ಎರಡು ಹೊತ್ತು ಕೊಡಿ ನಮಗೆ ಉಚಿತ 'ನೈಂಟಿ' : ಉಡುಪಿಯಲ್ಲಿ ಸರ್ಕಾರಕ್ಕೆ ಮದ್ಯ ಪ್ರಿಯರ ಆಗ್ರಹ
ಉಡುಪಿ, ಜುಲೈ 11: ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್, ಗೃಹ ಲಕ್ಷ್ಮೀ ಯೋಜನೆ ಅಡಿ ಹಣ, ಇನ್ನೂರು ಯುನಿಟ್ ವಿದ್ಯುತ್ ಫ್ರೀ ಜೊತೆಗೆ ಅಕ್ಕಿನೂ ಫ್ರೀಯಾಗಿ ನೀಡುತ್ತಿದೆ. ಆದರೆ ಸರ್ಕಾರ ನಮಗೇನು ನೀಡಿದೆ ಎಂದು ಪ್ರಶ್ನಿಸಿ ಉಡುಪಿಯಲ್ಲಿ ಮದ್ಯ ಪ್ರಿಯರು ಪ್ರತಿಭಟನೆ ನಡೆಸಿದ್ದಾರೆ.
ಬಜೆಟ್‌ನಲ್ಲಿ ಮದ್ಯದ ದರ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಉಡುಪಿ ನಾಗರಿಕ ಸಮಿತಿಯಿಂದ ಮದ್ಯ ಪ್ರಿಯರೊಂದಿಗೆ ಉಡುಪಿಯ ಚಿತ್ತರಂಜನ್ ಸರ್ಕಲ್ ನಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ರಸ್ತೆಯಲ್ಲಿ ಮದ್ಯದ ಬಾಟಲಿ ಇಟ್ಟು ಮದ್ಯ ಪ್ರಿಯರಿಗೆ ಹೂವಿನ ಹಾರ ಹಾಕಿ ಸನ್ಮಾನ ಮಾಡಿ, ಆರತಿ ಎತ್ತಿ ಪ್ರತಿಭಟನೆ ನಡೆಸಲಾಗಿದೆ.

ಮದ್ಯ ಪ್ರಿಯರು ಕುಡುಕರಲ್ಲ.. ಅವರು ಸರ್ಕಾರದ ಪ್ರಜೆಗಳು. ಸರ್ಕಾರದ ಉಚಿತ ಯೋಜನೆಗೆ ಹಣ ನಮ್ಮಿಂದಲೇ ಬರುವುದು. ಹೀಗಾಗಿ ನಮಗೆ ಮದ್ಯದ ಬೆಲೆ ಇಳಿಕೆ ಮಾಡಿ. ಇಲ್ಲದಿದ್ದರೆ ಬೆಳಗ್ಗೆ ನೈಂಟಿ, ಸಂಜೆ ನೈಂಟಿ ಉಚಿತವಾಗಿ ನೀಡಿ. ಯಾವುದೂ ಆಗದಿದ್ದರೆ ರಾಜ್ಯದಲ್ಲಿ ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಮದ್ಯ ಬಂದ್ ಮಾಡಿ ಇಲ್ಲ.. ಉಚಿತ ನೀಡಿ. ಇದರಿಂದ ಉಳಿದ ಹಣವನ್ನು ನಾವು ನಮ್ಮ ಹೆಂಡತಿ ಮಕ್ಕಳಿಗೆ ನೀಡುತ್ತೇವೆ. ನಮ್ಮ ಹೆಂಡತಿ, ಮಕ್ಕಳನ್ನು ನಾವೇ ಹಣ ಕೊಟ್ಟು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ, ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ನಡೆದ ಪ್ರತಿಭಟನೆ ನಡೆಸಿದ್ದಾರೆ.

ಇತ್ತೀಚಿಗಷ್ಟೇ ರಾಜ್ಯದ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಬಕಾರಿ ಸುಂಕವನ್ನು ಶೇ. 20ರಷ್ಟು ಹೆಚ್ಚಿಸಿ ಘೋಷಣೆ ಮಾಡಿದ್ದರು. ಹೀಗಾಗಿ ರಾಜ್ಯದಲ್ಲಿ ಮದ್ಯದ ಬೆಲೆ ಮತ್ತೆ ದುಬಾರಿಯಾಗಲಿದೆ. ಇದರೊಂದಿಗೆ ಅಬಕಾರಿ ಇಲಾಖೆಗೆ ಪ್ರಸಕ್ತ 2023- 24ನೇ ಹಣಕಾಸು ವರ್ಷದಲ್ಲಿ 36 ಸಾವಿರ ಕೋಟಿ ರೂ ಆದಾಯ ಸಂಗ್ರಹಣೆಗೆ ಸರ್ಕಾರ ಗುರಿ ನೀಡಿದೆ ಎನ್ನಲಾಗಿದೆ.












Click it and Unblock the Notifications