Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ
Copra Price: ತೆಂಗು ಬೆಳೆಗಾರರ ದಶಕಗಳ ನಿರೀಕ್ಷೆ ಕೊನೆಗೂ ಈಡೇರಿದೆ. ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದ್ದು, ಪ್ರತಿ ಕ್ವಿಂಟಲ್‌ಗೆ 36,000 ರೂಪಾಯಿ ಗಡಿ ದಾಟಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.
ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿಯ ಧಾರಣೆ ಗಗನಕ್ಕೆ ಜಿಗಿದಿದೆ. ಕೇವಲ ಮೂರೇ ದಿನಗಳಲ್ಲಿ 4,000 ರೂಪಾಯಿ ಏರಿಕೆ ಕಾಣುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿರುವ ಈ ಬೆಲೆ ಏರಿಕೆಯ ಹಿಂದಿನ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಹೊಸ ದಾಖಲೆ ಬರೆದ ಕೊಬ್ಬರಿ ಬೆಲೆ
ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿಯ ಬೆಲೆ ಗಗನಕ್ಕೇರಿದ್ದು, ಹೊಸ ಇತಿಹಾಸ ಸೃಷ್ಟಿಸಿದೆ. ಗುರುವಾರ ನಡೆದ ಹರಾಜಿನಲ್ಲಿ ಉಂಡೆ ಕೊಬ್ಬರಿ ಕ್ವಿಂಟಲ್‌ಗೆ 36,006 ರೂಪಾಯಿಗೆ ಮಾರಾಟವಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ಮಾರುಕಟ್ಟೆಗೆ ಕೊಬ್ಬರಿಯ ಪೂರೈಕೆ ತೀವ್ರವಾಗಿ ಕಡಿಮೆಯಾಗಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣ. ಗುರುವಾರ ಕೇವಲ 1,482 ಕ್ವಿಂಟಲ್ ಕೊಬ್ಬರಿ ಮಾತ್ರ ಮಾರುಕಟ್ಟೆಗೆ ಬಂದಿತ್ತು.
ಮೂರೇ ದಿನಗಳಲ್ಲಿ 4,000 ರೂಪಾಯಿ ಏರಿಕೆ
ಏಪ್ರಿಲ್ 6ರಂದು ನಡೆದ ಹರಾಜಿನಲ್ಲಿ ಕ್ವಿಂಟಲ್‌ಗೆ ₹32,218 ಇತ್ತು. ಈಗ ಕೇವಲ ಮೂರೇ ದಿನಗಳಲ್ಲಿ ಸುಮಾರು 4,000 ರೂಪಾಯಿ ಏರಿಕೆ ಕಂಡಿದೆ. ಗರಿಷ್ಠ ಬೆಲೆ 36,006 (ಕ್ವಿಂಟಲ್‌ಗೆ) ರೂಪಾಯಿ, ಮಾದರಿ 32,000 ರೂಪಾಯಿ, ಕನಿಷ್ಠ ಬೆಲೆ 30,500 ರೂಪಾಯಿ ಇದೆ. ಕೊಬ್ಬರಿಗೆ ಹೆಚ್ಚಿನ ಬೇಡಿಕೆ ಇಲ್ಲದಿದ್ದರೂ, ಮಾರುಕಟ್ಟೆಗೆ ಬರುತ್ತಿರುವ ಅತ್ಯಲ್ಪ ಪ್ರಮಾಣದ ಸರಕು ಬೆಲೆ ಏರಿಕೆಗೆ ಪ್ರಮುಖ ದಾರಿಯಾಗಿದೆ. ಇದರಿಂದ ತೆಂಗು ಬೆಳೆಗಾರರಲ್ಲಿ ಸಂತಸ ಮೂಡಿದಂತಾಗಿದೆ.
ಬೆಲೆ ಏರಿಕೆಯ ಹಿಂದಿನ ಅಸಲಿ ಕಾರಣವೇನು?
ಈ ದಿಢೀರ್ ಏರಿಕೆಗೆ ಮಾರುಕಟ್ಟೆಗೆ ಆಗಮಿಸುತ್ತಿರುವ ಕೊಬ್ಬರಿಯ ಪ್ರಮಾಣ ತೀವ್ರವಾಗಿ ಕುಸಿದಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ. ಗುರುವಾರದ ಹರಾಜು ಪ್ರಕ್ರಿಯೆಗೆ ಕೇವಲ 1,482 ಕ್ವಿಂಟಲ್ (ಸುಮಾರು 3,447 ಚೀಲ) ಕೊಬ್ಬರಿ ಮಾತ್ರ ಪೂರೈಕೆ ಆಗಿತ್ತು. ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಕೊಬ್ಬರಿ ಲಭ್ಯವಿಲ್ಲದ ಕಾರಣ, ವರ್ತಕರ ನಡುವಿನ ಪೈಪೋಟಿಯಿಂದಾಗಿ ಬೆಲೆ ಗಗನಕ್ಕೇರಿದೆ.
ಬೆಳೆಗಾರರ ಮುಖದಲ್ಲಿ ಹೆಚ್ಚಿದ ಮಂದಹಾಸ
ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ಕೊಬ್ಬರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ ಈಗ ಯಾವುದೇ ವಿಶೇಷ ಬೇಡಿಕೆ ಇಲ್ಲದಿದ್ದರೂ, ಪೂರೈಕೆಯ ಕೊರತೆಯಿಂದಾಗಿ ಸಿಗುತ್ತಿರುವ ಈ ಬಂಪರ್ ಬೆಲೆ ಬೆಳೆಗಾರರಲ್ಲಿ ಹರ್ಷ ತಂದಿದೆ. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೊರರಾಜ್ಯಗಳಿಂದಲೂ ಭಾರಿ ಬೇಡಿಕೆ
ತಿಪಟೂರು ಉಂಡೆ ಕೊಬ್ಬರಿಗೆ ಕೇವಲ ರಾಜ್ಯದಲ್ಲಷ್ಟೇ ಅಲ್ಲದೆ, ಉತ್ತರ ಭಾರತದ ರಾಜ್ಯಗಳಾದ ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಹಬ್ಬಗಳ ಸೀಸನ್ ಇಲ್ಲದಿದ್ದರೂ ಸಹ, ದಾಸ್ತಾನು ಮಳಿಗೆಗಳಲ್ಲಿ ಕೊಬ್ಬರಿಯ ಸಂಗ್ರಹ ಖಾಲಿ ಆಗುತ್ತಿರುವುದು ವರ್ತಕರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಲಭ್ಯವಿರುವ ಅತ್ಯಲ್ಪ ಪ್ರಮಾಣದ ಗುಣಮಟ್ಟದ ಕೊಬ್ಬರಿಯನ್ನು ಹೆಚ್ಚಿನ ದರ ನೀಡಿ ಖರೀದಿಸಲು ದೊಡ್ಡ ವರ್ತಕರು ಮುಂದೆ ಬರುತ್ತಿದ್ದಾರೆ.
ಬೆಳೆಗಾರರು ಗಮನಿಸಬೇಕಾದ ಪ್ರಮುಖ ಅಂಶಗಳು
ಸದ್ಯ ಮಾರುಕಟ್ಟೆಯಲ್ಲಿ ಗುಣಮಟ್ಟದ ಉಂಡೆ ಕೊಬ್ಬರಿಗೆ ಮಾತ್ರ ಸಾರ್ವಕಾಲಿಕ ದಾಖಲೆಯ ಬೆಲೆ ಸಿಗುತ್ತಿದೆ. ಸರಿಯಾಗಿ ಒಣಗದ ಅಥವಾ ಕಪ್ಪು ಬಣ್ಣಕ್ಕೆ ತಿರುಗಿದ ಕೊಬ್ಬರಿಗೆ ನಿರೀಕ್ಷಿತ ದರ ಸಿಗದಿರಬಹುದು. ಹಾಗಾಗಿ ಸಂಸ್ಕರಣೆಯ ಕಡೆಗೆ ಗಮನಹರಿಸಿ. ಸರ್ಕಾರಿ ಅಥವಾ ಖಾಸಗಿ ಗೋದಾಮುಗಳಲ್ಲಿ ವೈಜ್ಞಾನಿಕವಾಗಿ ಕೊಬ್ಬರಿಯನ್ನು ದಾಸ್ತಾನು ಮಾಡುವ ಮೂಲಕ, ಬೆಲೆ ಇನ್ನೂ ಹೆಚ್ಚಾದಾಗ ಮಾರಾಟ ಮಾಡುವ ದಾರಿಯನ್ನು ರೈತರು ಕಂಡುಕೊಳ್ಳಬೇಕು ಎಂಬುದು ಹಲವು ತಜ್ಞರ ಅಭಿಪ್ರಾಯವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಬೆಲೆ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರಲ್ಲಿ ಈ ಸಾರ್ವಕಾಲಿಕ ದಾಖಲೆಯ ಬೆಲೆ ಹೊಸ ಭರವಸೆಯನ್ನು ಹುಟ್ಟುಹಾಕಿರುವುದಂತೂ ಸತ್ಯ.












Click it and Unblock the Notifications