ತುಮಕೂರು; 25ರ ಯುವತಿ ವಿವಾಹವಾಗಿದ್ದ 45 ವರ್ಷದ ವರ ಆತ್ಮಹತ್ಯೆ!
ತುಮಕೂರು, ಮಾರ್ಚ್ 29; ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿಪಾಳ್ಯದ ನಿವಾಸಿ ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರ ಅಕ್ಟೋಬರ್‌ನಲ್ಲಿ ಶಂಕರಣ್ಣ 25 ವರ್ಷದ ಯುವತಿಯನ್ನು ವಿವಾಹವಾಗಿದ್ದರು. ನವ ಜೋಡಿಗಳ ವಿವಾಹದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
45 ವರ್ಷದ ಶಂಕರಣ್ಣ ಮೃತದೇಹ ಅಕ್ಕಿಮರಿಪಾಳ್ಯದ ತೋಟದಲ್ಲಿ ಮಂಗಳವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹುಲಿಯೂರು ದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಅಕ್ಟೋಬರ್‌ನಲ್ಲಿ 25 ವರ್ಷದ ಮೇಘನಾ ಮತ್ತು 45 ವರ್ಷದ ಶಂಕರಣ್ಣ ವಿವಾಹ ನಡೆದಿತ್ತು. ಸ್ವತಃ ಮೇಘನಾ ಶಂಕರಣ್ಣ ಬಳಿ ಹೋಗಿ ವಿವಾಹವಾಗುವಂತೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪಿದ್ದ ಶಂಕರಣ್ಣ ವಿವಾಹವಾಗಿದ್ದರು.

ಮೇಘನಾಗೆ ಮೊದಲೇ ವಿವಾಹವಾಗಿತ್ತು. ಆಕೆ ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದು ಎರಡು ವರ್ಷದಿಂದ ಪತಿ ಕಾಣೆಯಾಗಿದ್ದರು. ಈ ಹಿನ್ನಲೆಯಲ್ಲಿ ಮೇಘನಾ ಶಂಕರಣ್ಣನ ಬಳಿ ಬಂದು ವಿವಾಹವಾಗುವಂತೆ ಮಾನವಿ ಮಾಡಿದ್ದರು. ಬಳಿಕ ಶಂಕರಣ್ಣನ ಜೊತೆ 2ನೇ ವಿವಾಹವಾಗಿದ್ದರು.
45 ವರ್ಷಗಳಾದರೂ ವಿವಾಹವಾಗದಿದ್ದ ಶಂಕರಣ್ಣ ಮೇಘನಾ ಮನವಿಯಂತೆ ಆಕೆಯನ್ನು ವಿವಾಹವಾಗಿದ್ದರು. ಕೆಲವು ಗ್ರಾಮಸ್ಥರ ಸಮ್ಮುಖದಲ್ಲಿ ಊರಿನ ದೇವಾಲಯದ ಮುಂದೆ ಶಂಕರಣ್ಣ, ಮೇಘನಾ ವಿವಾಹ ನಡೆದಿತ್ತು.
ಶಂಕರಣ್ಣ, ಮೇಘನಾ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದಂಪತಿಗಳು ಸದಾ ಖುಷಿಯಾಗಿ ಬಾಳಲಿ ಎಂದು ಹಲವಾರು ಜನರು ಹರಸಿದ್ದರು. ಆದರೆ ಐದೇ ತಿಂಗಳಿಗೆ ವಿವಾಹ ಶಂಕರಣ್ಣನ ಸಾವಿನಿಂದಾಗಿ ದುರಂತ ಅಂತ್ಯ ಕಂಡಿದೆ.
ಟೀ ಕುಡಿದು ತೆರಳಿದ್ದ ಶಂಕರಣ್ಣ; ಶಂಕರಣ್ಣ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರು. ಮಂಗಳವಾರ ಬೆಳಗ್ಗೆ ಮನೆಯಲ್ಲಿ ಟೀ ಕುಡಿದ ಬಳಿಕ ತೋಟದ ಕಡೆ ಹೋಗಿದ್ದರು. ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಎಂಬ ಮಾಹಿತಿ ಇದ್ದು, ಪೊಲೀಸರು ಖಚಿತಪಡಿಸಬೇಕಿದೆ.
ಘಟನಾ ಸ್ಥಳಕ್ಕೆ ಪಿಎಸ್‌ಐ ಚೇತನ್ ಗೌಡ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ; ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications