ಯಾರ್ರಿ ಅವನು ವಿಜಯೇಂದ್ರ? ಅವನೇನು ದೊಡ್ಡ ಪಾಳೆಗಾರನಾ?
ಬೆಂಗಳೂರು, ಅ. 31: ನಾಳೆ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇದೇ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಯುತ್ತಿರುವ ಶಿರಾ ಹಾಗೂ ಆರ್ ಆರ್ ನಗರ ಕ್ಷೇತ್ರಗಳಲ್ಲಿ ಚುನಾವಣೆ ಪ್ರಚಾರ ರಂಗೇರಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಮಾಜಿ ಸಚಿವ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಶಿರಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೂ ಕಳೆದ ನಾಲ್ಕಾರು ದಿನಗಳಿಂದ ಶಿರಾ ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಪುನರಾವರ್ತನೆ ಮಾಡುವ ಲೆಕ್ಕಾಚಾರವನ್ನು ಬಿಜೆಪಿ ಹೊಂದಿದೆ. ಹೀಗಾಗಿಯೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು, ಅಭ್ಯರ್ಥಿಗಳು ಬಿಜೆಪಿ ನಾಯಕರ ಮೇಲೆ ಮುಗಿಬೀಳುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಮಂಡ್ಯದ ಕೆ.ಆರ್. ಪೇಟೆ ಕ್ಷೇತ್ರದ ಫಲಿತಾಂಶದ ಬಗ್ಗೆ ಜಮೀರ್ ಅಹ್ಮದ್ ಅವರು ಸ್ಪೋಟಕ ಹೇಳಿಕೆಯನ್ನು ಕೊಟ್ಟಿದ್ದಾರೆ. ಅಲ್ಲಿಯ ಗೆಲುವಿಗೆ ಕಾರಣವನ್ನೂ ಹೇಳಿದ್ದಾರೆ. ಅಲ್ಲಿ ಬಿಜೆಪಿ ಗೆದ್ದಿರುವುದು ಹೇಗೆ? ಇಲ್ಲಿದೆ ಮಾಹಿತಿ.

ವಿಜಯೇಂದ್ರ ಪಾಳೆಯಗಾರನಾ?
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರ ಪರವಾಗಿ ಪ್ರಚಾರ ಮಾಡುತ್ತಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಬಿ.ವೈ. ವಿಜಯೇಂದ್ರ ಮೇಲೆ ಕಿಡಿ ಕಾರಿದ್ದಾರೆ. ವಿಜಯೇಂದ್ರ ಹೇಳಿಕೆಯಿಂದ ಗರಂ ಆಗಿರುವ ಜಮೀರ್ ಅಹ್ಮದ್ ಅವರು, ವಿಜಯೇಂದ್ರ ಯಾರ್ ರೀ? ದೊಡ್ಡ ಪಾಳೆಗಾರನಾ? ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಬ್ಬ ನಾಯಕ. ಆದರೆ ಅವರ ಮಗ ವಿಜಯೇಂದ್ರ ಅವರು ಯಡಿಯೂರಪ್ಪ ಪುತ್ರ ಅಷ್ಟೇ!. ಕೆ.ಆರ್. ಪೇಟೆಯಂತೆ ಇಲ್ಲಿ ಏನೂ ವರ್ಕ್‌ಔಟ್ ಆಗಲ್ಲ ಎಂದಿದ್ದಾರೆ.

ಕೆ.ಆರ್. ಪೇಟೆ ಗೆಲುವಿಗೆ ಕಾರಣ?
ಕೆ.ಆರ್. ಪೇಟೆಯಲ್ಲಿ ಗೆದ್ದಿದ್ದು ನಾರಾಯಣಗೌಡ ಅವರಿಂದ. ಸಚಿವ ನಾರಾಯಣಗೌಡ ಅವರು ಹಿಂದೆ ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಸ್ವಲ್ಪ ಕೆಲಸ ಮಾಡಿದ್ದರು. ಅದರಿಂದಾಗಿ ಅಲ್ಲಿ ವೈಯುಕ್ತಿಕ ವರ್ಚಸ್ಸಿನಿಂದ ಕೆ.ಸಿ. ನಾರಾಯಣಗೌಡ ಅವರು ಗೆದ್ದಿದ್ದಾರೆ. ಬಿವೈ ವಿಜಯೇಂದ್ರನಿಂದ ಏನು ಗೆದ್ದಿಲ್ಲ. ಆದರೆ ನಾರಾಯಣಗೌಡ ಗೆಲುವಿಗೆ ನಾನೇ ಕಾರಣ ಅಂತ ವಿಜಯೇಂದ್ರ ಬಿಂಬಿಸಿ ಕೊಳ್ಳುತ್ತಿದ್ದಾರಷ್ಟೇ. ಶಿರಾದಲ್ಲಿ ವಿಜಯೇಂದ್ರ ಅವರಿಗೆ ಏನೂ ಕಿಸಿಯೋಕೆ ಆಗಲ್ಲ. ನಮ್ಮ ಅಭ್ಯರ್ಥಿ 25 ಸಾವಿರ ಬಹುಮತದೊಂದಿಗೆ ಜಯಚಂದ್ರ ಗೆಲ್ಲುತ್ತಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಅವರು ಹೇಳಿಕೆ ಕೊಟ್ಟಿದ್ದಾರೆ.

ಡಿಕೆಶಿ, ಸಿದ್ದರಾಮಯ್ಯ ನಾಯಕರು
ಕಾಂಗ್ರೆಸ್ ಮೂರು ಹೋಳಾಗಲಿದೆ ಎಂಬ ಡಿಸಿಎಂ ಗೋವಿಂದ್ ಕಾರಜೋಳ ಅವರ ಹೇಳಿಕೆಗೆ ಜಮೀರ್ ಅಹ್ಮದ್ ಖಾನ್ ಅವರು ತಿರುಗೇಟು ಕೊಟ್ಟಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಒಟ್ಟಾಗಿದ್ದೇವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು. ಡಿ.ಕೆ. ಶಿವಕುಮಾರ್ ಅವರು ನಮ್ಮ ಅಧ್ಯಕ್ಷರು. ಅವರೂ ನಮ್ಮ ನಾಯಕರೇ. ಡಿಕೆಶಿ ಅವರ ಅವರಂತೆ ನಮ್ಮಲ್ಲಿ ಬೇರೆ ಬೇರೆ ನಾಯಕರಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ಯತ್ನಾಳ್ ಹೇಳಿರುವುದನ್ನು ಕೇಳಿರಬೇಕಲ್ಲ?
ರಾಜ್ಯ ಬಿಜೆಪಿಯಲ್ಲಿಯೇ ನಾಲ್ಕು ಗುಂಪುಗಳಾಗಿವೆ. ಬಿಜೆಪಿಯಲ್ಲಿಯೇ ನಾಲ್ಕು ಹೋಳಾಗಿರಬೇಕು ನೋಡಿ ಎಂದಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿರೋದನ್ನು ನೀವು ಕೇಳಿರಬೇಕಲ್ಲವಾ? ಅವರನ್ನು ಯಾಕೆ ಇನ್ನೂ ಬಾಯಿ ಮುಚ್ಚಿಸೋಕೆ ಬಿಜೆಪಿ ನಾಯಕರಿಂದ ಯಾಕೆ ಆಗುತ್ತಿಲ್ಲ ಎಂದು ಡಿಸಿಎಂ ಗೋವಿಂದ್ ಕಾರಜೋಳ್ ಅವರಿಗೆ ತಿರುಗೇಟು ನೀಡಿದ್ದಾರೆ.












Click it and Unblock the Notifications