ರಾಮನ ಹೆಸರಿನಲ್ಲಿ ರಾಜಕೀಯ ಮಾಡಿದವರಿಗೆ ದೇವರ ಆಶೀರ್ವಾದ: ಟಿಪಿಸಿಸಿ ಮುಖ್ಯಸ್ಥ ರೇವಂತ್ ರೆಡ್ಡಿ ವ್ಯಂಗ್ಯ
ಹೈದರಾಬಾದ್: ಶ್ರೀರಾಮನ ಹೆಸರೇಳಿಕೊಂಡು ಪಕ್ಷವನ್ನು ವಿಸ್ತರಿಸುತ್ತಿದ್ದ ಬಿಜೆಪಿಗೆ ಕರ್ನಾಟಕ ಪ್ರಜೆಗಳು ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ. ಶ್ರೀರಾಮನನ್ನು ಅವಮಾನಿಸಿದ್ದವರಿಗೆ ಭಜರಂಗಬಲಿ ಆಶೀರ್ವದಿಸಿದ್ದಾರೆ ಎಂದು ಟಿಪಿಸಿಸಿ (ತೆಲಂಗಾಣ ಪ್ರದೇಶ್ ಕಾಂಗ್ರೆಸ್ ಕಮಿಟಿ) ಮುಖ್ಯಸ್ಥ ರೇವಂತ್ ರೆಡ್ಡಿ ವ್ಯಂಗ್ಯವಾಡಿದ್ದಾರೆ.
ರಾಜ್ಯ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ಫಲಿತಾಂಶವೇ ತೆಲಂಗಾಣದಲ್ಲೂ ಪುನರಾವರ್ತನೆಯಾಗಲಿದೆ. ಮುಂದಿನ ಚುನಾವಣೆಯಲ್ಲಿ ತೆಲಂಗಾಣ ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕರ್ನಾಟಕ ಫಲಿತಾಂಶದ ಮೂಲಕ ಜನರು ಮೋದಿ ಮತ್ತು ಬಿಜೆಪಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಕೆಂಪುಕೋಟೆಯ ಮೇಲೂ ಕಾಂಗ್ರೆಸ್ ಬಾವುಟ ಹಾರಲಿದೆ. ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಪಾದಯಾತ್ರೆಯ ಮೂಲಕ ಈ ಫಲಿತಾಂಶ ಬಂದಿದ್ದು, ತೆಲಂಗಾಣದಲ್ಲೂ ಸ್ಥಿರ ಸರ್ಕಾರ ರಚನೆಯಾಗಲಿದೆ ಎಂದರು.
ಬಿಜೆಪಿಯ ಷಡ್ಯಂತ್ರಗಳನ್ನು ಕನ್ನಡಿಗರು ಹಿಮ್ಮೆಟ್ಟಿಸಿದ್ದಾರೆ. ಎಂಐಎಂ ನೀತಿಯನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್ ಯಾವ ಕಡೆ ಇದೆ ಎಂಬುದನ್ನು ಕೆಸಿಆರ್ ಹೇಳಬೇಕು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಹೇಳುತ್ತೀರಾ..?' ಎಂದು ರೇವಂತ್ ರೆಡ್ಡಿ ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನೊಂದಿಗೆ ತೆಲಂಗಾಣದಲ್ಲಿ ಸಂಭ್ರಮಾಚರಣೆ ನಡೆಸಿದರು. ರೇವಂತ್ ರೆಡ್ಡಿ, ರಾಜ್ಯ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿ ಮಾಣಿಕ್ ರಾವ್ ಠಾಕ್ರೆ, ನಿಲೋಫರ್ ಹನುಮಾನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಅಲ್ಲಿಂದ ಗಾಂಧಿ ಭವನದವರೆಗೆ ರ್ಯಾಲಿ ನಡೆಸಲಾಯಿತು.












Click it and Unblock the Notifications