ತುಮಕೂರು; ಪತಿ ಐಪಿಎಸ್, ಪತ್ನಿ ಐಎಎಸ್, ಒಂದೇ ಜಿಲ್ಲೆಯಲ್ಲಿ ಕೆಲಸ!
ತುಮಕೂರು, ಸೆಪ್ಟೆಂಬರ್ 13; ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಲವಾರು ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆಯಾಗುತ್ತಿದೆ. ತುಮಕೂರು ಎಸ್‌ಪಿಯಾಗಿ ಐಪಿಎಸ್ ಅಧಿಕಾರಿ ಅಶೋಕ್ ಕೆ. ವಿ. ನೇಮಕಗೊಂಡಿದ್ದಾರೆ. ಸೆಪ್ಟೆಂಬರ್ 7ರಂದು ಅವರು ಅಧಿಕಾರ ಸಹ ಸ್ವೀಕಾರ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ನೂತನ ಎಸ್‌ಪಿ ಅಶೋಕ್ ಕೆ. ವಿ. ಪತ್ನಿ ಐಎಎಸ್ ಅಧಿಕಾರಿ ಅಶ್ವಿಜಾ ಬಿ. ವಿ.. ಅವರು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಒಂದೇ ಜಿಲ್ಲೆಯಲ್ಲಿ, ಒಟ್ಟಿಗೆ ಕೆಲಸ ಮಾಡುವ ಅವಕಾಶ ಪತಿ, ಪತ್ನಿಗೆ ಸಿಕ್ಕಿದೆ.

ಒಂದು ಜಿಲ್ಲೆಯ ಎರಡು ಪ್ರಮುಖ ಹುದ್ದೆಗಳಲ್ಲಿ ಪತಿ, ಪತ್ನಿ ಒಟ್ಟಿಗೆ ಕೆಲಸ ಮಾಡುವ ಅಪರೂಪದ ಸನ್ನಿವೇಶಕ್ಕೆ ತುಮಕೂರು ಜಿಲ್ಲೆ ಸಾಕ್ಷಿಯಾಗಿದೆ. ಅಶೋಕ್ ಕೆ. ವಿ. 2017ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಅಶ್ವಿಜಾ ಬಿ. ವಿ. ಅವರು 2019ನೇ ಬ್ಯಾಚ್‌ನ ಐಎಎಸ್ ಅಧಿಕಾರಿ.
ಇತ್ತೀಚೆಗೆ ವರ್ಗಾವಣೆ; ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರ ಅಶ್ವಿಜಾ ಬಿ. ವಿ. ಅವರನ್ನು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ನೇಮಕ ಮಾಡಿತ್ತು. ತುಮಕೂರು ಎಸ್‌ಪಿಯಾಗಿ ರಾಹುಲ್ ಕುಮಾರ್ ಕೆಲಸ ಮಾಡುತ್ತಿದ್ದರು. ಕಳೆದ ವಾರ ಅವರನ್ನು ವರ್ಗಾವಣೆ ಮಾಡಿದ್ದು, ಅಶೋಕ್ ಕೆ. ವಿ. ನೂತನ ಎಸ್‌ಪಿಯಾಗಿ ನೇಮಕಗೊಂಡಿದ್ದಾರೆ.
ಜುಲೈ ತಿಂಗಳಿನಲ್ಲಿ ಸರ್ಕಾರ ಅಶ್ವಿಜಾ ಬಿ. ವಿ. ವರ್ಗಾವಣೆ ಮಾಡಿತ್ತು. ಇದಕ್ಕೂ ಮೊದಲು ಅವರು ಬೆಂಗಳೂರಿನ ಕಂದಾಯ ಇಲಾಖೆಯಲ್ಲಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ಕಳೆದ ವಾರ ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆಯಾಗಿತ್ತು. ಆಗ ತುಮಕೂರು ಎಸ್‌ಪಿಯಾಗಿದ್ದ ರಾಹುಲ್ ಕುಮಾರ್ ವರ್ಗಾವಣೆಗೊಂಡಿದ್ದರು. ಕರ್ನಾಟಕ ಲೋಕಾಯುಕ್ತ ಎಸ್‌ಪಿಯಾಗಿದ್ದ ಅಶೋಕ್ ಕೆ. ವಿ. ಅವರನ್ನು ತುಮಕೂರು ಎಸ್‌ಪಿಯಾಗಿ ನೇಮಿಸಲಾಗಿತ್ತು.
ಸೆಪ್ಟೆಂಬರ್ 7ರಂದು ಅಶೋಕ್ ಕೆ. ವಿ. ತುಮಕೂರು ನೂತನ ಎಸ್‌ಪಿಯಾಗಿ ನಿರ್ಗಮಿತ ಎಸ್‌ಪಿ ರಾಹುಲ್ ಕುಮಾರ್ ಶಹಾಪುರ್‌ವಾಡ್ ಅವರಿಂದ ಅಧಿಕಾರ ಸ್ವೀಕರಿಸಿದರು. ಗಣೇಶ ಚುತುರ್ಥಿ ಹಿನ್ನಲೆಯಲ್ಲಿ ಅವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಸಭೆಗಳನ್ನು ನಡೆಸುತ್ತಿದ್ದಾರೆ.
ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಜೊತೆ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಗಣೇಶ ಹಬ್ಬದ ಸಂಬಂಧ ಪೂರ್ವಭಾವಿ ಸಭೆಯನ್ನು ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಸಂಘಟನೆಗಳ ಮುಖಂಡರೊಂದಿಗೆ ಅಶೋಕ್ ಕೆ. ವಿ. ನಡೆಸಿದರು. ಈ ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತೆ ಅಶ್ವಿಜಾ ಬಿ. ವಿ. ಸಹ ಪಾಲ್ಗೊಂಡಿದ್ದರು.
ಪತಿ ಮತ್ತು ಪತ್ನಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಅನೇಕ ಉದಾಹರಣೆಗಳಿವೆ. ಒಂದೇ ಇಲಾಖೆಯಲ್ಲಿ, ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅವರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ತುಮಕೂರಿನಲ್ಲಿ ಪತಿ ಮತ್ತು ಪತ್ನಿ ಒಟ್ಟಿಗೆ ಕಾರ್ಯ ನಿರ್ವಹಣೆ ಮಾಡಲು ಅವಕಾಶ ಸಿಕ್ಕಿದೆ.












Click it and Unblock the Notifications