ಬಾಡೂಟಕ್ಕೆ ಬಂದು ಸಂಚಲನ ಮೂಡಿಸಿದ ಪ್ರಜ್ವಲ್ ರೇವಣ್ಣ
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ತಾಲೂಕಿನ ಹಳ್ಳಿಯೊಂದರಲ್ಲಿ ನಡೆದ ಊರ ಹಬ್ಬ ಕೊಲ್ಲಾಪುರದಮ್ಮನ ಬಾಡೂಟಕ್ಕೆ ರಾತ್ರೋರಾತ್ರಿ ತನ್ನ ಸ್ನೇಹಿತರೊಂದಿಗೆ ಬಂದು ಹೋಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ತಾಲೂಕಿನ ಭೂತಪ್ಪನಗುಡಿ ಬಳಿಯ ಕುಂಬಾರಹಳ್ಳಿಯಲ್ಲಿ ಕೊಲ್ಲಾಪುರದಮ್ಮನಿಗೆ ಕುರಿ, ಆಡು, ಕೋಳಿ ಬಲಿಯ ಆಚರಣೆ ನಡೆಯಿತು. ಕೋಣನ ಬಲಿಯೂ ನಡೆಯಬೇಕಿತ್ತು,
ಆದರೆ ಈ ವಿಷಯ ಮೊದಲೇ ಪೊಲೀಸರಿಗೆ ಮುಟ್ಟಿದ್ದರಿಂದ ಗ್ರಾಮದಲ್ಲಿ ಪೂರ್ವಭಾವಿ ಸಭೆ ನಡೆಸಿ ಕೋಣನ ಬಲಿ ಕೊಡದಂತೆ ಮನವೊಲಿಸಿದ್ದರು.
ಕೋಣ ಕೈಬಿಟ್ಟರೇನಂತೆ ಅದಕ್ಕಿಂಥ ಹೆಚ್ಚು ಸುಮಾರು ಮೂನ್ನೂರು ಕುರಿ-ಆಡು ಬಲಿಕೊಟ್ಟು, ಸುತ್ತಲಿನ ಹಳ್ಳಿಯ ನೆಂಟರಿಷ್ಟರೆಲ್ಲಾ ಸೇರಿ ಭರ್ಜರಿಯಾಗಿ ಮಾಡಿದ್ದ ಬಾಡೂಟದ ಹಬ್ಬಕ್ಕೆ ಜೆಡಿಎಸ್ ಪ್ರಭಾವಿ ನಾಯಕ ಎಚ್ ಡಿ ರೇವಣ್ಣರ ಮಗ ಪ್ರಜ್ವಲ್ ಬಂದಿರುವುದು ಸ್ವತಃ ತಾಲ್ಲೂಕು ಜೆಡಿಎಸ್ ನಲ್ಲೇ ಅಚ್ಚರಿ, ತಳಮಳ, ಉತ್ಸಾಹ, ಕುತೂಹಲ ಮತ್ತು ಊಹಾಪೋಹಕ್ಕೆ ಕಾರಣವಾಗಿದೆ. (ಪ್ರಜ್ವಲ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ)
ಈಚೆಗಷ್ಟೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಮೊಮ್ಮಗ ಪ್ರಜ್ವಲ್ ಗೆ ಬೆಂಗಳೂರಿನ ಜೆಡಿಎಸ್ ನೂತನ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷದ ಸದಸ್ಯತ್ವ ನೀಡುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಪ್ರಜ್ವಲ್ ಸಕ್ರಿಯ ರಾಜಕಾರಣಕ್ಕೆ ಅಡಿಯಿಡುವ ಸೂಚನೆ ರವಾನಿಸಿದ್ದರು. ಮುಂದೆ ಓದಿ..

ಯುವಕರಲ್ಲಿ ಉತ್ಸಾಹ ಮೂಡಿಸಿದ ಪ್ರಜ್ವಲ್ ಭೇಟಿ
ತಾಲೂಕಿನಲ್ಲಿ ಜೆಡಿಎಸ್ ಒಡೆದ ಮನೆಯಾಗಿದ್ದರೂ ಪ್ರಜ್ವಲ್ ಭೇಟಿ ಜೆಡಿಎಸ್ ಯುವಕರಲ್ಲಿ ಉತ್ಸಾಹ ಮೂಡಿಸಿದೆ. ಆದರೆ ತಾಲೂಕಿನ ಜೆಡಿಎಸ್ ನಾಯಕರಲ್ಲಿ ಅಚ್ಚರಿ, ತಳಮಳ ತಂದಿದೆ. ಏಕೆಂದರೆ ತಾಲೂಕಿನಲ್ಲಿ ಜೆಡಿಎಸ್ ಗೆ ಮಾಜಿ ಸಚಿವ ಬಿ ಸತ್ಯನಾರಾಯಣರ ಏಕ ನಾಯಕತ್ವ ಅಲುಗಿ ಬಹು ನಾಯಕತ್ವ ಸೃಷ್ಟಿಯಾಗಿದೆ. ಆದರೂ ನಿಷ್ಠಾವಂತ ಕಾರ್ಯಕರ್ತರಿಂದ ಸದೃಢವಾಗಿರುವ ಜೆಡಿಎಸ್ ವಿಧಾನಸಭಾ ಟಿಕೆಟ್ ಮೇಲೆ ಹಲವರು ಕಣ್ಣಿಟ್ಟಿದ್ದಾರೆ.

ಬಿ ಸತ್ಯನಾರಾಯಣ
ಇದರ ಭಾಗವಾಗಿಯೇ ಈಗಾಗಲೇ ಮಾಜಿ ಸಚಿವ ಬಿ ಸತ್ಯನಾರಾಯಣ ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಾರೆ ಎಂಬ ವದಂತಿಯೂ ಹರಿದಾಡುತ್ತಿದೆ. ಈ ಮಧ್ಯೆ ಪ್ರಜ್ವಲ್ ಭೇಟಿಗೆ ಮಹತ್ವ ಇಲ್ಲದೆಯೂ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳವನ್ನಂತೂ ಸೃಷ್ಟಿಸಿದೆ.

ಗೆಳೆಯರ ಮನವಿಗೆ ಊರಹಬ್ಬಕ್ಕೆ ಬಂದ ಪ್ರಜ್ವಲ್
ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಕುಂಬಾರಹಳ್ಳಿ ಸಂತೋಷ್, ಪವನ್, ಜೆ.ಹೊಸಹಳ್ಳಿ ಮಂಜುನಾಥ್ ಮನವಿ ಮೇರೆಗೆ ಹಬ್ಬದೂಟಕ್ಕೆ ಬಂದಿದ್ದ ಪ್ರಜ್ವಲ್ ರನ್ನು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ ಆರ್ ಗೌಡ, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶಾಂತ ಗುರುದತ್ತಾತ್ರೇಯ ಸೇರಿದಂತೆ ಜೆಡಿಎಸ್ ಸ್ಥಳೀಯ ಮುಖಂಡರು ಭೇಟಿಯಾಗಿ ಚರ್ಚಿಸಿದರು.

ಸ್ಪರ್ಧಿಸುವಂತೆ ಮನವಿ
ಈ ವೇಳೆ ಕೆಲವರು ತಾಲೂಕಿನಲ್ಲಿ ಜೆಡಿಎಸ್ ಗೆ ನಾಯಕತ್ವದ ಕೊರತೆ ಎದುರಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಇಲ್ಲಿಂದಲೇ ಸ್ಪರ್ಧಿಸುವಂತೆ ಪ್ರಜ್ವಲ್ ಬಳಿ ಮನವಿ ಮಾಡಿದರು. ಆದರೆ ರಾಜಕೀಯವಾಗಿ ಹೆಚ್ಚೇನೂ ಒಳಗುಟ್ಟು ಬಿಟ್ಟುಕೊಡದ ಪ್ರಜ್ವಲ್, ಜೆಡಿಎಸ್ ಎಂದವರೆಲ್ಲರನ್ನೂ ಆತ್ಮೀಯವಾಗಿ ಮಾತಾಡಿಸಿ 'ಊರಹಬ್ಬವೆಂದು ನಮ್ಮ ಹುಡುಗರು ಕರೆದರು, ಬಂದೆ' ಎಂದಷ್ಟೇ ಹೇಳಿದ್ದಾರೆ.

ಪ್ರಜ್ವಲ್, ಶಕ್ತಿ ತುಂಬುವ ಭೇಟಿ
ಆದ್ದರಿಂದ ಪ್ರಜ್ವಲ್ ಈ ಭೇಟಿ ತಾಲ್ಲೂಕಿನಲ್ಲಿ ಹಲವು ನಾಯಕತ್ವದಲ್ಲಿ ಸೊರಗುತ್ತಿರುವ ಜೆಡಿಎಸ್ ಗೆ ಕೇಂದ್ರ ನಾಯಕತ್ವದ ಎಚ್ಚರಿಕೆಯೆಂತಲೂ, ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕಾರ್ಯವೂ ಎಂತಲೂ ವ್ಯಾಖ್ಯಾನಿಸಲಾಗುತ್ತಿದೆ.












Click it and Unblock the Notifications