ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ತಿಪಟೂರಿನಲ್ಲಿ ಬಿ.ಸಿ. ನಾಗೇಶ್ ಮನೆಗೆ NSUI ಮುತ್ತಿಗೆ
ತುಮಕೂರು, ಜೂ. 01: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ತಿಪಟೂರಿನಲ್ಲಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆಗೆ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಕರ್ನಾಟಕ ಸಂಘಟನೆ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಡಾ. ಬಿ.ಅರ್. ಅಂಬೇಡ್ಕರ್ ಪಠ್ಯ ಬದಲಿಸಿ ಅವಮಾನ ಮಾಡಿದೆ. ಕುವೆಂಪು ಅವರ ನಾಡಗೀತೆ ವಿರೂಪಗೊಳಿಸಿದ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಬಸವಣ್ಣ, ಟಿಪ್ಪು ಸುಲ್ತಾನ್ ಬಗ್ಗೆ ಪಠ್ಯವನ್ನು ತಿರುಚಿ ಸಮಾಜದ ಸ್ವಾಸ್ತ್ ಕೆಡಿಸಲಾಗುತ್ತಿದೆ. ರೋಹಿತ್ ಚಕ್ರತೀರ್ಥ ಅವರ ಸಮಿತಿ ರದ್ದು ಮಾಡುವ ಬದಲಿಗೆ ಸಮರ್ಥನೆ ಮಾಡಿಕೊಳ್ಳುತ್ತಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು. ಈ ಕೂಡಲೇ ಪರಿಷ್ಕೃತ ಪಠ್ಯ ಪುಸ್ತಕಗಳನ್ನು ವಾಪಸು ಪಡೆಯಬೇಕು ಎಂದು ಎನ್‌ಎಸ್ ಯುಐ ಕಾರ್ಯಕರ್ತರು ಆಗ್ರಹಿಸಿದರು.
ಶಿಕ್ಷಣ ಸಚಿವರಿಗೆ ಧಿಕ್ಕಾರ ಕೂಗಿ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸಚಿವರ ಮನೆಯ ಕಾಂಪೌಂಡ್ ಗೆ ನುಗ್ಗಿ ಧಿಕ್ಕಾರ ಕೂಗಲು ಯತ್ನಿಸಿದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಹದಿನೈದಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಗೃಹ ಸಚಿವರ ಖಂಡನೆ:
ಶಿಕ್ಷಣ ಸಚಿವ ಶ್ರೀ ನಾಗೇಶ್ ಅವರ ನಿವಾಸದ ಮೇಲೆ NSUI ಕಾರ್ಯಕರ್ತರು ಮುತ್ತಿಗೆ ಹಾಕಿ ದಾಳಿ ಪ್ರಯತ್ನ ನಡೆಸಿದ ಘಟನೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಖಂಡಿಸಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಸರಕಾರ ಈ ಘಟನೆಯನ್ನು ತೀವ್ರವಾಗಿ ಪರಿಗಣಿಸಿ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದಕೊಳ್ಳಲಾಗುವುದು ಎಂದರು.

ಎರಡು ವಾಹನಗಳಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ತಿಪಟೂರಿನ, ಸಚಿವರ ನಿವಾಸ ದ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು ಇದುವರೆಗೆ NSUI ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರನ್ನು ಒಳಗೊಂಡಂತೆ ಒಟ್ಟು 15 ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ದುಷ್ಕರ್ಮಿಗಳು ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದು ಒಬ್ಬ ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ. ನೆಲೆ ಕಳೆದು ಕೊಂಡ ಕಾಂಗ್ರೆಸ್ ಪಕ್ಷ ಇಂಥಹ ನೀಚ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದು, ನಾಡಿನ ಜನತೆ ಕ್ಷುಲ್ಲಕ ಹಾಗೂ ಗೂಂಡಾ ರಾಜಕಾರಣವನ್ನು ಸಹಿಸುವುದಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications