Honeytrap: ತುಮಕೂರು ಜಿಲ್ಲೆಯ ಕಾಂಗ್ರೆಸ್ ನಾಯಕರ ನಡುವೆ ಶೀತಲ ಸಮರ!
ಮಧುಗಿರಿ ಶಾಸಕ, ಸಚಿವ ಕೆ.ಎನ್. ರಾಜಣ್ಣ ಹನಿಟ್ರ್ಯಾಪ್ ಬಗ್ಗೆ ನೀಡಿರುವ ಹೇಳಿಕೆ ಸದ್ಯ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಸದ್ಯ ಹನಿಟ್ರ್ಯಾಪ್ ಬಗ್ಗೆ ತಮ್ಮದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಎನ್ ರಾಜಣ್ಣ ನೀಡಿರುವ ಹೇಳಿಕೆ ಇದೀಗ ಕಾಂಗ್ರೆಸ್‌ನಲ್ಲೇ ಹೆಚ್ಚು ತಲ್ಲಣ ಮೂಡಿಸಿದೆ. ತುಮಕೂರು ಜಿಲ್ಲೆಯಲ್ಲಿ ಇದೀಗ ಇದೇ ವಿಚಾರಕ್ಕೆ ಬಣ ಜಗಳ ಶುರುವಾಗಿದೆ.
ಸಚಿವ ಕೆಎನ್ ರಾಜಣ್ಣ ಮತ್ತು ಅವರ ಮಗ ರಾಜೇಂದ್ರ ವಿರುದ್ಧ ಗುಬ್ಬಿ ಶಾಸಕರು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎರಡೂ ಬಣಗಳು ಪೋಸ್ಟ್ ವಾರ್ ಶುರುವಾಗಿದೆ. ಗುಬ್ಬಿ ಶಾಸಕ ಶ್ರೀನಿವಾಸ್ ಬೆಂಬಲಿಗರು ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಣ್ಣ ಮತ್ತು ಪುತ್ರ ರಾಜೇಂದ್ರ ಕಾಲು ಎಳೆದಿದ್ದಾರೆ. ರಾಜೇಂದ್ರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ರೆಡಿ ಹನಿಟ್ರ್ಯಾಪ್ ಕಹಾನಿ ಎಂದು ವ್ಯಂಗ್ಯವಾದ ಪೋಸ್ಟ್ ಹಾಕಿದ್ದಾರೆ. ಸದ್ಯ ಪೋಸ್ಟ್ ವೈರಲ್ ಆಗಿದೆ.

ನೇರವಾಗಿ ಟೀಕೆ ಮಾಡದೇ ಇದ್ದರೂ ಪರೋಕ್ಷವಾಗಿಯೇ ಹೇಳಿಕೆಗಳನ್ನು ನೀಡುವ ಮೂಲಕ ಶಾಸಕ ಗುಬ್ಬಿ ಶ್ರೀನಿವಾಸ್ ಕೆಎನ್ ರಾಜಣ್ಣ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಕೆಎನ್ ರಾಜಣ್ಣ ಮತ್ತು ಅವರ ಮಗ ರಾಜೇಂದ್ರ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎನ್ನುವ ಸುದ್ದಿ ಸಂಚಲನ ಮೂಡಿಸಿದೆ.
ಗುಬ್ಬಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಜಿ. ಎನ್. ಅಣ್ಣಪ್ಪಸ್ವಾಮಿ ಅವರನ್ನು ಹನಿಟ್ರ್ಯಾಪ್ ಮಾಡಿದ್ದು 20 ಲಕ್ಷ ರೂಪಾಯಿ ಸುಲಿಗೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಪ್ರಕರಣದ ಬಗ್ಗೆ ಗುಬ್ಬಿ ಶ್ರೀನಿವಾಸ್ ಯಾರ ಹೆಸರನ್ನೂ ಉಲ್ಲೇಖಿಸದೇ ಹೇಳಿಕೆಯನ್ನು ನೀಡಿದ್ದಾರೆ.
ಇಂತಹ ಪ್ರಕರಣಗಳು ಸಭ್ಯ ಸಮಾಜದಲ್ಲಿ ಭಯ ಮತ್ತು ಆತಂಕ ಮೂಡಿಸುತ್ತವೆ. ಇಂತಹ ಹೀನ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಪೊಲೀಸರು ಪ್ರಕರಣದ ಬಗ್ಗೆ ತ್ವರಿತವಾಗಿ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.
ಒಟ್ಟಾರೆ ಹನಿಟ್ರ್ಯಾಪ್ ಆರೋಪ ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications