ಲಸಿಕೆಯೊಂದೇ ಸೋಂಕಿನ ವಿರುದ್ಧ ಸಂಪೂರ್ಣ ರಕ್ಷಣೆ ನೀಡಲು ಸಾಧ್ಯವಿಲ್ಲ; ವೈದ್ಯಕೀಯ ವಿಶ್ಲೇಷಣೆ
ತಿರುವನಂತಪುರಂ, ಆಗಸ್ಟ್ 21: ದೇಶದಲ್ಲಿ ಪ್ರಗತಿ ಸೋಂಕು (Breakthrough infection) ಹೆಚ್ಚಿನ ಮಟ್ಟದಲ್ಲಿ ಹಲವು ಭಾಗಗಳಲ್ಲಿ ವರದಿಯಾಗುತ್ತಿದ್ದು, ಕೊರೊನಾ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಿದೆ ಮತ್ತು ಲಸಿಕೆಯೊಂದೇ ಸೋಂಕಿನ ವಿರುದ್ಧ 100% ರಕ್ಷಣೆ ನೀಡಲು ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ವೈದ್ಯಕೀಯ ವಿಶ್ಲೇಷಣೆಯೊಂದು ತಿಳಿಸಿದೆ.
ಪ್ರಗತಿ ಸೋಂಕು ಎಂದರೇನು?: ಸೋಂಕಿನ ವಿರುದ್ಧ ಹೋರಾಡಲು ಸಂಪೂರ್ಣ ಲಸಿಕೆ ಪಡೆದುಕೊಂಡ ನಂತರವೂ ಅದೇ ಸೋಂಕಿಗೆ ತುತ್ತಾಗುವುದನ್ನು ಪ್ರಗತಿ ಸೋಂಕು ಅಥವಾ Breakthrough ಸೋಂಕು ಎಂದು ಕರೆಯಲಾಗುತ್ತದೆ. ಈ ಪ್ರಮಾಣ ಹಲವು ದೇಶಗಳಲ್ಲಿ ಹೆಚ್ಚಾಗಿರುವುದಾಗಿ ವೈದ್ಯಕೀಯ ವಿಶ್ಲೇಷಣೆ ತಿಳಿಸಿದೆ. ಡೆಲ್ಟಾ ರೂಪಾಂತರದಿಂದಾಗಿ ಇದು ಸಾಮಾನ್ಯವೆನಿಸುತ್ತಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ಪ್ರಪಂಚದಲ್ಲೇ ತನ್ನ ಹೆಚ್ಚಿನ ಜನಸಂಖ್ಯೆಗೆ ಕೊರೊನಾ ಲಸಿಕೆ ನೀಡಿದ ದೇಶ ಎನಿಸಿಕೊಂಡಿದೆ. 12 ವರ್ಷ ಮೇಲ್ಪಟ್ಟ ಸುಮಾರು 78% ಮಂದಿಗೆ ಫೈಜರ್ ಲಸಿಕೆಯನ್ನು ನೀಡಿದೆ. ಇದಾಗ್ಯೂ ಈ ದೇಶ ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ದಾಖಲಿಸುತ್ತಿದೆ. ಸೋಂಕಿನ ವಿರುದ್ಧ ಫೈಜರ್ ಲಸಿಕೆ ಅಷ್ಟು ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಇದು ತೋರುತ್ತಿದೆ. ಜೀವಕೋಶಕ್ಕೆ ದಾಳಿ ಮಾಡಲು, ಹಾಗೆಯೇ ಪುನರುತ್ಪತ್ತಿಯಾಗುವಲ್ಲಿ ಡೆಲ್ಟಾ ಸೋಂಕು ಅತಿ ಸಮರ್ಥವಾಗಿದೆ ಎಂದು ಕೇರಳ ಐಎಂಎ ಸಂಶೋಧನಾ ಕೋಶದ ಉಪಾಧ್ಯಕ್ಷ ಡಾ. ರಾಜೀವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದೃಷ್ಟವಶಾತ್ ಹೆಚ್ಚಿನ ಪ್ರಗತಿ ಸೋಂಕು ಮೂಗು ಅಥವಾ ಗಂಟಲಿನಲ್ಲಿ ಮಾತ್ರ ಉಳಿಯುತ್ತಿದೆ. ಶ್ವಾಸಕೋಶದವರೆಗೂ ತಲುಪುತ್ತಿಲ್ಲ. ಸಂಪೂರ್ಣವಾಗಿ ಲಸಿಕೆ ಹಾಕಿದ ವಯಸ್ಕರಲ್ಲಿ ಗಂಭೀರವಾದ ಸೋಂಕು ಅಪರೂಪ ಎಂದು ಹೇಳಿದ್ದಾರೆ.
ಕತಾರ್‌ನ ಇತ್ತೀಚಿನ ಅಧ್ಯಯನದಲ್ಲಿ, ಫೈಜರ್ ಲಸಿಕೆ ಡೆಲ್ಟಾ ಸೋಂಕಿನ ವಿರುದ್ಧ ಕೇವಲ 53% ಪರಿಣಾಮಕಾರಿ ಎನ್ನಲಾಗಿದೆ. ಆದರೆ ಇದೇ ಸಮಯದಲ್ಲಿ, ಲಸಿಕೆಗಳು ತೀವ್ರ ರೋಗವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿವೆ ಎಂದು ತಜ್ಞರು ಒಟ್ಟಾರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ತಜ್ಞರ ಇತ್ತೀಚಿನ ವಿಶ್ಲೇಷಣೆಯೊಂದು ಮಹತ್ವ ಪಡೆದುಕೊಂಡಿದೆ. ದೇಶದಲ್ಲಿ ಕೇರಳ ರಾಜ್ಯ ಹೊಸ ಕೊರೊನಾ ಪ್ರಕರಣಗಳಲ್ಲಿ ಅರ್ಧದಷ್ಟು ಕೊಡುಗೆ ನೀಡುತ್ತಿದೆ. ಇಲ್ಲಿಯವರೆಗೆ ದೇಶದಲ್ಲಿ ವರದಿಯಾದ ಪ್ರಗತಿ ಸೋಂಕುಗಳಲ್ಲಿ ಅರ್ಧದಷ್ಟು ಪ್ರಮಾಣ ಕೇರಳದ್ದಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಈಚಿನ ವರದಿ ಪ್ರಕಾರ, ಅತಿ ಹೆಚ್ಚು ಮಂದಿಗೆ ಲಸಿಕೆ ನೀಡಿರುವ ಕೇರಳ ರಾಜ್ಯದಲ್ಲಿ 87,000 ಪ್ರಗತಿ ಪ್ರಕರಣಗಳು, ಅಂದರೆ 46% ಪ್ರಕರಣಗಳು ದಾಖಲಾಗಿವೆ.
ಅದಾಗ್ಯೂ ಹೆಚ್ಚಿನ ಲಸಿಕಾ ವ್ಯಾಪ್ತಿ ಹಾಗೂ ಸೋಂಕಿನ ವಿರುದ್ಧ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ರಾಜ್ಯಗಳಲ್ಲಿ 40 ಸಾವಿರಕ್ಕೂ ಹೆಚ್ಚು ಪ್ರಗತಿಶೀಲ ಸೋಂಕುಗಳನ್ನು ಹೊಂದುವುದು ಸಹಜ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಗತಿ ಸೋಂಕುಗಳು ಲಸಿಕೆ ನೀಡುವ ರೋಗನಿರೋಧಕ ಶಕ್ತಿಯಿಂದ ಹೊರಗುಳಿಯುತ್ತಿವೆ. ಇದು ಹೊಸ ರೂಪಾಂತರ ಸೃಷ್ಟಿಯ ಆತಂಕವನ್ನೂ ತಂದೊಡ್ಡಿವೆ.
"ಲಸಿಕೆಗಳು ಕೋವಿಡ್ -19 ನಿಂದ ತೀವ್ರ ರೋಗ ಮತ್ತು ಸಾವನ್ನು ತಡೆಯಲು ಸಹಾಯ ಮಾಡುತ್ತಿದೆ. ಸೋಂಕಿನ ಹರಡುವಿಕೆ ಮುಂದುವರೆದಿದ್ದು, ಲಸಿಕೆ ಹಾಕಿಸಿಕೊಳ್ಳದವರಲ್ಲಿ ಹೆಚ್ಚಾಗಿದೆ. ಅದಕ್ಕಾಗಿಯೇ ನಾವು ಹೆಚ್ಚು ಹೆಚ್ಚು ಜನರಿಗೆ ಕೋವಿಡ್ ಲಸಿಕೆ ಹಾಕಬೇಕು ಎಂದು ಹೇಳುತ್ತಿದ್ದೇವೆ," ಎಂದು ದೆಹಲಿ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದರು.
"ಮುಖ್ಯವಾಗಿ ಲಸಿಕೆ ಹಾಕಿಸಿಕೊಂಡವರಲ್ಲಿ ಸೌಮ್ಯವಾದ ಸೋಂಕು ಲಕ್ಷಣಗಳು ಇರುತ್ತದೆ. ಆದ್ದರಿಂದ ಲಸಿಕೆಗಳು ತೀವ್ರ ಕೋವಿಡ್ ರೋಗದಿಂದ ರಕ್ಷಣೆ ನೀಡುವಲ್ಲಿ ಪರಿಣಾಮಕಾರಿ," ಎಂದು ತಿಳಿಸಿದ್ದರು.












Click it and Unblock the Notifications