ತುಮಕೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಿದ ಬಿಜೆಪಿ
ತುಮಕೂರು, ಫೆ.24 : ಕಾಂಗ್ರೆಸ್ ಮತ್ತು ಜೆಡಿಎಸ್ ನಂತರ ತುಮಕೂರಿನಲ್ಲಿ ಭಾನುವಾರ ಬಿಜೆಪಿ ತನ್ನ ಶಕ್ತಿ ಪ್ರದರ್ಶಿಸಿತು. ಹಿಂದುಳಿದ, ಎಸ್ಸಿ, ಎಸ್ಟಿ, ಸ್ಲಂ ಮೋರ್ಚಾ ಕಾರ್ಯಕರ್ತರ ಸ್ವಾಭಿಮಾನಿ ಸಮಾವೇಶ ನಡೆಸುವ ಮೂಲಕ ಚುನಾವಣೆಗೆ ನಾವು ಸಿದ್ಧ ಎಂಬ ಸಂದೇಶವನ್ನು ಸಾರಿತು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಸ್ವಾಭಿಮಾನಿ ಸಮಾವೇಶದಲ್ಲಿ ಹಲವು ಬಿಜೆಪಿ ನಾಯಕರು ಪಾಲ್ಗೊಂಡಿದ್ದರು. ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಹಿಂದೆ ನಗರದಲ್ಲಿ ಸಮಾವೇಶ ನಡೆಸಿದ್ದ ಜೆಡಿಎಸ್ ಮತ್ತು ಬಿಜೆಪಿಗೆ ಸೆಡ್ಡು ಹೊಡೆದರು. [ ತುಮಕೂರಿನಲ್ಲಿ ಕಾಂಗ್ರೆಸ್ ಸಮಾವೇಶ]
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕಂಬಳಿ, ಖಡ್ಗ ನೀಡಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಹಲವು ಬಿಜೆಪಿ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಚಿತ್ರಗಳಲ್ಲಿ ನೋಡಿ ತುಮಕೂರು ಸಮಾವೇಶ

ಕನ್ನಡದಲ್ಲಿ ಮಾತು ಆರಂಭಿಸಿದ ಚೌಹಾಣ್
ಸಮಾವೇಶದಲ್ಲಿ ಮಾತು ಆರಂಭಿಸಿದ ಶಿವರಾಜ್ ಸಿಂಗ್ ಚೌಹಾಣ್ "ಕರ್ನಾಟಕದ ಅಣ್ಣ, ತಮ್ಮಂದಿರೆ, ಅಕ್ಕ ತಂಗಿಯರೆ" ಎಂದು ಕನ್ನಡದಲ್ಲಿ ಮಾತು ಆರಂಭಿ ಸಿ ಕಾರ್ಯಕರ್ತರ ಚಪ್ಪಾಳೆ ಗಿಟ್ಟಿಸಿದರು. ಅತಿ ಹಿಂದುಳಿದ ವರ್ಗಕ್ಕೆ ಸೇರಿದ ನಾನು ಮೂರು ಬಾರಿ ಮುಖ್ಯ ಮಂತ್ರಿಯಾಗಿದ್ದೇನೆ. ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ. ಇದು ಬಿಜೆಪಿಯಲ್ಲಿ ಸಾಧ್ಯವೇ ಹೊರತು ವಂಶ ಪಾರಂಪರ್ಯ ಆಡಳಿತಕ್ಕೆ ಜೋತು ಬಿದ್ದಿರುವ ಕಾಂಗ್ರೆಸ್ ನಲ್ಲಿ ಅಲ್ಲ ಎಂದು ಕಾಂಗ್ರೆಸ್ ಗೆ ಕುಟುಕಿದರು.

ಮೋದಿ ಪ್ರಧಾನಿಯಾಗಬೇಕು
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನನಗೆ ಎರಡು ಪ್ರಮುಖ ಕನಸುಗಳಿವೆ. ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವುದು ಮತ್ತು ಕರ್ನಾಟಕದಲ್ಲಿ ಬಿಜೆಪಿಯನ್ನು ಪುನಃ ಅಧಿಕಾರಕ್ಕೆ ತರುವುದು ಎಂದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.

ಮೋದಿ ಸಮರ್ಥ ನಾಯಕ
ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಭಾರತ ದೇಶ ಓರ್ವ ಸಮರ್ಥ ನಾಯಕನನ್ನು ಬೇಡುತ್ತಿದೆ. ನರೇಂದ್ರ ಮೋದಿ ಅತಂಹ ಸಮರ್ಥ ನಾಯಕ ಆದ್ದರಿಂದ ಅವರು ಪ್ರಧಾನಿಯಾಗಬೇಕು. ಇದರಿಂದ ದೇಶ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

ಸಮಾವೇಶದಲ್ಲಿ ಭಾಗವಹಿಸಿದ್ದವರು
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಎ. ನಾರಾಯಣಸ್ವಾಮಿ, ಸೊಗಡು ಶಿವಣ್ಣ, ಶಾಸಕ ಬಿ.ಸುರೇಶ್‌ಗೌಡ ಸೇರಿದಂತೆ ಹಲವು ಬಿಜೆಪಿ ನಾಯಕರು ಸಮಾವೇಶದಲ್ಲಿ ಭಾಗವಹಿಸಿದ್ದರು.












Click it and Unblock the Notifications