ಸಿದ್ದರಾಮಯ್ಯ ಮಾತು ಉಳಿಸಿಕೊಂಡರು: ಹೈಕಮಾಂಡ್ ತೀರ್ಮಾನದ ಬಗ್ಗೆ ಡಿಕೆಶಿ ಬಿಗ್‌ ಅಪ್ಡೇಟ್ಸ್‌

ಸಿದ್ದರಾಮಯ್ಯ ಅವರು ಕೊಟ್ಟ ಮಾತನ್ನು ಉಳಿಸಿಕೊಂಡರು ಎಂದು ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದು, ಹೈಕಮಾಂಡ್ ತೀರ್ಮಾನದ ಬಗ್ಗೆ ಬಿಗ್ ಅಪ್ಡೇಟ್ಸ್‌ ಕೊಟ್ಟಿದ್ದಾರೆ. ಸಿಎಂ ಕುರ್ಚಿ ಈ ಡಿ ಕೆ ಶಿವಕುಮಾರನದ್ದಲ್ಲ, ಇದು ಜನರ ಕುರ್ಚಿ. ಜನರು ಕೊಟ್ಟಿರುವ ಅಧಿಕಾರವನ್ನು ಜನರ ಸೇವೆಗೆ ಮುಡಿಪಾಗಿಡುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ನನ್ನ ವೈಯಕ್ತಿಕ ವಿಚಾರ ಬದಿಗೊತ್ತಿ, ರಾಜ್ಯದ ಜನರ ಸೇವೆಗೆ ಸಂಕಲ್ಪ ಮಾಡಿ ಈ ಅಧಿಕಾರ ಸ್ವೀಕರಿಸಿದ್ದೇನೆ. 'ಹಿಂದಿನ ಹೆಜ್ಜೆಗಳನ್ನು ಮರೆತವನು ಮುಂದಿನ ಹೆಜ್ಜೆ ಇಡಲಾರ' ಎಂಬ ಮಾತನ್ನು ನಂಬಿರುವವನು ನಾನು. ನಾವು ನಮ್ಮ ಬೇರು ಮರೆತರೆ ಫಲ ಸಿಗುವುದಿಲ್ಲ ಎಂದು ಹೇಳುತ್ತಿರುತ್ತೇನೆ. ಇಂದು ಹೊಸ ದಿನ. ಹೊಸ ಕೆಲಸ ಮಾಡಿ, ಹೊಸ ಅವಕಾಶಗಳನ್ನು ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದ ಜನತೆ ನೀಡಿದ್ದಾರೆ. ಬಾಕಿ ಇರುವ 2 ವರ್ಷಗಳಲ್ಲಿ ರಾಜ್ಯದ ಜನರ ಸೇವೆ ಮಾಡಲು ಏನೆಲ್ಲಾ ಸೇವೆ ಮಾಡಬಹುದು, ರಾಜ್ಯದ ಕಲ್ಯಾಣಕ್ಕೆ ನಾನು ಹೊಸ ಅವಕಾಶಗಳನ್ನು ಹುಡುಕುತ್ತಿದ್ದೇನೆ ಎಂದು ಹೇಳಿದ್ದಾರೆ.

DK Shivakumar

ಎಲ್ಲಾ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆದಿದೆ

ಇನ್ನು ಮಾಧ್ಯಮಗಳು ಇಷ್ಟು ದಿನ ಅಧಿಕಾರ ಹಸ್ತಾಂತರ, ನಾಯಕತ್ವ ಬದಲಾವಣೆ ವಿಚಾರವಾಗಿ ಅನೇಕ ಸುದ್ದಿ, ಹೇಳಿಕೆಗಳನ್ನು ಪ್ರಸಾರ ಮಾಡುತ್ತಿದ್ದವು. ಮಲಗಿದ್ದವರನ್ನು ಎಬ್ಬಿಸಿ, ಎದ್ದಿದ್ದವರನ್ನು ಮಲಗಿಸುತ್ತಿದ್ದರು. ನಮ್ಮ ಪಕ್ಷದ ವರಿಷ್ಠರು ಇದಕ್ಕೆಲ್ಲ ಈಗ ತೆರೆ ಎಳೆದಿದ್ದಾರೆ. ಶುಭ ಗಳಿಗೆ, ಶುಭ ಮುಹೂರ್ತ ಬರುತ್ತದೆ. ಸ್ವಲ್ಪ ತಾಳ್ಮೆಯಿಂದ ಕಾಯಿರಿ ಎಂದು ಹೇಳುತ್ತಲೇ ಇದ್ದೆ. ಶುಭ ಮುಹೂರ್ತಕ್ಕೆ ಮಾಧ್ಯಮಗಳು ಹಾಗೂ ರಾಜ್ಯದ ಜನತೆ ಸಾಕ್ಷಿಯಾಗಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.

ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ: ಡಿಕೆಶಿ

ಕರ್ನಾಟಕದ ಜನತೆಗೆ ನನ್ನ ಮೇಲೆ ಅಪಾರ ವಿಶ್ವಾಸ ಇದೆ. ಹಿಂದೆ ಅನೇಕ ಟೀಕೆ, ಹೊಗಳಿಕೆ ವ್ಯಕ್ತವಾಗಿರಬಹುದು. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ನಾನು ಹೇಳಿದ್ದೆ. ರಾಜ್ಯದ ಆಡಳಿತದಲ್ಲಿ ಹೊಸ ಬೆಳಕು ಮೂಡಿಸಲು ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಪ್ರಯತ್ನ ಮಾಡುತ್ತೇನೆ. 1985ರಿಂದ ಇಲ್ಲೆಯವರೆಗೂ ಕಷ್ಟ ನೋಡಿದ್ದೇನೆ, ಸುಖ ನೋಡಿದ್ದೇನೆ. ಚಿಕ್ಕ ವಯಸ್ಸಿನಲ್ಲೇ ಅಧಿಕಾರ ನೋಡಿದ್ದೇನೆ. ಅನೇಕ ರಾಜಕೀಯ ತಂತ್ರಗಳ ಬಲೆಗೆ ಬಿದ್ದಿದ್ದೇನೆ. ತಿಹಾರ್ ಜೈಲಿಗೆ ಹೋಗುವ ಪರಿಸ್ಥಿತಿ ಬಂತು. ನಾನು ಎಂದಿಗೂ ಎದೆಗುಂದಲಿಲ್ಲ. ನಾನು ಭರವಸೆಗಳ ಮೇಲೆ ಬದುಕಿದೆ. ಇದೇ ವಿಶ್ವಾಸ ಮತ್ತೆ ರಾಜ್ಯದ ಜನರ ಸೇವೆ ಮಾಡಿ, ಸಾಕ್ಷಿಗುಡ್ಡೆ ಬಿಟ್ಟು ಹೋಗಲು ಅವಕಾಶ ಸಿಕ್ಕಿದೆ ಎಂದು ಡಿ.ಕೆ ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ

ಕಾಂಗ್ರೆಸ್ ಕಾರ್ಯಕರ್ತರು, ಜನರು ಬಹಳ ನಂಬಿಕೆಯಿಂದ ಕೊಟ್ಟಿರುವ ಅವಕಾಶ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಈ ತೀರ್ಮಾನ ಮಾಡಿದ್ದಾರೆ. ಇದು ಸ್ವಲ್ಪ ತಡವಾಗಿದೆ. ಆದರೂ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದಿದ್ದಾರೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಿರುವುದಾಗಿ ಅವರು ಹೇಳುತ್ತಲೇ ಇದ್ದರು. ನಮ್ಮ ವರಿಷ್ಠರು ನಮ್ಮಿಬ್ಬರನ್ನು ಕರೆಸಿ ಈ ತೀರ್ಮಾನ ಮಾಡಿದಾಗ, ಸಿದ್ದರಾಮಯ್ಯ ಅವರು ಬಹಳ ಸಂತೋಷದಿಂದ ನನಗೆ ಜಾಗ ಮಾಡಿಕೊಟ್ಟಿದ್ದಾರೆ. ನಮ್ಮ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಬೆಂಬಲ ನೀಡಿ ಜವಾಬ್ದಾರಿ ನೀಡಿದ್ದಾರೆ ಎಂದು ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ನೀವು ನನ್ನನ್ನು ಟೀಕೆ ಮಾಡಿದಾಗ ನಾನು ಪ್ರಶ್ನೆ ಮಾಡಿಲ್ಲ

ಗ್ರಾಮೀಣ ಭಾಗದ ರೈತರ ಪರಿಸ್ಥಿತಿ ಹಾಗೂ ನಗರ ಪ್ರದೇಶ ಜನರ ಸಮಸ್ಯೆ ನಾನು ಅರಿತಿದ್ದೇನೆ. 42% ಜನ ನಗರದಲ್ಲಿದ್ದಾರೆ. ಜನ ಉದ್ಯೋಗಕ್ಕಾಗಿ ನಗರಗಳತ್ತ ವಲಸೆ ಬರುತ್ತಿದ್ದಾರೆ. ಬೀದಿ ವ್ಯಾಪಾರ ಮಾಡಿಕೊಂಡಾದರೂ ಒಳ್ಳೆಯ ಬದುಕು, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ವ್ಯವಸಾಯ ತೊರೆದು ನಗರಗಳತ್ತ ಬರುತ್ತಿದ್ದಾರೆ. ಈ ಸರ್ಕಾರದ ಪ್ರತಿ ತೀರ್ಮಾನ ಕೇವಲ ಶಿವಕುಮಾರ್ ತೀರ್ಮಾನ ಮಾತ್ರವಲ್ಲ. ಸಾಮೂಹಿಕ ತೀರ್ಮಾನವಾಗಿರುತ್ತದೆ. ನನಗೆ ಜಾತಿ ಮೇಲೆ, ಧರ್ಮದ ಮೇಲೆ ನಂಬಿಕೆ ಇಲ್ಲ. ನನಗೆ ನಮ್ಮದೇ ಆದ ನಂಬಿಕೆ ಇರಬಹುದು. ಆದರೆ ಮಾನವ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡಿರುವವನು ಎಂದಿದ್ದಾರೆ.

ನಾನು 7ನೇ ತರಗತಿಯಲ್ಲಿ ಶಾಲಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ನಾನು ಪ್ರಜಾಸತಾತ್ಮಕ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿದ್ದೇನೆ. ಈ ನಾಡು ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ನಮ್ಮ ಸಚಿವ ಸಂಪುಟ ಪ್ರತಿಬಿಂಬಿಸುತ್ತಿದೆ. ಮಾಧ್ಯಮಗಳು ಟೀಕೆ ಮಾಡಲಿ, ನಮ್ಮ ಸರ್ಕಾರದ ತಪ್ಪನ್ನು ತಿದ್ದಿ. ಆದರೆ ಇಲ್ಲಸಲ್ಲದ ರಾಜಕೀಯ ಸುದ್ದಿಗಳನ್ನು ಮಾಡಬೇಡಿ. ನೀವು ನನ್ನನ್ನು ಟೀಕೆ ಮಾಡಿದಾಗ ನಾನು ಪ್ರಶ್ನೆ ಮಾಡಿಲ್ಲ. ನಿಮ್ಮ ಕ್ಯಾಮೆರಾ ಕಣ್ಣಲ್ಲಿ ತೋರಿಸುವುದನ್ನು ಜನ ನೋಡುತ್ತಾರೆ. ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನೀವು ವರದಿ ಮಾಡಿ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+