ಕರ್ನಾಟಕದ ಈ ಸರ್ಕಾರಿ ಶಾಲೆಯಲ್ಲಿ ಒಬ್ಬಳೇ ವಿದ್ಯಾರ್ಥಿನಿ, ಒಬ್ಬರೇ ಶಿಕ್ಷಕಿ
ತುಮಕೂರು, ಮಾರ್ಚ್ 27: ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಯ ಪರಿಸ್ಥಿತಿ ಎಷ್ಟರ ಮಟ್ಟಿಗೆ ದಯಾನೀಯ ಸ್ಥಿತಿಗೆ ತಲುಪುತ್ತಿದೆ ಎಂದರೆ ಒಬ್ಬಳೇ ಬಾಲಕಿ ಒಂದು ಸರ್ಕಾರಿ ಶಾಲೆಯನ್ನು ಮುಚ್ಚದಂತೆ ನೋಡಿಕೊಳ್ಳುತ್ತಿದ್ದಾಳೆ. ಇದು ದೇಶದ ಯಾವುದೋ ಮೂಲೆಯ ಕಥೆಯಲ್ಲ ಇದು ನಮ್ಮ ಕರ್ನಾಟಕದ ತುಮಕೂರು ಜಿಲ್ಲೆಯ ಮಧುಗಿರಿಯ ಮದ್ದೇಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಯಾಗಿದೆ.
ಮದ್ದೇಹಳ್ಳಿ ಗ್ರಾಮದ ಏಳು ವರ್ಷದ ಬಾಲಕಿ ಮಾನಸ 2ನೇತರಗತಿ ಕಲಿಯುತ್ತಿದ್ದು, 25 ವರ್ಷ ಹಳೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮದ್ದೇಹಳ್ಳಿಯನ್ನು ಮುಚ್ಚದೇ, ನಡೆಸಲು ಕಾರಣಳಾಗಿದ್ದಾಳೆ. ಒಂದು ಕಾಲದಲ್ಲಿ ಶೂನ್ಯ ದಾಖಲಾತಿ ಎಂದು ವರದಿಯಾಗಿ ಮುಚ್ಚುವ ಹಂತಕ್ಕೆ ತಲುಪಿದ್ದ ಈ ಶಾಲೆಯಲ್ಲಿ ಈಗ ಒಬ್ಬ ವಿದ್ಯಾರ್ಥಿ ಕಲಿಯುತ್ತಿದ್ದು, ಆಕೆಗಾಗಿ ಒಬ್ಬ ಶಿಕ್ಷಕಿ ಮತ್ತು ಒಬ್ಬ ಅಡುಗೆ ಸಿಬ್ಬಂದಿ ಇದ್ದಾರೆ.

ಸ್ಥಳೀಯ ಅಧಿಕಾರಿಗಳ ಪ್ರಕಾರ, 'ಈ ಶಾಲೆ 10 ವರ್ಷಗಳ ಹಿಂದೆ ಜನಪ್ರಿಯವಾಗಿತ್ತು. ಆದರೆ ಹತ್ತಿರದಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಾದ ಕಾರಣ ಈ ಶಾಲೆಗೆ ದಾಖಲಾತಿ ಕಡಿಮೆಯಾಗುತ್ತಾ ಬಂತು. ಗ್ರಾಮದಲ್ಲಿ ಕೇವಲ 35 ರಿಂದ 40 ಮನೆಗಳಿವೆ ಹೀಗಾಗಿ ಈ ಶಾಲೆಗಳಿಗೆ ದಾಖಲಾಗಲು ಮಕ್ಕಳ ಸಂಖ್ಯೆಯೂ ಕೂಡ ಕಡಿಮೆ ಇದೆ' ಎಂದು ತಿಳಿಸಿದ್ದಾರೆ.
ಇನ್ನು ಮಾನಸಾಳಿಗೆ ಪದ್ಮಕ್ಕ ಎನ್ನುವ ಓರ್ವ ಶಿಕ್ಷಕಿ ಎಲ್ಲಾ ವಿಷಯಗಳನ್ನು ಕಲಿಸುತ್ತಿದ್ದಾರೆ. ಒಂದು ಶಾಲೆಗೆ ಒಬ್ಬಳೇ ವಿದ್ಯಾರ್ಥಿಗೆ ಕಲಿಸುತ್ತಿರುವ ಅನುಭವ ಹಂಚಿಕೊಂಡ ಶಿಕ್ಷಕಿ ಪದ್ಮಕ್ಕ, 'ನನ್ನನ್ನು 2021-22ರಲ್ಲಿ ಈ ಶಾಲೆಗೆ ನಿಯೋಜಿಸಲಾಯಿತು, ಆಗ 10 ವಿದ್ಯಾರ್ಥಿಗಳು ದಾಖಲಾಗಿದ್ದರು. ಕೋವಿಡ್ ನಂತರ ನಾಲ್ಕು ವಿದ್ಯಾರ್ಥಿಗಳು ಬೇರೆ ಶಾಲೆಗೆ ದಾಖಲಾಗಿ, ಆರು ವಿದ್ಯಾರ್ಥಿಗಳು ಮಾತ್ರ ವಾಪಸ್ ಆದರು. ಈಗ ಈ ಹುಡುಗಿ ಮಾನಸ ಒಬ್ಬಳೇ ವಿದ್ಯಾರ್ಥಿನಿಯಾಗಿದ್ದಾಳೆ'.
'ಶಾಲೆಗೆ ಒಬ್ಬಳೇ ವಿದ್ಯಾರ್ಥಿನಿಯಾದರೂ ಕೂಡ ನಾವು ಅವಳಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಅವಳಿಗಾಗಿ ಮಧ್ಯಾಹ್ನದ ಬಿಸಿಯೂಟ ಮಾಡುತ್ತೇವೆ. ಮೊಟ್ಟೆ ನೀಡುತ್ತೇವೆ. ಎಲ್ಲಾ ಸೌಲಭ್ಯಗಳು ಅವಳಿಗೆ ಸಿಗುವಂತೆ ನೋಡಿಕೊಳ್ಳುತ್ತಿದ್ದೇವೆ. ವಿದ್ಯಾರ್ಥಿನಿ ಕೂಡ ತುಂಬಾ ಪ್ರತಿಭಾವಂತಳು. ಚೆನ್ನಾಗಿ ಕಲಿಯುತ್ತಾಳೆ. ಮುಂದಿನ ವರ್ಷ ಈಗ ಅಂಗನವಾಡಿಯಲ್ಲಿರುವ ಒಬ್ಬ ವಿದ್ಯಾರ್ಥಿನಿ ನಮ್ಮ ಶಾಲೆಗೆ ಬರುವ ನಿರೀಕ್ಷೆ ಇದೆ. ಆಕೆಯ ಪೋಷಕರ ಮನವೊಲಿಸಿ ಕರೆದುಕೊಂಡು ಬರುತ್ತೇನೆ' ಎಂದರು.
ಇನ್ನು ಶಾಲೆಯಲ್ಲಿ ಒಬ್ಬಳೇ ಇರುವ ಬಗ್ಗೆ ಮಾತನಾಡಿದ ಮಾನಸ, 'ಕೆಲವೊಮ್ಮೆ ಒಂಟಿ ಅನಿಸುತ್ತದೆ. ತರಗತಿ ಇಲ್ಲದಿದ್ದಾಗ ನನಗೆ ಆಟವಾಡಲು ಯಾರೂ ಇರುವುದಿಲ್ಲ. ಆಗ ನಮ್ಮ ಟೀಚರ್ ನನ್ನೊಂದಿಗೆ ಆಟವಾಡುತ್ತಾರೆ. ಹಾಡು ಹೇಳಿಕೊಡುತ್ತಾರೆ. ಬೇರೆ ಇತರ ವಿಷಯಗಳನ್ನು ಹೇಳಿಕೊಡುತ್ತಾರೆ' ಎಂದು ಹೇಳಿದಳು. ಇನ್ನು ಒಂದೇ ಮಗುವಿರುವ ಈ ಶಾಲೆಯನ್ನು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ, ಒಂದೇ ಒಂದು ದಿನವೂ ಮುಚ್ಚಿಲ್ಲ. ಇಡೀ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕಿ ಪದ್ಮಕ್ಕ ಹಾಗೂ ಮಾನಸ ಒಂದೇ ಒಂದು ದಿನವೂ ಕೂಡ ರಜೆ ಪಡೆಯಲಿಲ್ಲ ಎನ್ನುವುದು ಇಂಟ್ರಸ್ಟಿಂಗ್ ವಿಚಾರವಾಗಿದೆ.












Click it and Unblock the Notifications