ಖಾಸಗಿ ಬಸ್ ಅಪಘಾತ; ಪಾವಗಡದ ರಸ್ತೆ ಮೇಲೆ, ಬೇಲಿ ಮೇಲೆಯೂ ಬಿದ್ದ ಶವಗಳು
ತುಮಕೂರು, ಮಾರ್ಚ್ 19: ತುಮಕೂರು ಜಿಲ್ಲೆಯ ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಹೊರಟಿದ್ದ ಖಾಸಗಿ ಬಸ್ ಪಳವಳ್ಳಿ ಕಟ್ಟೆಯ ಕೆರೆ ಏರಿ ಮೇಲೆ ಪಲ್ಟಿಯಾಗಿ 5 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶನಿವಾರ ಬೆಳಗ್ಗೆ ಶ್ರೀನಿವಾಸ್ ಮೂರ್ತಿ ಒಡೆತನದ ಎಸ್‌ವಿಟಿ ಖಾಸಗಿ ಬಸ್ ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಹೋಗುತ್ತಿತ್ತು. ಬಸ್ ಟಾಪ್‌ನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಕುಳಿತಿದ್ದರು. ಆದರೆ ಬಸ್ ಓವರ್ ಲೋಡ್ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಕೆರೆ ಏರಿ ಮೇಲೆ ಬಸ್ ಉರುಳಿದೆ. ಇದರಿಂದಾಗಿ 5 ಮಂದಿ ಸಾವನ್ನಪ್ಪಿದ್ದು, ಪಾವಗಡದ ರಸ್ತೆ ಮೇಲೆ, ಬೇಲಿ ಮೇಲೆಯೂ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ವೈ.ಎನ್. ಹೋಸಕೋಟೆಯ ಕಲ್ಯಾಣ (18), ಬೆಸ್ತರಹಳ್ಳಿ ನಿವಾಸದ ಶಹನವಾಜ್ (20), ಸೂಲನಾಯಕನಹಳ್ಳಿಯ ಅಮೂಲ್ಯ (17), ಅಜಿತ್ (28) ಮೃತರ ಗುರುತು ಪತ್ತೆಯಾಗಿದೆ. ಮೃತರೆಲ್ಲರೂ ತಿರುಮಣಿ, ಪಳವಳ್ಳಿ, ವೈ.ಎನ್. ಹೊಸಕೋಟೆ ಮೂಲದವರಾಗಿದ್ದಾರೆ.

ಮೃತದೇಹ ಎಲ್ಲೆಂದರಲ್ಲಿ ಬಿದ್ದಿದೆ. ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರು ಬಸ್ ಚಕ್ರಕ್ಕೆ ಸಿಲುಕಿದ್ದರೆ, ಇನ್ನು ಕೆಲವರು ಕೆರೆಗೆ ಬಿದ್ದಿದ್ದಾರೆ. ಕೆರೆಯಲ್ಲಿ ಬಿದ್ದ ಪ್ರಯಾಣಿಕರು ಮೇಲೆ ಬರುತ್ತಿದ್ದಾರೆ. ಮತ್ತೆ ಕೆಲವರು ರಸ್ತೆ ಪಕ್ಕದ ಬೇಲಿ ಮೇಲೆ ಬಿದ್ದಿದ್ದು, ಈಗಾಗಲೇ ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ.
ಪ್ರತಿ ದಿನ ಪಾವಗಡ- ವೈ.ಎನ್. ಕೋಟೆ ಮಧ್ಯೆ ಈ ಬಸ್ ಸಂಚರಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿ ಪಳವಳ್ಳಿಯ ವೆಂಕಟೇಶ್ ಮಾಹಿತಿ ನೀಡಿದ್ದಾರೆ. ಅಪಘಾತ ಸಂಭವಿಸಿದ ಪಳವಳ್ಳಿ ಕಟ್ಟೆ ಬಳಿ ನೂರಾರು ಜನರು ಜಮಾವಣೆಯಾಗಿದ್ದಾರೆ.

ಸ್ಥಳದಲ್ಲಿ ಗುಂಪುಗೂಡಿದ್ದ ಜನರನ್ನು ಪೊಲೀಸರು ಚದುರಿಸಿದ್ದಾರೆ. ಗಾಯಾಳುಗಳಿಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೆಲ ಗಾಯಾಳುಗಳು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಪಾವಗಡ ತಾಲೂಕು ಪಳವಳ್ಳಿ ಕಟ್ಟೆ ಬಸ್ ಅಪಘಾತದಲ್ಲಿ 5 ಜನರು ಮೃತಪಟ್ಟಿದ್ದು, 4 ಮೃತ ದೇಹಗಳ ರವಾನೆ ಆಗಿದೆ. ಸಾಕಷ್ಟು ಜನರಿಗೆ ಗಂಭೀರ ಗಾಯ ಆಗಿದೆ. ಅತಿಯಾದ ವೇಗದ ಚಾಲನೆಯಿಂದಾಗಿ ಅಪಘಾತವಾಗಿದೆ. ಸ್ಥಳೀಯವಾಗಿ ಎಲ್ಲಾ ತುರ್ತು ಆರೋಗ್ಯ ಸೇವೆ ಉಪಯೋಗಿಸಿಕೊಳ್ಳಲಾಗುತ್ತಿದೆ ಎಂದು ತುಮಕೂರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದ್ದಾರೆ.
50ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದು, ಬಸ್‌ನ ಟಾಪ್‌ನಲ್ಲಿ ಕುಳಿತ್ತಿದ್ದವರೇ ಸಾವನ್ನಪ್ಪಿದ್ದಾರೆ. ಚಾಲಕನ ನಿರ್ಲಕ್ಷ್ಯದಿಂದ ಕೆರೆ ಕಟ್ಟೆ ಮೇಲೆ ಬಸ್ ಉರುಳಿದೆ ಎಂದು ತುಮಕೂರು ಎಸ್ಪಿ ರಾಹುಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಬಸ್‌ನಲ್ಲಿದ್ದ ಕೆಲವರ ಸ್ಥಿತಿ ಗಂಭೀರವಾಗಿದೆ. ಗಂಭೀರ ಗಾಯಗೊಂಡವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ಪಾವಗಡ ಶಾಸಕ ವೆಂಕಟರಮಣಪ್ಪ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಅಪಘಾತವಾದ ಖಾಸಗಿ ಬಸ್‌ನ ಎಲ್ಲಾ ದಾಖಲೆಗಳು ಸರಿಯಾಗಿವೆ
ಪಲ್ಟಿಯಾದ ಖಾಸಗಿ ಬಸ್‌ನ ಎಲ್ಲಾ ದಾಖಲೆಗಳು ಸರಿಯಾಗಿವೆ ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತ ನರೇಂದ್ರ ಹೋಳ್ಕರ್ ಹೇಳಿದ್ದಾರೆ. ಪಲ್ಟಿಯಾದ ಖಾಸಗಿ ಬಸ್‌ನಲ್ಲಿ ಓವರ್ ಲೋಡ್ ಮಾಡಿದ್ದರು. ಅತಿ ವೇಗವಾಗಿ ಬಸ್ ಚಾಲನೆಯಿಂದ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಆಗಿದೆ. ಸ್ಥಳಕ್ಕೆ ತೆರಳಿ ಪರಿಶೀಲನೆ ಬಳಿಕ ಎಲ್ಲ ಮಾಹಿತಿ ಸಿಗಲಿದೆ ಜಂಟಿ ಆಯುಕ್ತ ನರೇಂದ್ರ ಹೋಳ್ಕರ್ ತಿಳಿಸಿದ್ದಾರೆ.












Click it and Unblock the Notifications