ಜೆಸಿ ಮಾಧುಸ್ವಾಮಿ ವಿ/ಎಸ್ ವಿ ಸೋಮಣ್ಣ: ಮಾಧುಸ್ವಾಮಿ ಸಿಟ್ಟು ಶಮನಕ್ಕೆ ಸೊಗಡು ಶಿವಣ್ಣ ಹಿಂದೆ ಬಿದ್ದ ವಿ ಸೋಮಣ್ಣ!
ತುಮಕೂರು, ಮಾರ್ಚ್ 20: ಕಲ್ಪತರು ನಾಡು ತುಮಕೂರು ಲೋಕಸಭಾ ಕ್ಷೇತ್ರದ ಬಂಡಾಯ ಬಿಜೆಪಿಗೆ ಬಿಸಿ ತುಪ್ಪವಾಗಿದ್ದು, ನುಂಗಲು ಆಗದೇ, ಉಗಿಯಲು ಆಗದೆ ಹಿಂಸೆ ಅನುಭವಿಸುತ್ತಿದೆ. ಇಬ್ಬಿಬ್ಬರು ಮಾಜಿ ಸಚಿವರ ಟಿಕೆಟ್ ಪೈಪೋಟಿಯಲ್ಲಿ ವಿ ಸೋಮಣ್ಣ ಟಿಕೆಟ್ ಗಳಿಸಿರುವುದನ್ನು ಮಾಜಿ ಸಚಿವ ಸ್ಥಳೀಯ ಜೆಸಿ ಮಾಧುಸ್ವಾಮಿಗೆ ನುಂಗಲಾರದ ತುತ್ತಾಗಿದೆ. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಬಂಡಾಯ ಜೋರಾಗಿಯೇ ಕಾಣಿಸುತ್ತಿದೆ.
ಜಿಲ್ಲೆಯ ಪ್ರಮುಖ ನಾಯಕರ ಅಸಮಾಧಾನ ಬಿಜೆಪಿ ಅಭ್ಯರ್ಥಿ ಸೋಮಣ್ಣ ಗೆಲುವಿಗೆ ಮಾರಕವಾಗುವುದಲ್ಲಿ ಆಶ್ಚರ್ಚಯವಿಲ್ಲ. ಜೆಸಿ ಮಾಧುಸ್ವಾಮಿಗೆ ಸೋಮಣ್ಣ ವಿರುದ್ಧ ಅಸಮಾಧಾನ ಎಷ್ಟಿದೆ ಎಂದರೇ ಬಹಿರಂಗವಾಗಿಯೆ ಮನೆಗೆ ಬರುವುದು ಬೇಡ ಎನ್ನುವಷ್ಟು. ಈ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ಚುನಾವಣಾ ಪ್ರಚಾರ ಆರಂಭಿಸಿದ್ದು, ಬಂಡಾಯ ಬಣದ ಒಬ್ಬೊಬ್ಬರನ್ನೇ ಭೇಟಿಯಾಗಿ ಬಂಡಾಯ ಶಮನಕ್ಕೆ ಪ್ರಯತ್ನಿಸುತ್ತಿದ್ದಾರೆ.

ಸೊಗಡು ಶಿವಣ್ಣ ಮನೆಗೆ ವಿ ಸೋಮಣ್ಣ!
ಮಾಧುಸ್ವಾಮಿ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಪ್ರಮುಖರಲ್ಲಿ ಸೊಗಡು ಶಿವಣ್ಣ ಕೂಡ ಒಬ್ಬರು. ಹಾಲಿ ಸಂಸದ ಜಿಎಸ್ ಬಸವರಾಜು ಅವರ ಬದ್ಧ ವೈರಿಯಾಗಿರುವ ಸೊಗಡು ಶಿವಣ್ಣ ಮಾಧುಸ್ವಾಮಿಗೆ ಟಿಕೆಟ್ ನೀಡಬೇಕು ಎಂದು ಒತ್ತಡ ಹಾಕಿದವರಲ್ಲಿ ಒಬ್ಬರು. ಅವರನ್ನು ಒಲಿಸಿಕೊಳ್ಳಲು ವಿ ಸೋಮಣ್ಣ ಮುಂದಾಗಿದ್ದು, ಅವರ ಮನೆಗೆ ಭೇಟಿ ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ತಮ್ಮ ಪರವಾಗಿ ಕೆಲಸ ಮಾಡುವಂತೆ, ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಲು ಚಿಕ್ಕಪೇಟೆಯ ಸೊಗಡು ಶಿವಣ್ಣ ಮನೆಗೆ ಭೇಟಿ ನೀಡಿದ್ದಾರೆ. ಕಾರ್ಯಕರ್ರು ಮತ್ತು ಬೆಂಬಲಿಗರ ಸಮ್ಮುಖದಲ್ಲಿ ಒಬ್ಬರು ನಾಯಕರು ಮಾತನಾಡಿದ್ದಾರೆ. ಜೊತೆಗೆ ಚುನಾವಣೆಯಲ್ಲಿ ಸಂಪೂರ್ಣ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು, ಈ ಹಿಂದೆ ಸೊಗಡು ಶಿವಣ್ಣಗೆ ಬಿಜೆಪಿ ಟಿಕೆಟ್ ನೀಡುವಂತೆ ಆಗ್ರಹಿಸಿ ಬೆಂಬಲಿಗರು ಒತ್ತಾಯ ಹಾಕಿದ್ದರು. ತುಮಕೂರು ಜಿಲ್ಲೆಗೆ ಅವರು ನೀಡಿರುವ ಅಪಾರ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಲೋಕಸಭಾ ಚುನಾವಣೆಗೆ ಸೊಗಡು ಶಿವಣ್ಣ ಅವರಿಗೆ ಟಿಕೆಟ್ ನೀಡಬೇಕು. ಶಿವಣ್ಣನಿಗೆ ಟಿಕೆಟ್ ನೀಡಿದರೆ ಎರಡು ಲಕ್ಷ ಮತಗಳಿಂದ ಅವರ ಗೆಲವು ಖಚಿತ ಎಂದು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದರು.
ಆದರೆ, ಬಿಜೆಪಿ ಹೈಕಮಾಂಡ್ ಈ ಬಾರಿ ಸ್ಥಳೀಯ ನಾಯಕರಿಗೆ ಬಿಟ್ಟು ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಎರಡು ಕ್ಷೇತ್ರಗಳಲ್ಲಿ ನಿಂತು ಸೋಲು ಕಂಡಿದ್ದ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ. ಇದು ಸ್ಥಳೀಯ ಬಿಜೆಪಿ ನಾಯಕರು ಮತ್ತು ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಜೆಸಿ ಮಾಧುಸ್ವಾಮಿ ಬೆಂಬಲಿಗರು ಸೋಮಣ್ಣ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.
ಕಾಂಗ್ರೆಸ್‌ಗೆ ಜೆಸಿ ಮಾಧುಸ್ವಾಮಿ?
ಇನ್ನು, ಬಂಡಾಯದ ಹೊಗೆಯಾಡುತ್ತಿರುವ ಜಿಲ್ಲೆಯಲ್ಲಿ ಕಾಂಗ್ರೆಸ್ ಲಾಭ ಪಡೆಯಲು ಚಿಂತಿಸುತ್ತಿದೆ. ಈವರೆಗು ಕೇವಲ ಏಳು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿ ಘೋಷಿಸಿದ್ದು, ಉಳಿದ ಕ್ಷೇತ್ರಗಳಿಗೆ ಪಟ್ಟಿ ಬಿಡುಗಡೆಯಾಗಿಲ್ಲ. ಇದೇ ವೇಳೆ ಬಿಜೆಪಿಯ ಬಂಡಾಯ ನಾಯಕರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಸರ್ಕಸ್ ಮಾಡುತ್ತಿದೆ. ಜೆಸಿ ಮಾಧುಸ್ವಾಮಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.












Click it and Unblock the Notifications