ಶಿರಾ-ಮಧುಗಿರಿ-ಬೈರೇನಹಳ್ಳಿ ಭಾಗದಲ್ಲಿ ಚತುಷ್ಪಥ ರಸ್ತೆ: ವೆಚ್ಚ ಹಾಗೂ ಉಪಯೋಗಗಳೇನು?
National Highway: ರಾಜ್ಯದಲ್ಲಿ ಹಲವೆಡೆ ಹೆದ್ದಾರಿ ಕಾಮಗಾರಿಗಳು ಭರದಿಂದ ಸಾಗಿವೆ. ಕೆಲವು ಮುಕ್ತಾಯದ ಹಂತದಲ್ಲಿದ್ದು, ಇನ್ನೂ ಕೆಲವು ಆರಂಭದ ಹಂತದಲ್ಲಿವೆ. ಈ ನಡುವೆಯೇ ಇದೀಗ ಶಿರಾ-ಮಧುಗಿರಿ-ಬೈರೇನಹಳ್ಳಿ ಭಾಗದ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಹೆದ್ದಾರಿ ಸಚಿವಾಲಯ ಅನುದಾನ ನೀಡಿದೆ. ಹಾಗಾದ್ರೆ ಎಷ್ಟು ಕಿಲೋ ಮೀಟರ್ ಹಾಗೂ ಅನುದಾನ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈ ಬಗ್ಗೆ ಮಾತನಾಡಿದ ಟಿ.ಬಿ.ಜಯಚಂದ್ರ ಅವರು, ಶಿರಾ ಕ್ಷೇತ್ರ ಸಮಗ್ರವಾಗಿ ಅಭಿವೃದ್ಧಿಪಡಿಸುವುದೇ ನನ್ನ ಗುರಿಯಾಗಿದೆ. ಆದ್ದರಿಂದ ತಾಲೂಕಿಗೆ ಬೇಕಾದ ರಸ್ತೆ, ರೈಲ್ವೆ, ಕುಡಿಯುವ ನೀರು ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾ-ಮಧುಗಿರಿ-ಬೈರೇನಹಳ್ಳಿ ಭಾಗದ ಸುಮಾರು 52 ಕಿಲೋ ಮೀಟರ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 1,000 ಕೋಟಿ ರೂಪಾಯಿಗೆ ಅನುಮೋದನೆ ನೀಡಿದೆ. ಮೊದಲ ಹಂತದಲ್ಲಿ ಶಿರಾ-ಬಡವನಹಳ್ಳಿ ಭಾಗದ 20.20 ಕಿಲೋ ಮೀಟರ್ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು 585 ಕೋಟಿ ರೂಪಾಯಿ ಮಂಜೂರು ಮಾಡಿದೆ ಎಂದರು.
ಶಿರಾ ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಹುಳಿಯಾರು ರಸ್ತೆಯಿಂದ ಮಧುಗಿರಿ ರಸ್ತೆ ಸಂಪರ್ಕಿಸಲು ಶಿರಾ ನಗರಕ್ಕೆ 3.70 ಕಿಲೋ ಮೀಟರ್ ಉದ್ದದ ಬೈಪಾಸ್ ಪ್ರಸ್ತಾಪಿಸಲಾಗಿದೆ. 2ನೇ ಹಂತದಲ್ಲಿ ಬಡವನಹಳ್ಳಿ-ಮಧುಗಿರಿ-ಬೈರೆನಹಳ್ಳಿ ಭಾಗದ 32.30 ಕಿಮೀ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಡಿಪಿಆರ್ ಅಂತಿಮ ಹಂತದಲ್ಲಿದೆ. ಇದನ್ನು ಶೀಘ್ರದಲ್ಲೇ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು. ಈ ರಸ್ತೆ ಅಭಿವೃದ್ಧಿಯಿಂದ NH48 ಮತ್ತು 44ಕಕ್ಕೆ ಉತ್ತಮ ಸಂಪರ್ಕ ಕಲ್ಪಿಸಿದಂತಾಗಲಿದೆ ಎಂದು ಹೇಳಿದರು.
ಅಷ್ಟೇ ಅಲ್ಲದೆ, ಉತ್ತರ ಮತ್ತು ಮಧ್ಯ ಕರ್ನಾಟಕ ಭಾಗದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉತ್ತಮ ಹಾಗೂ ಪರ್ಯಾಯ ಸಂಪರ್ಕದ ಜೊತೆಗೆ ತಿರುಪತಿ ದೂರವೂ ಕಡಿಮೆ ಆಗಲಿದೆ. ಈ ಕಾಮಗಾರಿ ಅನುಮೋದನೆಗಾಗಿ ಸಹಕರಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಂಸದರಾದ ವಿ.ಸೋಮಣ್ಣ, ಗೋವಿಂದ ಕಾರಜೋಳ ಹಾಗೂ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.
ಶಿರಾ ನಗರದ ಸುತ್ತ ರಿಂಗ್ ರಸ್ತೆ ನಿರ್ಮಾಣ ಮಾಡಲು ಮತ್ತು ಬೈಪಾಸ್‌ನಿಂದ ಅಮರಾಪುರ ರಸ್ತೆ ಅಭಿವೃದ್ಧಿಗೆ ಅನುದಾನಕ್ಕೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ಆಂಧ್ರ ಪ್ರದೇಶದ ಕೋಡಿಕೊಂಡ, ಲೇಪಾಕ್ಷಿ, ಮಡಕಶಿರಾ, ರೊಳ್ಳ, ಅಗಳಿಯಿಂದ ಶಿರಾ ನಗರದವರೆಗೆ ದ್ವಿಪಥ ರಸ್ತೆ ಅಭಿವೃದ್ಧಿಗೆ ಸುಮಾರು 166.58 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭ ಆಗಿದೆ. ಈ ವರ್ಷದ ಸೆಪ್ಟಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಹೀಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಜ್ಯದಲ್ಲಿ ರಸ್ತೆಗಳನ್ನು ಮೇಜ್ದರ್ಜೆಗೇರಿಸುತ್ತಲೇ ಬಂದಿದೆ.












Click it and Unblock the Notifications