Copra: ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ಧಾರಣೆ ದಿಢೀರ್ ಭಾರಿ ಕುಸಿತ
Copra Price: ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿ ರಾಜ್ಯದಲ್ಲೇ ಪ್ರಸಿದ್ಧ ಕೊಬ್ಬರಿ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇದೀಗ ಇಲ್ಲಿನ ಕೊಬ್ಬರಿ ಧಾರಣೆ ದಿಢೀರ್ ಇಳಿಕೆಯಾಗಿದ್ದು, ಇದರಿಂದ ಬೆಳೆಗಾರರು ಆತಂಕಕ್ಕೆ ಕಾರಣವಾಗಿದೆ.
ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಗಳಾದ ತಿಪಟೂರು ಮತ್ತು ಅರಸೀಕೆರೆಯಲ್ಲಿ ಉಂಡೆ ಕೊಬ್ಬರಿ ದರದಲ್ಲಿ ದಿಢೀರ್ ಕುಸಿತ ಕಂಡುಬಂದಿದ್ದು, ಬೆಳೆಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿರುವುದು ಹಾಗೂ ನೆರೆ ರಾಜ್ಯ ತಮಿಳುನಾಡಿನಿಂದ ಕೊಬ್ಬರಿ ಆವಕ ಹೆಚ್ಚಿರುವುದು ಈ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಅಂತಾ ಪ್ರಜಾವಾಣಿ ವರದಿ ಮಾಡಿದೆ.

ಕೊಬ್ಬರಿ ಧಾರಣೆ ದಿಢೀರ್ ಇಳಿಕೆ
ಕಳೆದ ಜುಲೈ ತಿಂಗಳಿನಲ್ಲಿ ಕ್ವಿಂಟಾಲ್‌ಗೆ ₹31,866 ರಿಂದ ₹32,288 ರವರೆಗೆ ಮಾರಾಟವಾಗುತ್ತಿದ್ದ ಕೊಬ್ಬರಿ ಬೆಲೆ, ಇದೀಗ ₹28,000 ಆಸುಪಾಸಿಗೆ ಕುಸಿದಿದೆ. ಈಗಿನ ವಹಿವಾಟಿನಲ್ಲಿ ಅರಸೀಕೆರೆ ಮಾರುಕಟ್ಟೆಯಲ್ಲಿ ₹28,030 ಹಾಗೂ ತಿಪಟೂರಿನಲ್ಲಿ ₹27,900 ದರ ದಾಖಲಾಗಿದೆ. ಜುಲೈಗೆ ಹೋಲಿಕೆ ಮಾಡಿದರೆ ಪ್ರಸ್ತುತ ಕ್ವಿಂಟಾಲ್‌ಗೆ ಸುಮಾರು 3,000 ರೂಪಾಯಿ ಇಳಿಕೆ ಆದಂತಾಗಿದೆ.
ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳು
* ತೆಂಗಿನಕಾಯಿಯನ್ನು ಅರ್ಧಕ್ಕೆ ಕತ್ತರಿಸಿ ಬಾಯ್ಲರ್‌ನಲ್ಲಿ ಒಣಗಿಸಿ ತಯಾರಿಸುವ 'ವಾಟಿ ಕೊಬ್ಬರಿ' ಕೇರಳ ಮತ್ತು ತಮಿಳುನಾಡಿನಿಂದ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ವಾಟಿ ಕೊಬ್ಬರಿ ಸಗಟು ದರದಲ್ಲಿ ಕೆ.ಜಿಗೆ ₹150-160 ಹಾಗೂ ಚಿಲ್ಲರೆಯಾಗಿ ₹170-180ಕ್ಕೆ ಸಿಗುತ್ತಿದೆ. ಆದರೆ ಕರ್ನಾಟಕದ ಉತ್ತಮ ಒಣಕೊಬ್ಬರಿ ಬೆಲೆ ಕೆ.ಜಿಗೆ 300-320 ರೂಪಾಯಿನಷ್ಟಿದೆ. ಒಂದು ಕೆ.ಜಿ ಒಣಕೊಬ್ಬರಿ ದರದಲ್ಲಿ ಎರಡು ಕೆ.ಜಿ ವಾಟಿ ಕೊಬ್ಬರಿ ಸಿಗುತ್ತಿರುವುದರಿಂದ ಗ್ರಾಹಕರು ಮತ್ತು ಕೈಗಾರಿಕೆಗಳು ಕಡಿಮೆ ದರದ ವಾಟಿ ಕೊಬ್ಬರಿಯತ್ತ ಮುಖ ಮಾಡುತ್ತಿವೆ.
* ದೇಶದ ಶೇಕಡ 92ರಷ್ಟು ತೆಂಗು ಉತ್ಪಾದನೆಯು ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದಲೇ ಬರುತ್ತದೆ. ಪ್ರಸಕ್ತ ವರ್ಷ ಈ ಎಲ್ಲಾ ರಾಜ್ಯಗಳಲ್ಲಿ ತೆಂಗಿನ ಇಳುವರಿ ಹೆಚ್ಚಾಗಿದ್ದು, ಮಾರುಕಟ್ಟೆಗೆ ಕೊಬ್ಬರಿ ಪೂರೈಕೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.
* ಪಶ್ಚಿಮ ಏಷ್ಯಾ ಹಾಗೂ ಗಲ್ಫ್ ದೇಶಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಭಾರತದಿಂದ ಕೊಬ್ಬರಿ ಮತ್ತು ತೆಂಗಿನ ಉತ್ಪನ್ನಗಳ ರಫ್ತು ಕಡಿಮೆಯಾಗಿದೆ. ಇದರಿಂದ ರಫ್ತಾಗಬೇಕಿದ್ದ ಕೊಬ್ಬರಿ ದೇಶೀಯ ಮಾರುಕಟ್ಟೆಯಲ್ಲೇ ಉಳಿದು ಒತ್ತಡ ಹೆಚ್ಚಾಗಿದೆ.
ತಮಿಳುನಾಡು ಮಿಲ್‌ಗಳಿಂದ ಖರೀದಿ ಸ್ಥಗಿತ
ತಮಿಳುನಾಡಿನ ತೈಲ ಮಿಲ್‌ಗಳು ಹಾಗೂ ತೆಂಗಿನಕಾಯಿ ಪುಡಿ ತಯಾರಿಕಾ ಘಟಕಗಳು ಕರ್ನಾಟಕದಿಂದ ಕೊಬ್ಬರಿ ಖರೀದಿಸುವುದನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿದ್ದು, ಕೆಲವು ಘಟಕಗಳು ಖರೀದಿಯನ್ನೇ ನಿಲ್ಲಿಸಿವೆ. ಜೊತೆಗೆ ಇಂಡೋನೇಷ್ಯಾದಿಂದಲೂ ಕಡಿಮೆ ದರಕ್ಕೆ ಕೊಬ್ಬರಿ ಆಮದು ಆಗುತ್ತಿರುವುದು ಬೆಲೆಯ ಮೇಲೆ ದುಷ್ಪರಿಣಾಮ ಬೀರಿದೆ.
ಕೇಂದ್ರ ಸರ್ಕಾರ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದೆ. ಆದರೂ, ಸ್ಥಳೀಯ ನಾಫೆಡ್ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಖರೀದಿ ಪ್ರಕ್ರಿಯೆ ಆರಂಭಿಸಿಲ್ಲ. ಇದರಿಂದ ರೈತರು ಬೇರೆ ದಾರಿಯಿಲ್ಲದೆ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಕೊಬ್ಬರಿ ಮಾರಾಟ ಮಾಡುತ್ತಿದ್ದಾರೆ.
ಎಲ್ಲೆಲ್ಲಿ ಕೊಬ್ಬರಿ ಎಣ್ಣೆ ದರ ಇಳಿಕೆ?
ಕೊಬ್ಬರಿ ಬೆಲೆ ಕುಸಿದ ಹಿನ್ನೆಲೆಯಲ್ಲಿ ಎಣ್ಣೆ ದರದಲ್ಲೂ ಇಳಿಕೆಯಾಗಿದೆ. ತಮಿಳುನಾಡಿನಲ್ಲಿ ಕೊಬ್ಬರಿ ಎಣ್ಣೆ ಲೀಟರ್‌ಗೆ ₹320 ರಿಂದ ₹280ಕ್ಕೆ ಮತ್ತು ಕೇರಳದ ಎಣ್ಣೆ ₹390 ರಿಂದ ₹350ಕ್ಕೆ ಇಳಿದಿದೆ. ಕರ್ನಾಟಕದ ಮಂಗಳೂರು ಕೊಬ್ಬರಿ ಎಣ್ಣೆ ಪ್ರಸ್ತುತ ಲೀಟರ್‌ಗೆ 340 ರಿಂದ 370 ರೂಪಾಯಿವರೆಗೆ ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ.
ಮುಂಬರುವ ದಸರಾ ಮತ್ತು ದೀಪಾವಳಿ ಹಬ್ಬಗಳ ಸಮಯದಲ್ಲಿ ದೇಶೀಯ ಬೇಡಿಕೆ ಹೆಚ್ಚಾಗಿ ಬೆಲೆಯಲ್ಲಿ ಚೇತರಿಕೆ ಕಾಣುವ ಸಾಧ್ಯತೆಯಿದೆ. ಆದ್ದರಿಂದ ರೈತರು ಆತಂಕಕ್ಕೆ ಒಳಗಾಗಿ ಅವಸರದಲ್ಲಿ ಕಡಿಮೆ ಬೆಲೆಗೆ ಕೊಬ್ಬರಿ ಮಾರಾಟ ಮಾಡದೆ, ಸಾಧ್ಯವಾದರೆ ದಾಸ್ತಾನು ಮಾಡಿಕೊಂಡು ಉತ್ತಮ ಬೆಲೆ ಬಂದಾಗ ಮಾರಾಟ ಮಾಡುವುದು ಸೂಕ್ತ ಎನ್ನುವ ಸಲಹೆಗಳು ಕೇಳಿಬರುತ್ತಿವೆ.


Click it and Unblock the Notifications
