ಶಿರಾದಲ್ಲಿ ಕಾಂಗ್ರೆಸ್, ಜೆಡಿಎಸ್ ಹೋರಾಟ 2ನೇ ಸ್ಥಾನಕ್ಕಾಗಿ; ಬಿಎಸ್‌ವೈ
ತುಮಕೂರು, ಅಕ್ಟೋಬರ್ 30: " ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಹೋರಾಟ ಎರಡನೇ ಸ್ಥಾನಕ್ಕಾಗಿ" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಅಂಗವಾಗಿ ಶುಕ್ರವಾರ 'ವಿಜಯ ಸಂಕಲ್ಪ ಸಮಾವೇಶ' ಉದ್ದೇಶಿಸಿ ಯಡಿಯೂರಪ್ಪ ಮಾತನಾಡಿದರು. ಪಕ್ಷದ ಅಭ್ಯರ್ಥಿ ಡಾ. ರಾಜೇಶ್ ಗೌಡ ಪರವಾಗಿ ಮತಯಾಚನೆ ಮಾಡಿದರು.
ಈ ಸಮಾವೇಶದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ನಾರಾಯಣ ಗೌಡ, ಶ್ರೀರಾಮುಲು, ಸಂಸದ ಪ್ರತಾಪ ಸಿಂಹ, ಎ. ನಾರಾಯಣಸ್ವಾಮಿ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು.
ಶಿರಾದ ಮದಲೂರಿನಲ್ಲಿ ನಡೆದ ಸಮಾವೇಶದಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಜನರು ಸೇರಿದ್ದರು. ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೂಲಕ ಮೊದಲ ಬಾರಿಗೆ ಶಿರಾ ಉಪ ಚುನಾವಣೆಗೆ ಯಡಿಯೂರಪ್ಪ ಪ್ರಚಾರ ನಡೆಸಿದರು.

ಇಲ್ಲಿ ಸೇರಿರುವ ಜನರು ಸಾಕ್ಷಿ
"ಶಿರಾದಲ್ಲಿ ಬಿಜೆಪಿ ಗೆಲುವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂಬುದಕ್ಕೆ ಇಲ್ಲಿ ಸೇರಿರುವ ಸಾವಿರಾರು ಜನರೇ ಸಾಕ್ಷಿ. ಕಾಂಗ್ರೆಸ್ ಮತ್ತು ಜೆಡಿಎಸ್ ಹೋರಾಟ ಎರಡನೇ ಸ್ಥಾನಕ್ಕಾಗಿ" ಎಂದು ಬಿ. ಎಸ್. ಯಡಿಯೂರಪ್ಪ ಹೇಳಿದರು.

ಮದಲೂರು ಕೆರೆಯನ್ನು ತುಂಬಿಸಬೇಕು
"ಮದಲೂರು ಕೆರೆ ತುಂಬಿಸಬೇಕು ಎಂಬುದು ಇಲ್ಲಿನ ಜನರ ಆಪೇಕ್ಷೆಯಾಗಿದೆ. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೇ ಕಾಲುವೆ ನಿರ್ಮಾಣ ಮಾಡಲು ಹಣ ಬಿಡುಗಡೆ ಮಾಡಿದ್ದೆ. ಅದೇ ರೀತಿ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ರಚನೆ ಮಾಡಲಾಗಿದೆ" ಎಂದು ಯಡಿಯೂರಪ್ಪ ಹೇಳಿದರು.

6 ತಿಂಗಳ ಒಳಗೆ ತುಂಬಿಸುತ್ತೇವೆ
"ನಿಮ್ಮ ಯಡಿಯೂರಪ್ಪ ಒಂದು ಸಾರಿ ಭರವಸೆಯನ್ನು ಕೊಟ್ಟರೆ ಎಂದಿಗೂ ತಪ್ಪಲಾರರು. ಇನ್ನು ಆರು ತಿಂಗಳಿನಲ್ಲಿ ಮದಲೂರು ಕೆರೆಯನ್ನು ತುಂಬಿಸಿ ನಾನೇ ಬಂದು ಉದ್ಘಾಟನೆ ಮಾಡುತ್ತೇನೆ" ಎಂದು ಬಿ. ಎಸ್. ಯಡಿಯೂರಪ್ಪ ಭರವಸೆ ನೀಡಿದರು.

ಹಲವಾರು ಭವರಸೆ ನೀಡಿದರು
"ಹೇಮಾವತಿ ನದಿ ನೀರಿನಿಂದ ಮದಲೂರು ಕೆರೆ ತುಂಬಿಸಲಾಗುತ್ತದೆ, ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲಾಗುತ್ತದೆ, ಬಗರ್ ಹುಕುಂನಲ್ಲಿ ವ್ಯವಸಾಯ ಮಾಡುತ್ತಿರುವ ರೈತರ ಭೂಮಿಯನ್ನು ಖಾಯಂ ಮಾಡಿಕೊಡಲಾಗುತ್ತದೆ" ಎಂದು ಯಡಿಯೂರಪ್ಪ ಭರವಸೆ ಕೊಟ್ಟರು.












Click it and Unblock the Notifications