ಜೆಡಿಎಸ್ ಶಾಸಕನಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂಕೋರ್ಟ್
ತುಮಕೂರು, ಏಪ್ರಿಲ್ 17; ಮಹತ್ವದ ಬೆಳವಣಿಗೆಯೊಂದರಲ್ಲಿ ಸುಪ್ರೀಂಕೋರ್ಟ್ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ. ಸಿ. ಗೌರಿ ಶಂಕರ್‌ಗೆ ಈ ಬಾರಿಯ ಚುನಾವಣೆ ಕಣಕ್ಕಿಳಿಯಲು ಅವಕಾಶ ನೀಡಿದೆ. ಕರ್ನಾಟಕ ಹೈಕೋರ್ಟ್ ಶಾಸಕರ ಆಯ್ಕೆ ಅಸಿಂಧು ಎಂದು ಮಾರ್ಚ್ 30ರಂದು ತೀರ್ಪು ನೀಡಿತ್ತು. ಶಾಸಕರು ಈ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು.
ನಕಲಿ ಆರೋಗ್ಯ ವಿಮೆ ಬಾಂಡ್ ಹಂಚಿಕೆ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಶಾಸಕ ಡಿ. ಸಿ. ಗೌರಿ ಶಂಕರ್ ಆಯ್ಕೆ ಅಸಿಂಧು ಎಂದು ಆದೇಶ ನೀಡಿತ್ತು. ಆದರೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದ ಕಾರಣ ತನ್ನ ಆದೇಶಕ್ಕೆ 30 ದಿನಗಳ ಕಾಲ ತಡೆ ನೀಡಿತ್ತು.

ಜೆಡಿಎಸ್ ಪಕ್ಷ ಕರ್ನಾಟಕದ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಘೋಷಣೆ ಮಾಡಿದ್ದ 93 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಹಾಲಿ ಶಾಸಕ ಡಿ. ಸಿ. ಗೌರಿ ಶಂಕರ್ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಡಿ. ಸಿ. ಗೌರಿ ಶಂಕರ್ ಮಾಜಿ ಸಚಿವ ದಿ. ಚನ್ನಿಗಪ್ಪ ಪುತ್ರ.
ಕರ್ನಾಟಕ ಹೈಕೋರ್ಟ್ ಮಾರ್ಚ್ 30ರಂದು ತೀರ್ಪು ಪ್ರಕಟಿಸುವಾಗ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ವೇಳಾಪಟ್ಟಿ ಪ್ರಕಟವಾಗಿತ್ತು. ಈ ಹಿನ್ನಲೆಯಲ್ಲಿ ಶಾಸಕ ಡಿ. ಸಿ. ಗೌರಿ ಶಂಕರ್ ಪರ ವಕೀಲ ಹೇಮಂತ್ ರಾಜ್ ತೀರ್ಪಿಗೆ ತಡೆ ನೀಡಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ್ದ ಕೋರ್ಟ್ 30 ದಿನಗಳ ಕಾಲ ಆದೇಶಕ್ಕೆ ತಡೆ ನೀಡಿತ್ತು.

ಈ ಅವಧಿಯಲ್ಲಿ ಶಾಸಕ ಡಿ. ಸಿ. ಗೌರಿ ಶಂಕರ್ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮವಿ ಸಲ್ಲಿಸಿ ತಡೆ ಪಡೆಬೇಕಿತ್ತು. ಇಲ್ಲವಾದಲ್ಲಿ ಚುನಾವಣಾ ಅಕ್ರಮ ಪ್ರಕರಣದಲ್ಲಿ ಅವರು ಅನರ್ಹಗೊಳ್ಳುತ್ತಿದ್ದರು ಮತ್ತು ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುತ್ತಿದ್ದರು. ಆದ್ದರಿಂದ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಬಾರಿಯ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ನೀಡಿದೆ.
ಪ್ರಕರಣದ ವಿವರ; 2018ರ ಚುನಾವಣೆಯಲ್ಲಿ ಡಿ. ಸಿ. ಗೌರಿ ಶಂಕರ್ 82,740 ಮತಗಳನ್ನು ಪಡೆದು ಎದುರಾಳಿ ಬಿಜೆಪಿಯ ಬಿ. ಸುರೇಶ್ ಗೌಡ (77,100) ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಚುನಾವಣೆಗೆ ಮೊದಲು ಅವರು ಕ್ಷೇತ್ರದ 32 ಸಾವಿರ ವಯಸ್ಕರು ಮತ್ತು 16 ಸಾವಿರ ಮಕ್ಕಳಿಗೆ ಆರೋಗ್ಯ ವಿಮೆ ಬಾಂಡ್ ಹಂಚಿಕೆ ಮಾಡಿದ್ದರು. ಆದರೆ ಬಾಂಡ್ ನಕಲಿ ಎಂದು ಬಿಜೆಪಿಯ ಬಿ. ಸುರೇಶ್ ಗೌಡ ಆರೋಪ ಮಾಡಿದ್ದರು, ದೂರು ದಾಖಲಿಸಿದ್ದರು.
ಬಿ. ಸುರೇಶ್ ಗೌಡ ಶಾಸಕ ಗೌರಿ ಶಂಕರ್ ಆಯ್ಕೆ ಅಸಿಂಧುಗೊಳಿಸಬೇಕು. ಎರಡನೇ ಸ್ಥಾನದಲ್ಲಿರುವ ತಮ್ಮನ್ನು ವಿಜೇತರು ಎಂದು ಘೋಷಣೆ ಮಾಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದರು. ಗೌರಿ ಶಂಕರ್ ಈ ದೂರು ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಕೋರ್ಟ್ ಅರ್ಜಿಯನ್ನು ತಿರಸ್ಕಾರ ಮಾಡಿತ್ತು. ಸುಪ್ರೀಂಕೋರ್ಟ್‌ನಲ್ಲಿಯೂ ಶಾಸಕರಿಗೆ ಹಿನ್ನಡೆಯಾಗಿತ್ತು.
ಕರ್ನಾಟಕ ಸರ್ಕಾರ ಈ ನಕಲಿ ಬಾಂಡ್ ಹಂಚಿಕೆ ಕುರಿತು ಸಿಐಡಿ ತನಿಖೆಗೆ ಆದೇಶ ಮಾಡಿತ್ತು. 2020ರಲ್ಲಿ ಆರಂಭಗೊಂಡ ತನಿಖೆಯಲ್ಲಿ ಶಾಸಕರು ದೋಷಿ ಎಂದು ತಿಳಿದುಬಂದಿತ್ತು. ಸಿಐಡಿ ಈ ಕುರಿತು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಶಾಸಕರ ಆಯ್ಕೆ ಅಸಿಂಧುಗೊಳಿಸಿತ್ತು.












Click it and Unblock the Notifications