ಉಡುಪಿ ಶ್ರೀಕೃಷ್ಣಮಠ ಮತ್ತು ಮಠದ ಪೀಠಾಧಿಪತಿಗಳ ಹಿನ್ನೆಲೆ

Posted By:
Subscribe to Oneindia Kannada

ಪರಶುರಾಮನ ಸೃಷ್ಟಿಯ ಭಾಗ ಎಂದೇ ಕರೆಯಲ್ಪಡುವ ಹದಿಮೂರನೇ ಶತಮಾನದ ಪುರಾಣ ಪ್ರಸಿದ್ದ ದೇವಾಲಯಗಳಲ್ಲಿ ಉಡುಪಿ ಶ್ರೀಕೃಷ್ಣ ಮಠ ಕೂಡಾ ಒಂದು. ಸಮುದ್ರದಲ್ಲಿ ಸಿಕ್ಕ ಗೋಪಿಚಂದನ ಶಿಲೆಯ ಕಡಗೋಲು ಶ್ರೀಕೃಷ್ಣನ ವಿಗ್ರಹವನ್ನು ಆಚಾರ್ಯ ಮಧ್ವರು ಪ್ರತಿಷ್ಠಾಪಿಸಿದರು ಎನ್ನುವುದು ಪ್ರತೀತಿ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಆಚಾರ್ಯ ಮಧ್ವರು ಶ್ರೀಕೃಷ್ಣನ ಪೂಜೆ ನಿರ್ವಿಘ್ನವಾಗಿ ಸಾಗಲು ಅಷ್ಠಮಠಗಳನ್ನು ಸ್ಥಾಪಿಸಿ, ಎಂಟು ಮಠಾಧೀಶರನ್ನು ನೇಮಿಸಿದರು. ಹಾಗೆಯೇ, ಶ್ರೀಕೃಷ್ಣನ ಪೂಜಾ ಕೈಂಕರ್ಯವನ್ನು ಎರಡು ತಿಂಗಳಿಗೊಮ್ಮೆ ಬದಲಾಗುವಂತೆ ಎಂಟು ಮಠಗಳಿಗೆ ಹಸ್ತಾಂತರಿಸಿದರು.

ಉಡುಪಿಯ ಅಷ್ಟ ಮಠಗಳ ಹಿನ್ನೆಲೆ, ಆಚಾರ್ಯ ಮಧ್ವ ಹಾಗೂ ವಾದಿರಾಜರು

ಮುಂದಿನ ದಿನಗಳಲ್ಲಿ, ಎರಡು ತಿಂಗಳಿಗಿದ್ದ ಹಸ್ತಾಂತರ ಪದ್ದತಿಯನ್ನು ಸೋದೆ ವಾದಿರಾಜ ಗುರುಗಳು ಎರಡು ವರ್ಷಕ್ಕೆ ಬದಲಾಯಿಸಿದರು. ಅದುವೇ, ಎರಡು ವರ್ಷಕ್ಕೊಮ್ಮೆ ಜನವರಿ 18ರಂದು ನಡೆಯುವ ಪರ್ಯಾಯ ಮಹೋತ್ಸವ.

ಮಾಧ್ಯಮಗಳಿಗೆ ಮಾಧ್ವ ಬ್ರಾಹ್ಮಣನ ಪ್ರಶ್ನೆಗಳು, ಉತ್ತರಿಸಿ...

ಎಲ್ಲಾ ಮಠಗಳಿಗೂ ದ್ವಂದ್ವ ಮಠಗಳನ್ನೂ ನೇಮಿಸಲಾಗಿತ್ತು. ಪರ್ಯಾಯದ ಅವಧಿಯಲ್ಲಿ ಮಠದ ಪೂಜೆಗೆ ಏನಾದರೂ ತೊಂದರೆಯಾದಲ್ಲಿ, ದ್ವಂದ ಮಠದ ಶ್ರೀಗಳು ಪೂಜೆಯನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ಈ ಪದ್ದತಿಯನ್ನು ಜಾರಿಗೆ ತರಲಾಗಿತ್ತು.

ಕರಾವಳಿ ಚುನಾವಣಾ ಅಖಾಡದಲ್ಲಿನ್ನು 'ಯೋಗಿ ಮಾದರಿ' ರಾಜಕೀಯ

ಕನಕಗೋಪುರ, ಪಂಕ್ತಿ ಭೋಜನ, ಮಡೆಸ್ನಾನ, ಮಠದ ಸರಕಾರೀಕರಣ, ಮುಖ್ಯಮಂತ್ರಿಗಳು ಕೃಷ್ಣ ಮಠಕ್ಕೆ ಬರದೇ ಇರುವುದು.. ಹೀಗೆ ಉಡುಪಿ ಶ್ರೀಕೃಷ್ಣ ಮಠ ಮತ್ತು ಅಷ್ಠಮಠದ ಶ್ರೀಗಳು ಸದಾ ಸುದ್ದಿಯಲ್ಲಿರುತ್ತಾರೆ. ಈಗ ಶಿರೂರು ಶ್ರೀಗಳ ರಾಜಕೀಯ ಪ್ರವೇಶದ ನಿರ್ಧಾರ, ಅಷ್ಠಮಠದ ಶ್ರೀಗಳ ಬಗ್ಗೆ ಅವರು ಆಡಿದ್ದಾರೆ ಎನ್ನಲಾಗುತ್ತಿರುವ ವಿಡಿಯೋದಿಂದಾಗಿ, ಕೃಷ್ಣಮಠ ಮತ್ತು ಮಠದ ಪೀಠಾಧಿಪತಿಗಳು ಮತ್ತೆ ಸುದ್ದಿಯಲ್ಲಿದ್ದಾರೆ.

ಉಡುಪಿಯ ಅಷ್ಠಮಠಗಳ ಮಠಾಧೀಶರ ಬಗ್ಗೆ ಕಿರು ಪರಿಚಯ ಸ್ಲೈಡಿನಲ್ಲಿ...

ಪೇಜಾವರ ಅಧೋಕ್ಷಜ ಮಠ

ಪೇಜಾವರ ಅಧೋಕ್ಷಜ ಮಠ

ಪೇಜಾವರ ಅಧೋಕ್ಷಜ ಮಠದ ಹಿರಿಯ ಶ್ರೀಗಳಾದ ಶ್ರೀವಿಶ್ವೇಶತೀರ್ಥರು 1931ರಲ್ಲಿ ಶಿವಳ್ಳಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ಭಂಡಾರಕೇರಿ ಮಠಾಧೀಶರ ಸಮ್ಮುಖದಲ್ಲಿ ತನ್ನ ಎಂಟನೇ ವಯಸ್ಸಿನಲ್ಲೇ ಸನ್ಯಾಸ ದೀಕ್ಷೆ ಪಡೆದ ಪೇಜಾವರ ಶ್ರೀಗಳು, ಉಡುಪಿ ಮಠಗಳ ಪೈಕಿ ಹೆಚ್ಚು ಜನಪ್ರಿಯರು.

ವಿಶ್ವಹಿಂದೂ ಪರಿಷತ್ತಿನ ಮಾರ್ಗದರ್ಶಕರೂ ಆಗಿರುವ ಪೇಜಾವರ ಹಿರಿಯ ಶ್ರೀಗಳು, ಮಠದ ಉತ್ತರಾಧಿಕಾರಿಯಾಗಿ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ 1979ರಲ್ಲಿ ಸನ್ಯಾಸ ದೀಕ್ಷೆ ನೀಡಿದರು. 53ವರ್ಷದ ವಿಶ್ವಪ್ರಸನ್ನ ತೀರ್ಥರು ತಮ್ಮ 14ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು.

ಪೇಜಾವರ ಮಠದ ದ್ವಂದ್ವ ಮಠ ಕಾಣಿಯೂರು ಮಠ. ಪೇಜಾವರ ಹಿರಿಯ ಮತ್ತು ಕಿರಿಯ ಶ್ರೀಗಳು, ಮಠದ ಗುರುಪರಂಪರೆಯ 32 ಮತ್ತು 33ನೇ ಪೀಠಾಧಿಪತಿಗಳು. ಜನವರಿ 18, 2014ರಲ್ಲಿ ಐದನೇ ಬಾರಿಗೆ ಪೇಜಾವರ ಹಿರಿಯ ಶ್ರೀಗಳು ಪರ್ಯಾಯ ಪೀಠವನ್ನೇರಿದ್ದರು.

ಸೋದೆ ವಾದಿರಾಜ ಮಠ

ಸೋದೆ ವಾದಿರಾಜ ಮಠ

ಸೋದೆ ವಾದಿರಾಜ ಮಠದ (ಶ್ರೀವಿಷ್ಣುತೀರ್ಥ ಪೀಠ) ಹಾಲೀ ಪೀಠಾಧಿಪತಿ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು 14.06.2006ರಲ್ಲಿ ಸನ್ಯಾಸತ್ವ ಪಡೆದು ಸೋದೆ ವಾದಿರಾಜ ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. 24.03.1991ರಲ್ಲಿ ವೇದಮೂರ್ತಿ ಪಾಡಿಗಾರು ಶ್ರೀನಿವಾಸ ತಂತ್ರಿ ಮತ್ತು ವೇದಾವತಿ ದಂಪತಿಗಳಿಗೆ ಜನಿಸಿದ ಶ್ರೀಗಳು ತನ್ನ ಹದಿನೈದನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ತೆಗೆದುಕೊಂಡರು.

ಮಠದಲ್ಲಿ ಪೂಜಿಸಲ್ಪಡುವ ಭೂತರಾಜರ ಶ್ರೀರಕ್ಷೆ ಯಾವತ್ತೂ ಮಠದ ಮೇಲಿರುತ್ತದೆ ಎನ್ನುವುದು ಪ್ರತೀತಿ. ಹಾಗೆಯೇ, ಉತ್ತರಾಧಿಕಾರಿಯನ್ನಾಗಿ ನೇಮಿಸುವುದು ಹಾಲಿ ಮಠಾಧೀಶರಾಗಿ ಇರುವವರಿಗೆ ಇಹಲೋಕ ತ್ಯಜಿಸುವ ಮುನ್ಸೂಚನೆ ಎನ್ನುವುದು ಭಕ್ತ ವಲಯದಲ್ಲಿ ಕೇಳಿ ಬರುವ ಮಾತು.

ವಿಶ್ವವಲ್ಲಭ ತೀರ್ಥರು ಮಠದ ಪರಂಪರೆಯ 36ನೇ ಯತಿಗಳು. ಸೋದೆ ಮಠದ ಮೂಲ, ಶಿರಸಿಯಿಂದ ಸುಮಾರು ಹದಿನಾಲ್ಕು ಕಿ.ಮೀ ದೂರದಲ್ಲಿರುವ ಸೋಂದದಲ್ಲಿ. ಸೋದೆ ಮಠದ ದ್ವಂದ್ವ ಮಠ ಶಿರೂರು ಮಠ.

ಶ್ರೀವಿದ್ಯಾಧೀಶ ತೀರ್ಥ ಶ್ರೀಗಳು

ಶ್ರೀವಿದ್ಯಾಧೀಶ ತೀರ್ಥ ಶ್ರೀಗಳು

ಪಲಿಮಾರು ಮಠದ (ಹೃಷಿಕೇಷತೀರ್ಥ ಪೀಠ ಸಂಸ್ಥಾನ) ಗುರು ಪರಂಪರೆಯ ಮೂವತ್ತನೇ ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಗಳು 1956ರಲ್ಲಿ ಜನಿಸಿದರು. ತಮ್ಮ 23ನೇ ವಯಸ್ಸಿನಲ್ಲಿ ಅಂದರೆ, ಮಾರ್ಚ್ 1979ರಲ್ಲಿ ಸನ್ಯಾಸತ್ವ ಸ್ವೀಕರಿಸಿದ ಶ್ರೀಗಳು, ಮಹಾನ್ ವಿದ್ವತ್ ಹೊಂದಿರುವ ಅಷ್ಟಮಠಗಳ ಶ್ರೀಗಳ ಪೈಕೆ ಒಬ್ಬರು ಎನ್ನುವ ಹೆಸರಿದೆ.

ಸದ್ಯ ಪರ್ಯಾಯ ಪೂಜೆಯಲ್ಲಿರುವ ಪಲಿಮಾರು ಮಠದ ಮೂಲ, ಉಡುಪಿಯಿಂದು ಸುಮಾರು ಮೂವತ್ತು ಕಿಲೋಮೀಟರ್ ದೂರದ ಪಲಿಮಾರು ಎನ್ನುವ ಸ್ಥಳದಲ್ಲಿ. ಮಠದ 29ನೇ ಯತಿಗಳಾಗಿದ್ದ ವಿದ್ಯಾಮಾನ್ಯ ತೀರ್ಥರು ತಮ್ಮ ಉತ್ತಾರಾಧಿಕಾರಿಯಾಗಿ ವಿದ್ಯಾಧೀಶ ತೀರ್ಥ ಶ್ರೀಗಳಿಗೆ ಸನ್ಯಾಸತ್ಬ ನೀಡಿದ್ದರು.

ತಮ್ಮ ಎರಡನೇ ಪರ್ಯಾಯವನ್ನು ನಿರ್ವಹಿಸುತ್ತಿರುವ ವಿದ್ಯಾಧೀಶ ತೀರ್ಥ ಶ್ರೀಗಳು, ನಿತ್ಯ ಲಕ್ಷ ತುಳಸಿ ಅರ್ಚನೆ, ನಿತ್ಯ ಅಖಂಡ ಭಜನೆ, ಸುವರ್ಣ ಗೋಪುರ ಮುಂತಾದ ಯೋಜನೆಗಳನ್ನು ತಮ್ಮ ಪರ್ಯಾಯದ ಅವಧಿಯಲ್ಲಿ ಹಾಕಿಕೊಂಡಿದ್ದಾರೆ. ಪಲಿಮಾರು ಮಠದ ದ್ವಂದ್ವ ಮಠ ಅದಮಾರು ಮಠ.

ವಿಶ್ವಪ್ರಿಯ ತೀರ್ಥ ಶ್ರೀಪಾದರು

ವಿಶ್ವಪ್ರಿಯ ತೀರ್ಥ ಶ್ರೀಪಾದರು

ಅದಮಾರು ಮಠ (ಶ್ರೀನರಸಿಂಹ ತೀರ್ಥ ಪೀಠ) ಕಾಳೀಮರ್ಧನ ದೇವರ ಪಟ್ಟದ ವಿಗ್ರಹವನ್ನು ಹೊಂದಿರುವ ಮಠದ ಈಗಿನ ಪೀಠಾಧಿಪತಿಗಳು ವಿಶ್ವಪ್ರಿಯ ತೀರ್ಥ ಶ್ರೀಪಾದರು. ಇವರು ಮಠದ ಪರಂಪರೆಯ 33ನೇ ಪೀಠಾಧಿಪತಿಗಳು. ಇವರು ತಮ್ಮ ಕಿರಿ ವಯಸ್ಸಿನಲ್ಲಿ ಸನ್ಯಾಸತ್ವವನ್ನು ಸ್ವೀಕರಿಸದವರು.

ಈಶಪ್ರಿಯ ತೀರ್ಥ ಸ್ವಾಮೀಜಿ ಮಠದ ಪರಂಪರೆಯ 34ನೇ ಯತಿಗಳಾಗಿ 29 ವರ್ಷದ ಶ್ರೀಶ ಎಸ್ ಎನ್ನುವ ಇಂಜಿನಿಯರಿಂಗ್ ಪದವೀಧರರು ಮಠದ ಉತ್ತರಾಧಿಕಾರಿಯಾಗಿ ಗುರುವಾರ ಜೂನ್ 19ರಂದು ದೀಕ್ಷೆ ಸ್ವೀಕರಿಸಿದ್ದರು. ಇವರನ್ನು ಈಶಪ್ರಿಯ ತೀರ್ಥ ಸ್ವಾಮೀಜಿ ಎಂದು ಮರುನಾಮಕರಣ ಮಾಡಲಾಯಿತು.

ಉಡುಪಿಯಿಂದ 21 ಕಿ.ಮೀದೂರದಲ್ಲಿ ಮಠದ ಮೂಲ ಸಂಸ್ಥಾನವಿದೆ. ಅದಮಾರು ಮಠದ ದ್ವಂದ್ವ ಮಠ ಪಲಿಮಾರು ಮಠ. ಹಾಲೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಪ್ರವಚನ ಸ್ಪೆಷಲಿಸ್ಟ್ ಎಂದು ಹೆಸರುಗಳಿಸಿದ್ದಾರೆ.

ವಿದ್ಯಾವಲ್ಲಭ ತೀರ್ಥ ಶ್ರೀಗಳು

ವಿದ್ಯಾವಲ್ಲಭ ತೀರ್ಥ ಶ್ರೀಗಳು

ಕಾಣಿಯೂರು ಮಠ (ಶ್ರೀರಾಮತೀರ್ಥ ಪೀಠ) ಹಾಲಿ ಪರ್ಯಾಯ ಪೀಠಾಧಿಪತಿಗಳಾದ ವಿದ್ಯಾವಲ್ಲಭ ತೀರ್ಥರು ಮಠದ ಗುರು ಪರಂಪರೆಯ 30ನೇ ಪೀಠಾಧಿಪತಿಗಳು. ಇವರು ತಮ್ಮ ಹನ್ನೊಂದನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆದವರು.

ಆಚಾರ್ಯ ಮಧ್ವರು ಬದರಿಗೆ ಹೋಗುವ ಮುನ್ನ ಮಠದ ಪ್ರಥಮ ಯತಿಗಳಾದ ಶ್ರೀರಾಮತೀರ್ಥರಿಗೆ ಯೋಗನರಸಿಂಹ ದೇವರು ಮೂರ್ತಿಯನ್ನು ನೀಡಿದರು. ಅಲ್ಲಿಂದ ಯೋಗನರಸಿಂಹ ಮಠದ ಪಟ್ಟದದೇವರು. ವಿದ್ವಾನ್ ರಘುಪತಿ ಆರ್ಚಾರ್ಯ ಮತ್ತು ಮಾಲತಿ ಆಚಾರ್ಯ ದಂಪತಿಗಳ ಎರಡನೇ ಪುತ್ರರಾದ ಇವರ ಪೂರ್ವಾಶ್ರಮದ ಕೃಷ್ಣರಾಜ ಆಚಾರ್ಯ.

ಮೇ 8, 1992ರಲ್ಲಿ ಅಂದರೆ ತಮ್ಮ ಹದಿನೈದನೇ ವಯಸ್ಸಿನಲ್ಲಿ ಇವರು ಸನ್ಯಾಸದೀಕ್ಷೆ ತೆಗೆದುಕೊಂಡರು. ಉತ್ತರಾದಿ ಮಠದ ಸತ್ಯಪ್ರಮೋದ ತೀರ್ಥರ ಬಳಿ ದೈತ ಸಿದ್ದಾಂತದ ಬಗ್ಗೆ ಹೆಚ್ಚಿನ ಪಾಠವನ್ನು ಕಲಿತರು. ಎರಡು ಪರ್ಯಾಯ ಅವಧಿಯನ್ನು ಪೂರೈಸಿರುವ ವಿದ್ಯಾವಲ್ಲಭ ತೀರ್ಥರ ಕಾಣಿಯೂರು ಮಠದ ಮೂಲ, ಉಡುಪಿಯಿಂದ ಸುಮಾರು 120 ಕಿ.ಮೀ ದೂರದ ಕಾಣಿಯೂರು ಗ್ರಾಮದಲ್ಲಿ. ಮಠದ ದ್ವಂದ್ವ ಮಠ ಪೇಜಾವರ ಮಠ.

ಶ್ರೀಸುಗುಣೇಂದ್ರ ತೀರ್ಥ

ಶ್ರೀಸುಗುಣೇಂದ್ರ ತೀರ್ಥ

ಪುತ್ತಿಗೆ ಮಠದ (ಶ್ರೀಉಪೇಂದ್ರ ತೀರ್ಥ ಪೀಠ) ಹಾಲೀ ಪೀಠಾಧಿಪತಿಗಳು, ಗೋವಿಂದಾಚಾರ್ಯ ಮತ್ತು ಕಮಲಮ್ಮ ದಂಪತಿಗಳ ಪುತ್ರರು ಮತ್ತು ಇವರ ಪೂರ್ವಾಶ್ರಮದ ಹೆಸರು ಹಯವದನ. ಇವರು ಜನಿಸಿದ್ದು 1961ರಲ್ಲಿ. ಪುತ್ತಿಗೆ ಮಠದ ಗುರುಪರಂಪರೆಯ ಮೂವತ್ತನೇ ಯತಿಗಳಾದ ಸುಗುಣೇಂದ್ರ ಶ್ರೀಗಳು ತಮ್ಮ ಹದಿಮೂರನೇ ವಯಸ್ಸಿನಲ್ಲಿ ಅಂದರೆ 1974ರಲ್ಲಿ ಸನ್ಯಾಸತ್ವ ಸ್ವೀಕರಿಸಿದರು.

ಆಚಾರ್ಯ ಮಧ್ವರು ಮಠದ ಮೊದಲ ಗುರುಗಳಾದ ಉಪೇಂದ್ರ ತೀರ್ಥರಿಗೆ ನೀಡಿದ್ದ ಪಾಂಡುರಂಗ ವಿಠಲ, ಮಠದ ಪಟ್ಟದದೇವರು. ಶಾಂತಿ,ಧರ್ಮಗಳ ವಿಶ್ವ ಸಮ್ಮೇಳನದ ಅಂತಾರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಹಾಲೀ ಪೀಠಾಧಿಪತಿಗಳು ಅಮೆರಿಕಾದಲ್ಲೂ ಮಠದ ಹಲವು ಶಾಖೆಗಳನ್ನು ತೆರೆದಿದ್ದಾರೆ.

ಧರ್ಮ ಪ್ರಚಾರಕ್ಕಾಗಿ ಅಮೆರಿಕಾಗೆ ಹೋಗುತ್ತಿರುವ ಇವರಿಗೆ ಕಳೆದ ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣನನ್ನು ಮುಟ್ಟಿ ಪೂಜೆ ಮಾಡದಂತೆ ಅಷ್ಟಮಠದ ಇತರ ಯತಿಗಳು ಒತ್ತಡವನ್ನು ಹೇರಿದ್ದರು. ಮಠದ ಮೂಲ ಸಂಸ್ಥಾನ, ಉಡುಪಿಯಿಂದ 52 ಕಿ.ಮೀ ಪುತ್ತಿಗೆಯಲ್ಲಿ. ಕೃಷ್ಣಾಪುರ ಮಠ ಪುತ್ತಿಗೆ ಮಠದ ದ್ವಂದ್ವ ಮಠ.

ವಿದ್ಯಾಸಾಗರ ತೀರ್ಥ

ವಿದ್ಯಾಸಾಗರ ತೀರ್ಥ

ಕೃಷ್ಣಾಪುರ ಮಠ (ಶ್ರೀಜನಾರ್ಧನತೀರ್ಥ ಪೀಠ) ಮಠದ 35ನೇ ಯತಿಗಳಾಗಿರುವ ಶ್ರೀವಿದ್ಯಾಸಾಗರ ತೀರ್ಥರು ಹಾಲಿ ಪೀಠಾಧಿಪತಿಗಳು. ಕಾಳಿಂಗಮರ್ಧನ ಕೃಷ್ಣ, ಪಟ್ಟದ ದೇವರನ್ನು ಹೊಂದಿರುವ ಕೃಷ್ಣಾಪುರ ಮಠದ ಯತಿಗಳು ತಮ್ಮ ಸಣ್ಣ ವಯಸ್ಸಿನಲ್ಲೇ ಸನ್ಯಾಸತ್ವ ಸ್ವೀಕರಿಸಿದರು.

1974ರಲ್ಲಿ ದೇವರಾಜು ಅರಸು ಅವರ ಕಾಲದಲ್ಲಿ ಭೂಸ್ವಾಧೀನ ಕಾನೂನಿಂದಾಗಿ ಭಾರೀ ಪ್ರಮಾಣದಲ್ಲಿ ಮಠ ತನ್ನ ಆಸ್ತಿಯನ್ನು ಕಳೆದುಕೊಂಡಿತ್ತು. ವಿದ್ಯಾಸಾಗರ ತೀರ್ಥರು ಮಠದ ಪರಂಪರೆಯ 35ನೇ ಯತಿಗಳು. ಪುತ್ತಿಗೆ ಮಠ, ಕೃಷ್ಣಾಪುರ ಮಠದ ದ್ವಂದ್ವ ಮಠ.

ಮಠದ ಮೂಲ ಸಂಸ್ಥಾನ ಉಡುಪಿಯಿಂದ ಸುಮಾರು ಐವತ್ತು ಕಿ.ಮೀ ದೂರದ ಕೃಷ್ಣಾಪುರದಲ್ಲಿ. ಮಾರ್ಚ್ 15, 1958ರಲ್ಲಿ ಶ್ರೀಪತಿ ತಂತ್ರಿ ಮತ್ತು ಜಾನಕಿಯಮ್ಮ ದಂಪತಿಗಳಿಗೆ ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ರಮಾಪತಿ ತಂತ್ರಿ. ಜೂನ್ 3, 1971ರಲ್ಲಿ ಅಂದರೆ ಹದಿಮೂರನೇ ವಯಸ್ಸಿನಲ್ಲಿ ವಿದ್ಯಾಸಾಗರ ತೀರ್ಥರು ಸನ್ಯಾಸತ್ವ ಸ್ವೀಕರಿಸಿದರು.

ಲಕ್ಷ್ಮೀವರ ತೀರ್ಥ ಶ್ರೀಗಳು

ಲಕ್ಷ್ಮೀವರ ತೀರ್ಥ ಶ್ರೀಗಳು

ಶಿರೂರು ಮಠದ (ಶ್ರೀವಾಮನತೀರ್ಥ ಪೀಠ) ಹಾಲೀ ಪೀಠಾಧಿಪತಿಗಳಾದ ಲಕ್ಷ್ಮೀವರ ತೀರ್ಥ ಶ್ರೀಗಳು ವಿಠಲ ಆಚಾರ್ಯ ಮತ್ತು ಕುಸುಮಮ್ಮ ದಂಪತಿಗಳಿಗೆ ಜೂನ್ 8, 1964ರಲ್ಲಿ ಜನಿಸಿದರು. ಹಾಲಿ ಶ್ರೀಗಳಾದ ಲಕ್ಷ್ಮೀವರ ತೀರ್ಥ ಶ್ರೀಗಳು ಜುಲೈ 2, 1971ರಲ್ಲಿ ಸನ್ಯಾಸತ್ವ ಸ್ವೀಕರಿಸಿದರು. ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಂದರೆ ಏಳನೇ ವಯಸ್ಸಿನಲ್ಲಿ ಲಕ್ಷ್ಮೀವರ ತೀರ್ಥರು ಸನ್ಯಾಸತ್ವ ಸ್ವೀಕರಿಸಿದ್ದರು.

ಆಚಾರ್ಯ ಮಧ್ವರು ಮಠದ ಪರಂಪರೆಯ ಮೊದಲ ಗುರುಗಳಾದ ವಾಮನ ತೀರ್ಥರಿಗೆ ನೀಡಿದ ಶ್ರೀದೇವಿ, ಭೂದೇವಿ ಸಹಿತ ವಿಠಲ ಮಠದ ಪಟ್ಟದದೇವರು. ಲಕ್ಷೀವರತೀರ್ಥರು ಮಠದ ಪರಂಪರೆಯ ಮೂವತ್ತನೇ ಯತಿಗಳು. ಶಿರೂರು ಮಠದ ದ್ವಂದ್ವ ಮಠ ಸೋದೆ ಮಠ.

ಮಠದ ಮೂಲ ಸಂಸ್ಥಾನ ಉಡುಪಿಯಿಂದ 54 ಕಿ.ಮೀ ದೂರದ ಶಿರೂರಿನಲ್ಲಿ. ಶಿರೂರು ಶ್ರೀಗಳು ಸದ್ಯ ಭಾರೀ ಸುದ್ದಿಯಲ್ಲಿದ್ದು, ಕರ್ನಾಟಕ ಅಸೆಂಬ್ಲಿ ಚುನಾವಣೆ 2018ರಲ್ಲಿ ಸ್ಪರ್ಧಿಸಲು ಬಯಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Udupi Sri Krishna Mutt and Eight Seers of Mutt. The Krishna Matha was founded by the Vaishnavite saint Shri Madhwacharya in the 13th century. To look after the daily pooja and Math administration, Madhwacharya appointed eight swamijis. A brief details of Eight swamiji's of Krishna Math.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ