BJP President: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಬಿ.ವೈ ವಿಜಯೇಂದ್ರ
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಕೂಗು ಜೋರಾಗಿದೆ. ಬಿಜೆಪಿ ನಾಯಕರು ಕೇಂದ್ರ ನಾಯಕರನ್ನು ಸಂಪರ್ಕಿಸುತ್ತಿದ್ದು ರಾಜ್ಯಾಧ್ಯಕ್ಷರ ಬದಲಾವಣೆಗೆ ಒಳಗೊಳಗೆ ಕಸರತ್ತು ಕೂಡ ನಡೆಯುತ್ತಿದೆ. ರಾಜ್ಯ ಬಿಜೆಪಿ ಒಡೆದ ಮನೆಯಾಗಿದೆ ಎನ್ನುವುದು ಗುಟ್ಟಾದ ವಿಚಾರವೇನೂ ಅಲ್ಲ. ಭಾನುವಾರ ತುಮಕೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿವೈ ವಿಜಯೇಂದ್ರ ಎಲ್ಲಾ ಪ್ರಶ್ನೆಗಳಿಗೆ ಫೆಬ್ರವರಿ 20 ರೊಳಗೆ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.
ತುಮಕೂರು ಜಿಲ್ಲೆಯ ಬೆಳ್ಳಾವಿಯಲ್ಲಿ ಕಾರದ ವೀರಬಸವ ಶಿವಯೋಗಿಗಳ ನೇತೃತ್ವದಲ್ಲಿ ನಡೆದ ಬೆಳ್ಳಾವಿಯ ಶ್ರೀಮಠದಲ್ಲಿನ ಕಾರದ ಶಿವಯೋಗಿಗಳ ಕರ್ತೃ ಗದ್ದುಗೆ ಲೋಕಾರ್ಪಣಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಫೆಬ್ರವರಿ 20 ರೊಳಗೆ ಉತ್ತರ ಸಿಗಲಿದೆ, ಜಿಲ್ಲಾಧ್ಯಕ್ಷ ನೇಮಕಾತಿ ಪ್ರಕ್ರಿಯೆ ಮುಗಿದ ಬಳಿಕವೇ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ತಿಳಿಯಲಿದೆ. ದೆಹಲಿಯಲ್ಲಿ ಜಿಲ್ಲಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಸದ್ಯವೇ ಕೇಂದ್ರದ ವರಿಷ್ಠರು ರಾಜ್ಯಕ್ಕೆ ಬರಲಿದ್ದು, ಪಕ್ಷದ ಶಾಸಕರ ಜೊತೆ ಚರ್ಚೆ ಮಾಡಿದ ಬಳಿಕವಷ್ಟೇ ಅಂತಿಮ ನಿರ್ಧಾರ ಮಾಡಲಿದ್ದಾರೆ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರಿಗೆ ಬಿಜೆಪಿ ಕೇಂದ್ರದ ಶಿಸ್ತು ಸಮಿತಿ ನೋಟಿಸ್ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನೋಟಿಸ್‌ಗೆ ಉತ್ತರ ಕೊಡಲು 72 ಗಂಟೆಗಳ ಗಡುವು ನೀಡಲಾಗಿತ್ತು, ಅದಾದ ಬಳಿಕ ಏನೆಲ್ಲಾ ಬೆಳವಣಿಗೆ ಆಗಿದೆ ಎನ್ನುವ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರು. ಯತ್ನಾಳ್ ಅವರಿಗೆ ನೋಟಿಸ್ ಕೊಡಲು ಬಿಜೆಪಿಗೆ ತಾಕತ್ ಇಲ್ಲ ಎನ್ನುವ ಸಚಿವ ಕೆ. ಎನ್ ರಾಜಣ್ಣವರ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಬಿವೈ ವಿಜಯೇಂದ್ರ, ಅವರೇನು ನಮ್ಮ ಪಕ್ಷದವರಾ? ಅವರ ಹೇಳಿಕೆಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ರಾಜ್ಯ ಸರ್ಕಾರ 9 ವಿಶ್ವ ವಿದ್ಯಾನಿಲಯಗಳನ್ನು ಮುಚ್ಚಲು ಯೋಚಿಸುತ್ತಿರುವದಕ್ಕೆ ಬಿವೈ ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು 'ಜ್ಞಾನ ಗಂಗೆಯ ಆಲಯಗಳನ್ನು ಬರಿದು ಮಾಡಿ ಅಕ್ಷರ ದೀವಿಗೆಯನ್ನು ನಂದಿಸಲು ಹೊರಟಿದೆ' 9 ವಿವಿಗಳಿಗೆ ಬೀಗ ಹಾಕುವ ಮೂಲಕ ಬಡ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿನ ಶಿಕ್ಷಣ ಭಾಗ್ಯವನ್ನು ಕಸಿಯಲು ಹೊರಟಿರುವುದು ಕಾಂಗ್ರೆಸ್ ಸರ್ಕಾರದ ಅವಿವೇಕತನದ ಪರಮಾವಧಿ ಎಂದರು.
ಶಿಕ್ಷಣದ ದೂರದೃಷ್ಟಿ ಹಾಗೂ ಉನ್ನತ ಶಿಕ್ಷಣದ ಹಕ್ಕು ಪ್ರತಿಯೊಬ್ಬ ವಿದ್ಯಾರ್ಥಿಗೆ ಸರಳವಾಗಿ, ಸುಲಭವಾಗಿ ದೊರೆಯಬೇಕು ಎಂಬ ಮಹತ್ವದ ಉದ್ದೇಶದಿಂದ 9 ವಿಶ್ವವಿದ್ಯಾನಿಲಯಗಳನ್ನು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದಿತ್ತು, ಇವುಗಳ ಅಭಿವೃದ್ಧಿಗಾಗಿ ಮೀಸಲಿರಿಸ ಬೇಕಾಗಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿಕೊಳ್ಳುವ ಕಾರಣಕ್ಕಾಗಿ ವಿ ವಿ. ಗಳನ್ನು ಮುಚ್ಚಲು ಹೊರಟಿದೆ ಎಂದರು.
ದಕ್ಷಿಣ ಭಾರತದಲ್ಲಿ 'ಕರ್ನಾಟಕ ರಾಜ್ಯ ಶಿಕ್ಷಣದ ಕಾಶಿ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ಅದಕ್ಕೆ ಹಿನ್ನಡೆಯುಂಟುಮಾಡುವ ನಿರ್ಧಾರಗಳನ್ನು ಈ ಹಿಂದಿನ ಯಾವ ಸರ್ಕಾರಗಳೂ ಕೈಗೊಂಡಿರಲಿಲ್ಲ, ಆದರೆ ಈ ಕಾಂಗ್ರೆಸ್ ಸರ್ಕಾರ ಇಂಥಾ ನಿರ್ಧಾರ ಕೈಗೊಂಡಿರುವುದು ಖಂಡನೀಯ, ಕೂಡಲೇ ಸರ್ಕಾರ ತನ್ನ ಈ ನಿರ್ಧಾರವನ್ನು ಕೈ ಬಿಟ್ಟು ಈ ಒಂಬತ್ತು ವಿಶ್ವವಿದ್ಯಾನಿಲಯಗಳ ಅಸ್ತಿತ್ವವನ್ನು ಉಳಿಸಿ ಅಭಿವೃದ್ಧಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.












Click it and Unblock the Notifications