ಉಡುಪಿಯಲ್ಲಿ ಮತ್ತೊಂದು ವಂಚಕರ ಜಾಲ: ಎಟಿಎಂಗೆ ಬರುವ ಗ್ರಾಹಕರೇ ಇವರ ಟಾರ್ಗೆಟ್
ಉಡುಪಿ, ಜನವರಿ 11: ಎಟಿಎಂನಿಂದ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಖದೀಮರು ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ಆರೋಪಿಗಳಿಂದ ವಂಚನೆಗೊಳಗಾದವರು ಒಂದಲ್ಲ ಎರಡಲ್ಲ ಬರೋಬ್ಬರಿ ಎರಡು ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.
ಜನವರಿ 09 ಮಂಗಳವಾರ ಬೆಳಗ್ಗೆ 10 ಘಂಟೆ ಸುಮಾರಿಗೆ ಶಿರೂರು ಮಾರ್ಕೆಟ್ ಬಳಿ ಇರುವ ಕೆನೆರಾ ಬ್ಯಾಂಕ್ ಎಟಿಎಂನಲ್ಲಿ ಚೈತ್ರಾ ಎನ್ನುವವರಿಗೆ, 10:15ರ ಸುಮಾರಿಗೆ ಶಿರೂರು ಅರ್ಬನ್ ಬ್ಯಾಂಕಿನ ಎಟಿಎಂನಲ್ಲಿ ಬಲ್ಕೀಸ್ ಬಾನು ಹಾಗೂ ಸ್ಟೇಟ್ ಬ್ಯಾಂಕ್ ಆಫ ಇಂಡಿಯಾ ಎಟಿಎಂನಲ್ಲಿ ಸಳ್ವಾಡಿ ಗ್ರಾಮದ ಚಂದ್ರಶೇಖರ್ ಎನ್ನುವವರಿಗೆ ಖದೀಮರು ವಂಚಿಸಿದ್ದಾರೆ. ಒಂದೇ ದಿನ ಜಿಲ್ಲೆಯ ಮೂರು ಭಾಗದಲ್ಲಿ ಒಂದೇ ರೀತಿಯ ಘಟನೆ ನಡೆದಿದೆ.

ತಾವೂ ಗ್ರಾಹಕರಂತೆ ನಟಿಸಿ ಎಟಿಎಂ ಕೇಂದ್ರದೊಳಗೆ ಬರುವ ಅಪರಿಚಿತರು ಎಟಿಎಂನಲ್ಲಿ ಹಣ ಪಡೆಯಲು ಸಾಧ್ಯವಾಗದ ಚೈತ್ರಾ, ಬಲ್ಕೀಸ್ ಬಾನು ಹಾಗೂ ಚಂದ್ರಶೇಖರ್ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಕಾರ್ಡ್ ಪಡೆದುಕೊಂಡಿದ್ದಾರೆ.
ಬಳಿಕ ಅದೇ ಸ್ಥಳದಲ್ಲಿ ಅವರಿಗೆ ತಿಳಿಯದಂತೆ ಕಾರ್ಡ್ ಬದಲಿಸಿಕೊಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸ್ವಲ್ಪ ಸಮಯದ ನಂತರ ಪರಿಶೀಲಿಸಿದಾಗ ಮೂರು ಜನರ ಎಟಿಎಂ ಕಾರ್ಡ್ ಬದಲಾಗಿರುವುದು ಕಂಡು ಬಂದಿದೆ.
ಕೂಡಲೇ ಸಂತ್ರಸ್ತರು ಸ್ಥಳೀಯ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಚಂದ್ರಶೇಖರ್ ಖಾತೆಯಿಂದ 2 ಲಕ್ಷ ರೂ, ಚೈತ್ರಾರ ಖಾತೆಯಿಂದ 21 ಸಾವಿರ ರೂ ಹಾಗೂ ಬಲ್ಕೀಸ್ ಬಾನು ಖಾತೆಯಿಂದ 5 ಸಾವಿರ ರೂಪಾಯಿಯನ್ನು ವಂಚಕರು ಡ್ರಾ ಮಾಡಿ ಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಬೈಂದೂರು ತಾಲೂಕಿನ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನು ಆರೋಪಿಗಳು ಉರ್ದು ಮಾತನಾಡುತ್ತಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications