರು ದಿನಗಳ ಒಳಗೆ ಬಿಟ್ಟು ಹೋದವರನ್ನು ಪಕ್ಷಕ್ಕೆ ಕರೆದುಕೊಂಡು ಬನ್ನಿ. ಇದು ಪವಾಡ ಪುರುಷರ ಕಾಲ ಅಲ್ಲ. ಸಂಘಟನೆಗೆ ಮಾತ್ರ ಶಕ್ತಿ, ಬಹುಮತದಿಂದ ಮಾತ್ರ ನಿರ್ಧಾರಗಳು ಸಾಧ್ಯ. ಅಧಿಕಾರದ ಆಸೆಯಿಂದ ಹೋಗುವವರ ಜೊತೆ ಗೆರೆದಾಟಿ ಹೋಗಬೇಡಿ ಎನ್ನುವ ಮೂಲಕ ಬಂಡಾಯ ಹೊರಟವರಿಗೆ ಬಿ.ಎಲ್ ಸಂತೋಷ್ ಬಿಸಿ ಮುಟ್ಟಿಸಿದ್ದಾರೆ.












Click it and Unblock the Notifications