ತುಮಕೂರು; ಮೇಕೆಗಳಿಗೂ ಕ್ವಾರಂಟೈನ್, ಕೊರೊನಾ ಪರೀಕ್ಷೆ!
ತುಮಕೂರು, ಜೂನ್ 30 : ಕುರಿಗಾಹಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಮೇಕೆಗಳನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಅವುಗಳಿಗೆ ಕೊರೊನಾ ವೈರಸ್ ಸೋಂಕು ಪರೀಕ್ಷೆ ನಡೆಸಲಾಗುತ್ತದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗೊಲ್ಲರಹಟ್ಟಿಯ ಕುರಿಗಾಹಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಮೇಕೆಗಳಿಗೆ ಪರೀಕ್ಷೆ ಮಾಡಿಸುವಂತೆ ಶಾಸಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ. ಸಿ. ಮಾಧುಸ್ವಾಮಿ ಸೂಚನೆ ನೀಡಿದ್ದಾರೆ.
ಕುರಿಗಾಹಿಗೆ ಜ್ವರ ಬಂದಿತ್ತು ಸ್ನೇಹಿತರೊಬ್ಬರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಜೂನ್ 23ರಂದು ಅವರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಸ್ನೇಹಿತನನ್ನು ಈಗ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಜ್ವರ ಬಂದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ವ್ಯಕ್ತಿಯ ಮನೆಯಲ್ಲಿ ಏಕಾಏಕಿ 5 ಮೇಕೆಗಳು ಮೃತಪಟ್ಟಿವೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಆರೋಗ್ಯವಾಗಿದ್ದ ಮೇಕೆಗಳು ಮೃತಪಡಲು ಕಾರಣ ತಿಳಿದುಬಂದಿಲ್ಲ.
ಕುರಿಗಾಹಿಗೆ ಸೇರಿದ 43 ಮೇಕೆಗಳನ್ನು ಜಕ್ಕನಹಳ್ಳಿಗೆ ಕರೆದುಕೊಂಡು ಹೋಗಲಾಗಿದ್ದು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಕೊರೊನಾ ವೈರಸ್ ಇದುವರೆಗೂ ಕುರಿ, ಮೇಕೆಗಳಿಂದ ಹರಡಿದೆ ಎಂಬ ವರದಿ ಇಲ್ಲ. ಆದರೂ ಪರೀಕ್ಷೆ ಮಾಡಲು ತೀರ್ಮಾನಿಸಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ಸೋಮವಾರ 18 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ.












Click it and Unblock the Notifications