Chikkanayakanahalli Constituency : ದಳ, ಕಮಲದ ತೀವ್ರ ಪೈಪೋಟಿ, 'ಕೈ'ಗೆ ಶಕ್ತಿ ತುಂಬಿದೆಯೇ ಭಾರತ್ ಜೋಡೋ?
ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಿ.ಬಿ.ಸುರೇಶ್ ಬಾಬು ವಿರುದ್ಧದ ಅಸಮಾಧಾನ ಕಳೆದ ಚುನಾವಣೆಯಲ್ಲಿ ಮಾಧುಸ್ವಾಮಿ ಗೆಲುವಿಗೆ ಕಾರಣವಾಗಿದ್ದವು.
ತುಮಕೂರು, ಫೆಬ್ರವರಿ.20: ತುಮಕೂರು ಜಿಲ್ಲೆಯು ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಕುಣಿಗಲ್, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ, ಸಿರಾ, ಪಾವಗಡ ಮತ್ತು ಮಧುಗಿರಿ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.
ಇದರಲ್ಲಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಗಳ ಹೋರಾಟಕ್ಕಿಂತ ಜೆ.ಸಿ. ಮಾಧುಸ್ವಾಮಿ ಮತ್ತು ಸಿ.ಬಿ. ಸುರೇಶ್ ಬಾಬು ನಡುವಿನ ಹೋರಾಟ ಎಂಬಂತ ಪರಿಸ್ಥಿತಿಯಿದೆ.
ಒಮ್ಮೆ ಚಿಕ್ಕನಾಯಕನಹಳ್ಳಿಯ ಹಾಲಿ ಶಾಸಕ ಜೆ.ಸಿ. ಮಾಧುಸ್ವಾಮಿ ಗೆದ್ದರೇ, ಮತ್ತೋಮ್ಮೆ ಮಾಜಿ ಶಾಸಕ ಸಿ.ಬಿ. ಸುರೇಶ್ ಬಾಬು ಗೆಲುವು ದಾಖಲಿಸುತ್ತಾ ಬಂದಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಸಿ.ಬಿ.ಸುರೇಶ್ ಬಾಬು (60759) ಅವರು ಕೆಜೆಪಿಯ ಮಾಧುಸ್ವಾಮಿ (49620) ಅವರನ್ನು 11,139 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.
ಆದಾದ ನಂತರ 2018 ರಲ್ಲಿ ಭಾರತೀಯ ಜನತಾ ಪಾರ್ಟಿಯ ಜೆ ಸಿ ಮಾಧುಸ್ವಾಮಿ ಗೆಲುವು ಸಾಧಿಸಿದ್ದರು. ಜಾತ್ಯತೀತ ಜನತಾ ದಳದ ಸುರೇಶ್ ಬಾಬು 10, 277 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.

ಹಾಲಿ, ಮಾಜಿ ಶಾಸಕರ ಪ್ರತಿಷ್ಠೆಯ ಕಣ ಚಿಕ್ಕನಾಯಕನಹಳ್ಳಿ
ಚಿಕ್ಕನಾಯಕನಹಳ್ಳಿ ಹಾಲಿ, ಮಾಜಿ ಶಾಸಕರ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ. ಈ ಕ್ಷೇತ್ರದಲ್ಲಿ ಮಾಧುಸ್ವಾಮಿಗೆ ಸುರೇಶ್ ಬಾಬು, ಸುರೇಶ್ ಬಾಬುಗೆ ಮಾಧುಸ್ವಾಮಿ ಪ್ರಬಲ ಎದುರಾಳಿಗಳು. ಕಳೆದ ಚುನಾವಣೆಯಂತೆ ಈ ಬಾರಿಯೂ ಗೆಲುವು ದಾಖಲಿಸಿ ಸುರೇಶ್ ಬಾಬುಗೆ ಟಕ್ಕರ್ ಕೊಡಲು ಮಾಧುಸ್ವಾಮಿ ಭರ್ಜರಿ ತಯಾರಿ ನಡೆಸಿದ್ದಾರೆ.
ಆದರೆ, ಕಳೆದ ಬಾರಿಯ ಸೋಲನ್ನು ಗೆಲುವಾಗಿ ಪರಿವರ್ತಿಸಿಕೊಂಡು ಮತ್ತೆ ಅಧಿಕಾರಕ್ಕೆ ಏರುವ ಪ್ರಯತ್ನದಲ್ಲಿ ಜೆಡಿಎಸ್‌ನ ಸುರೇಶ್ ಬಾಬು ಇದ್ದಾರೆ. ಬಿಜೆಪಿ - ಜೆಡಿಎಸ್ ನಡುವೆ ನೇರ ಹಣಾಹಣಿ ಉಂಟಾದರೆ ಮಾಧುಸ್ವಾಮಿ ಮತ್ತು ಸುರೇಶ್ ಬಾಬು ಇವರಿಬ್ಬರಲ್ಲಿ ಯಾರು ಗೆಲ್ಲುತ್ತಾರೆಂಬ ಕುತೂಹಲ ಕೊನೆ ಕ್ಷಣದವರೆಗೂ ಮುಂದುವರೆಯಲಿದೆ.

ಕುರುಬರು , ಲಿಂಗಾಯಿತರ ನಡುವೆ ಗೆಲುವು ಯಾರಿಗೆ..?
ಮಾಜಿ ಶಾಸಕ, ಜೆಡಿಎಸ್ ನಾಯಕ ಸಿ.ಬಿ. ಸುರೇಶ್ ಬಾಬು 1999, 2008 ಮತ್ತು 2013ರ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹಾಗೆ ಜೆ.ಸಿ ಮಾಧುಸ್ವಾಮಿ ಕೂಡ 1997 ರಲ್ಲಿ ಸ್ವತಂತ್ರ, 2004 ರಲ್ಲಿ ಜೆಡಿಯು, 2018 ರಲ್ಲಿ ಬಿಜೆಪಿಯಿಂದ ಗೆದ್ದಿದ್ದಾರೆ.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ ಪರಂಪರಾಗತವಾಗಿ ಕುರುಬರು ಮತ್ತು ಲಿಂಗಾಯಿತರ ನಡುವೆ ಪರಸ್ಪರ ಪೈಪೋಟಿ ಇರುವ ಕ್ಷೇತ್ರ . ಈ ಕ್ಷೇತ್ರದಿಂದ ಸಾಮಾನ್ಯವಾಗಿ ಕುರುಬರು, ಲಿಂಗಾಯಿತ ಸಮುದಾಯದ ಶಾಸಕರೇ ಆಯ್ಕೆಯಾಗುತ್ತಾ ಬರುತ್ತಿರುವುದು ಪ್ರತೀತಿ. ಚಿಕ್ಕನಾಯಕನಹಳ್ಳಿಯಲ್ಲಿ ಲಂಬಾಣಿ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸಲಿದ್ದು, ಇಷ್ಟು ದಿನ ಜೆಡಿಎಸ್ ಜೊತೆಗಿದ್ದ ಸಮುದಾಯ ನಿಧಾನವಾಗಿ ಬಿಜೆಪಿ ಕಡೆಗೆ ಚದುರಿ ಹೋಗಿವೆ.

ಮಾಧುಸ್ವಾಮಿ ಕೈ ಹಿಡಿಯುತ್ತಾ ಈ ಬಾರಿಯ ಅಭಿವೃದ್ಧಿ ಕಾರ್ಯಗಳು!
ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಿ.ಬಿ.ಸುರೇಶ್ ಬಾಬು ವಿರುದ್ಧದ ಅಸಮಾಧಾನ ಕಳೆದ ಚುನಾವಣೆಯಲ್ಲಿ ಮಾಧುಸ್ವಾಮಿ ಗೆಲುವಿಗೆ ಕಾರಣವಾಗಿದ್ದವು. ಕೇವಲ ಮನರಂಜನಾ ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸುವ ಸುರೇಶ್ ಬಾಬು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಈ ತಪ್ಪನ್ನು ಈ ಬಾರಿ ಮಾಧುಸ್ವಾಮಿ ಮಾಡಿಲ್ಲ ಎಂಬುದು ಗಮನಾರ್ಹ.
ಕ್ಷೇತ್ರದಲ್ಲಿ ರಸ್ತೆ ಅಗಲೀಕರಣಗಳು, ನಾಲೆಗಳಿಗೆ ನೀರು ಹರಿಸಿರುವುದು, ರಸ್ತೆಗಳಿಗೆ ದೀಪಗಳ ಅಳವಡಿಕೆ, ಚರಂಡಿ ಕಾಮಗಾರಿಗಳು ಕಳೆದೆರಡು ವರ್ಷಗಳಿಂದ ಭರ್ಜರಿಯಾಗಿ ನಡೆದಿವೆ. ಚಿಕ್ಕನಾಯಕನಹಳ್ಳಿಯಿಂದ ತಿಪಟೂರಿಗೆ ಹೋಗುವ ಮಾರ್ಗಗಳು ಮತ್ತು ಕೆ.ಬಿ.ಕ್ರಾಸ್‌ನಿಂದ ಚಿಕ್ಕನಾಯಕನಹಳ್ಳಿಯ ಮರ್ಗಗಳು ಹೆದ್ದಾರಿಗಳಂತೆ ಕಾಣುತ್ತಿವೆ. ಈ ಕೆಲಸಗಳು ಮತ್ತೆ ಮಾಧುಸ್ವಾಮಿ ಕೈ ಹಿಡಿಯುವ ಸಾಧ್ಯತೆಯಿದೆ.
ಇದರ ಜೊತೆಗೆ ಬಿಜೆಪಿ ಸರ್ಕಾರ ಮಾಧುಸ್ವಾಮಿಗೆ ಸಚಿವ ಸ್ಥಾನ ನೀಡಿರುವುದು ಕ್ಷೇತ್ರದ ಜನತೆಯಲ್ಲಿ ಪಕ್ಷದ ಬಗ್ಗೆ ಉತ್ತಮ ಭಾವನೆ ಮೂಡಿಸಿದೆ. ಇದು ಕೂಡ ಈ ಬಾರಿ ಮಾಧುಸ್ವಾಮಿ ಗೆಲುವಿಗೆ ಕಾರಣವಾಗಬಹುದು. ಬಿಜೆಪಿ ಅಲೆ ಹಂತ ಹಂತವಾಗಿ ಜೆಡಿಎಸ್ ಅಲೆಯನ್ನು ಕಡಿಮೆ ಮಾಡಿದೆ.

ಕಳೆದ ಬಾರಿ ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್, ಮೇಲೆ ಬರಲಿದೆಯೇ?
ಈ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಚಿಕ್ಕನಾಯಕನಹಳ್ಳಿಯಲ್ಲಿ ಸುತ್ತು ಹಾಕಿದೆ. ಕಾಂಗ್ರೆಸ್‌ಗೆ ಭರ್ಜರಿ ಸ್ವಾಗತ ಕೂಡ ಸಿಕ್ಕಿದೆ. ಆದರೆ, ಅದು ಚುನಾವಣೆಯಲ್ಲಿ ಮತಗಳಾಗಿ ಬದಲಾಗುವ ಸಾಧ್ಯತೆಯಿದೆಯೇ ಎಂಬುದು ಕಾಂಗ್ರೆಸ್ ನಾಯಕರೇ ಚಿಂತಿಸಬೇಕು.
ಕಳೆದ ಬಾರಿ ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರು ತಮ್ಮ ಪುತ್ರ ಸಂತೋಷ್ ಜಯಚಂದ್ರ ಅವರನ್ನು ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಪ್ರಯತ್ನ ಮಾಡಿದ್ದರು. ಆದರೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಭಾಜಪ ಪರವಾದ ಅಲೆ ಬೀಸುತ್ತಿದ್ದ ಕಾರಣ ಕಾಂಗ್ರೆಸ್ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಯಿತು.
ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಂತೋಷ್ ಜಯಚಂದ್ರ 45,893 ಮತ ಪಡೆದಿದ್ದರು, ಗೆದ್ದ ಅಭ್ಯರ್ಥಿ ಮಾಧುಸ್ವಾಮಿ 69,612 ಮತ ಗಳಿಸಿದ್ದರು.
ಜೆಡಿಎಸ್ ಸಿ.ಬಿ.ಸುರೇಶ್ ಬಾಬು ಅವರನ್ನೇ ಅಭ್ಯರ್ಥಿ ಎಂದು ಘೋಷಿಸಿದೆ. ಎಚ್.ಡಿ.ಕುಮಾರಸ್ವಾಮಿ ಕೂಡ ಅವರ ಪರವಾಗಿ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿ ಪ್ರಚಾರ ನೀಡುವ ಕೆಲಸಕ್ಕೆ ಮುನ್ನುಡಿ ಬರೆದಿದ್ದಾರೆ. ಆದರೆ, ಬರೀ ಮನರಂಜನೆಯಿಂದ ಗೆಲುವು ದಕ್ಕದು ಎಂಬುದನ್ನು ಈ ಬಾರಿಯಾದರೂ ಸುರೇಶ್ ಬಾಬು ಅರ್ಥ ಮಾಡಿಕೊಂಡಿದ್ದಾರಾ ನೋಡಬೇಕು.
ಇನ್ನು, ಈ ಬಾರಿಯ ಚುನಾವಣೆಗೆ ಕೆ. ಎಸ್. ಕಿರಣ್ ಕುಮಾರ್ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಹಾಲಿ ಶಾಸಕ, ಸಚಿವ ಜೆ. ಸಿ. ಮಾಧುಸ್ವಾಮಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ. ಮಾಧುಸ್ವಾಮಿ ಪಕ್ಷ ಸೇರುವುದಕ್ಕೂ ಮುನ್ನ ಕಿರಣ್ ಕುಮಾರ್ ಬಿಜೆಪಿಯ ಅಭ್ಯರ್ಥಿಯಾಗಿದ್ದರು. ಹೀಗಾಗಿ ಭಿನ್ನಮತ ಸ್ಪೋಟದಿಂದ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇದು ಬಿಜೆಪಿಗೆ ಹುಳಿಯಾರು ಭಾಗದಲ್ಲಿ ಹಿನ್ನಡೆಗೆ ಕಾರಣವಾಗಲಿದೆ.
ಕಾಂಗ್ರೆಸ್‌ನಿಂದ ಇನ್ನು ಅಭ್ಯರ್ಥಿ ಘೋಷಣೆಯಾಗದ ಹಿನ್ನೆಲೆ ಈ ಬಾರಿ ಹೊಸದಾಗಿ ಪಕ್ಷ ಸೇರಿರುವ ಕಿರಣ್ ಕುಮಾರ್‌ಗೆ ಟಿಕೆಟ್ ಸಿಗಲಿದೆಯೇ ಅಥವಾ ಹಳೆಯ ಕಾಂಗ್ರೆಸ್ ನಾಯಕರಿಗೆ ಟಿಕೆಟ್ ಸಿಗಲಿದೆಯೇ ಎಂಬುದು ಇನ್ನು ನಿಗೂಢವಾಗಿದೆ. ಆದರೆ, ಹಾಲಿ ಶಾಸಕ ಮಾಧುಸ್ವಾಮಿ ಸಿದ್ದರಾಮಯ್ಯ ಅವರಿಗೆ ತಮ್ಮ ವಿರುದ್ಧ ಸ್ಪರ್ಧಿಸಲು ಆಹ್ವಾನ ನೀಡಿದ್ದನ್ನು ಮರೆಯುವಂತಿಲ್ಲ.
ಒಟ್ಟಾರೆ, ಇಬ್ಬರು ನಾಯಕರ ನೇರ ಪೈಪೋಟಿಗೆ ಕಾರಣವಾಗುವ ಚಿಕ್ಕನಾಯಕನಹಳ್ಳಿಯಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿದರೇ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಇಲ್ಲದಿದ್ದರೇ ಮತ್ತೆ ಬಿಜೆಪಿ, ಜೆಡಿಎಸ್ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆಗೆ ಕ್ಷೇತ್ರ ಮತ್ತೊಮ್ಮೆ ಸಾಕ್ಷಿಯಾಗಲಿದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications