ತಿಪಟೂರಿನಲ್ಲಿ ಶಿಕ್ಷಣ ಸಚಿವರ ಮನೆಗೆ ಎನ್ಎಸ್‌ಯುಐ ಮುತ್ತಿಗೆ
ತುಮಕೂರು, ಜೂನ್ 1: ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಕುವೆಂಪುಗೆ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮನೆಗೆ ಎನ್‌ಎಸ್‌ಯುಐ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರಾಷ್ಟ್ರಕವಿ ಕುವೆಂಪು ಬಗ್ಗೆ ಅವಹೇಳನಕಾರಿ ಹೇಳಿಕೆ ಮತ್ತು ಅವರು ರಚಿಸಿರುವ ನಾಡಗೀತೆಯನ್ನು ತಿರುಚಲಾಗಿದೆ ಎಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯವನ್ನು ವಜಾಗೊಳಿಸಬೇಕು ಮತ್ತು ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.
ಇದೀಗ ಎನ್ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಕಾರ್ಯಕರ್ತರು ಸಚಿವ ನಾಗೇಶ್ ಮನೆ ಎದುರು ಜಮಾಯಿಸಿದ್ದರು. ಹತ್ತು ನಿಮಿಷಗಳ ಕಾಲ ನಾಗೇಶ್ ಅವರ ಮನೆ ಎದುರು ಘೋಷಣೆ ಕೂಗುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದರು. ಈ ನಡುವೆ ಪೊಲೀಸರ ಜೊತೆ ಕಾರ್ಯಕರ್ತರು ಮಾತಿನ ಚಕಮಕಿ ನಡೆಯಿತು.

ಕಾಂಗ್ರೆಸ್ ಕುತಂತ್ರ ಎಂದ ಸಚಿವ
4ನೇ ತರಗತಿಯ ಪಠ್ಯಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಕುರಿತು ಪಾಠ ಇರುವ 4ನೇ ತರಗತಿ ಪರಿಸರ ಅಧ್ಯಯನ ಪುಸ್ತಕದ ಪರಿಷ್ಕರಣೆಯಾಗಿಲ್ಲ. ರಾಜ್ಯ ಬಿಜೆಪಿ ಸರ್ಕಾರದ ಜನಪರ ಕಾರ್ಯಗಳನ್ನು ಸಹಿಸದ ಕಾಂಗ್ರೆಸ್ ಪಕ್ಷದ ಮುಖಂಡರು ದಿನಕ್ಕೊಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ. ಸುಳ್ಳನ್ನು ಎಷ್ಟು ಸಲ ಹೇಳಿದರು ಸತ್ಯವಾಗದು ಎಂದು ಅಸಮಧಾನ ಹೊರಹಾಕಿದ್ದಾರೆ.

ಕುವೆಂಪು ಅವಹೇಳನವಾಗಿಲ್ಲ
ರಾಷ್ಟ್ರಕವಿ ಕುವೆಂಪುಗೆ ಅವಮಾನ ಮಾಡಲಾಗಿದೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಶುದ್ದ ಸುಳ್ಳು. ಇವತ್ತು ಕುವೆಂಪು ಬಗ್ಗೆ ಅವಹೇಳನ ಮಾಡಿದ್ದಾರೆ ಎನ್ನುತ್ತಿದ್ದಾರೆ. ಈ ಹಿಂದೆ ಅನೇಕ ಪಠ್ಯಗಳನ್ನು ಕೈ ಬಿಡಲಾಗಿದೆ. ಆಗ ಮಾತನಾಡದವರು ಈಗ ಧ್ವನಿ ಎತ್ತುತ್ತಿದ್ದಾರೆ. 10ನೇ ತರಗತಿಯಿಂದ ನಾರಾಯಣ ಗುರು ಅವರ ಪಠ್ಯ ತೆಗೆದು ಹಾಕಿಲ್ಲ. ಅವರ ಪಠ್ಯ ಹಾಗೇ ಇದೆ. ಸುಮ್ಮನೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳನ್ನು ಪದೇ ಪದೇ ಹೇಳಿ ಸತ್ಯ ಮಾಡಲು ಹೋರಟಿದ್ದಾರೆ ಎಂದು ಕಿಡಿಕಾರಿದ್ದರು.
|
ಸುಳ್ಳುಸುದ್ದಿ ಹಬ್ಬಿದೆ
ಪ್ರಸ್ತುತ ಸುದ್ದಿ ಮಾಧ್ಯಮಗಳಲ್ಲಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯವರು 4ನೇ ತರಗತಿ ಪರಿಸರ ಅಧ್ಯಾಯನ ಸಹಿತ ಪಠ್ಯಪುಸ್ತಕವನ್ನು ಪರಿಷ್ಕರಿಸಿದ್ದು, ಕುವೆಂಪು ಅವರ ಬಗ್ಗೆ ಇದ್ದ ವಿಷಯಾಂಶವನ್ನು ಕೈಬಿಡಲಾಗಿದೆ/ ಅಪಮಾನಗೊಳಿಸಲಾಗಿದೆ ಎಂದು ಪ್ರಸಾರವಾಗುತ್ತಿದೆ. ವಾಸ್ತವವಾಗಿ 4ನೇ ತರಗತಿ ಪರಿಸರ ಅಧ್ಯಯನ ಅಭ್ಯಾಸ ಸಹಿತ ಪಠ್ಯಪುಸ್ತಕವನ್ನು ರೋಹಿತ್ ಚಕ್ರತೀರ್ಥ ಸಮಿತಿಯವರು ಪರಿಷ್ಕರಿಸಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಎಂ ಬೊಮ್ಮಾಯಿ ಆಕ್ರೋಶ
ಶಿಕ್ಷಣ ಸಚಿವರ ಮನೆಯ ಆವರಣಕ್ಕೆ ನುಗ್ಗಿ ಪ್ರತಿಭಟನೆ ಮಾಡಿ ದಾಂಧಲೆ ಎನ್‌ಎಸ್‌ಯುಐ ಕಾರ್ಯಕರ್ತರು ನಡೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಂಡಿಸಿದ್ದಾರೆ. ಇಂತಹ ನಡೆ ವಿದ್ಯಾರ್ಥಿಗಳಿಗೆ, ಶಿಕ್ಷಣ ಪ್ರೇಮಿಗಳಿಗೆ ಶೋಭೆ ತರುವುದಿಲ್ಲ. ಈ ಕುಕೃತ್ಯ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications