ಯಡಿಯೂರಪ್ಪ ಕಾರಿಗೆ ಅಡ್ಡಿ, ಪ್ರತಿಭಟನೆ: ಕೇರಳದಲ್ಲಿ ಐವರ ಬಂಧನ
Recommended Video
ಕಣ್ಣೂರು, ಡಿಸೆಂಬರ್ 26: ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾರನ್ನು ಪಳಯಂಗಡಿ ಸಮೀಪ ಅಡ್ಡಗಟ್ಟಿ ಕಪ್ಪು ಬಾವುಟ ಪ್ರದರ್ಶಿಸಿದ್ದ ಆಡಳಿತಾರೂಢ ಸಿಪಿಐ (ಎಂ) ಹಾಗೂ ವಿರೋಧಪಕ್ಷ ಕಾಂಗ್ರೆಸ್‌ನ ಯುವ ಘಟಕದ ಐವರು ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಮೂವರು ಸಿಪಿಎಂನ ಭಾರತೀಯ ವಿದ್ಯಾರ್ಥಿ ಸಂಘಟನೆಯ (ಎಸ್‌ಎಫ್‌ಐ) ಸದಸ್ಯರಾಗಿದ್ದರೆ, ಇಬ್ಬರು ಯುವ ಕಾಂಗ್ರೆಸ್ ಘಟಕದವರಾಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಒಟ್ಟು ಐದು ಮಂದಿಯನ್ನು ಬಂಧಿಸಲಾಗಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಐಪಿಸಿ ಸೆಕ್ಷನ್ 353 ಅಡಿ ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಗೆ ಕರ್ತವ್ಯಕ್ಕೆ ಅಡ್ಡಿಪಡಿಸುವ ಹಲ್ಲೆ ಅಥವಾ ಕ್ರಿಮಿನಲ್ ಕೃತ್ಯ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ಆರೋಪದಲ್ಲಿ ಈ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಂಗಳವಾರ ಕಣ್ಣೂರು ಜಿಲ್ಲೆಯ ತಾಲಿಪರಂಬದಲ್ಲಿನ ರಾಜರಾಜೇಶ್ವರಿ ಮತ್ತು ಮಾದಯಿಕಾವು ದೇವಸ್ಥಾನಗಳಿಗೆ ತೆರಳುತ್ತಿದ್ದ ಯಡಿಯೂರಪ್ಪ ಅವರ ಕಾರಿಗೆ ಪಳಯಂಗಡಿ ಎಂಬಲ್ಲಿ ತಡೆಯೊಡ್ಡಲು ಪ್ರಯತ್ನಿಸಿ ಘೋಷಣೆಗಳನ್ನು ಕೂಗಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಪೊಲೀಸರು ಎಸ್‌ಎಫ್ಐ, ಡಿವೈಎಫ್‌ಐ, ಯುವ ಕಾಂಗ್ರೆಸ್ ಮತ್ತು ಕೇರಳ ವಿದ್ಯಾರ್ಥಿ ಒಕ್ಕೂಟದ 28 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಅವರಲ್ಲಿ ಐವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಮಂಗಳೂರಿನಲ್ಲಿ ನಡೆಯುತ್ತಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ವರದಿಗಾರಿಕೆಗೆ ಬಂದಿದ್ದ ಕೇರಳದ ಪತ್ರಕರ್ತರನ್ನು ಅಕ್ರಮವಾಗಿ ಬಂಧಿಸಿಡಲಾಗಿತ್ತು ಎಂದು ಆರೋಪಿಸಿ ಬಿಎಸ್ ಯಡಿಯೂರಪ್ಪ ವಿರುದ್ಧ ಪ್ರತಿಭಟನೆ ಮಾಡಲಾಗಿತ್ತು. ಇದು ಕಮ್ಯುನಿಸ್ಟ್ ಗೂಂಡಾಗಳು ನಡೆಸಿದ ಪೂರ್ವನಿಯೋಜಿತ ಕೃತ್ಯ ಎಂದು ಬಿಜೆಪಿ ಆರೋಪಿಸಿದೆ.












Click it and Unblock the Notifications