Breaking; ಕೇರಳ ಆರೆಸ್ಸೆಸ್ ಕಚೇರಿ ಮೇಲೆ ಬಾಂಬ್ ದಾಳಿ; ಪಿಎಫ್‌ಐ ಪ್ರತಿಭಟನೆ ಘೋರ
ತಿರುವನಂತಪುರಂ, ಸೆ. 23: ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಕಚೇರಿಗಳ ಮೇಲೆ ದೇಶಾದ್ಯಂತ ಎನ್‌ಐಎ ರೇಡ್ ನಡೆದಿರುವುದನ್ನು ವಿರೋಧಿಸಿ ಆ ಸಂಘಟನೆ ಶುಕ್ರವಾರ ಕರೆ ಕೊಟ್ಟಿದ್ದ ಕೇರಳ ಹರತಾಳದಲ್ಲಿ ಬಹಳಷ್ಟು ಹಿಂಸಾ ಕೃತ್ಯಗಳು ಜರುಗುತ್ತಿವೆ.
ಕಣ್ಣೂರು ಜಿಲ್ಲೆಯ ಮಟ್ಟನೂರ್ ನಗರದಲ್ಲಿರುವ ಆರ್ ಎಸ್ ಎಸ್ ಕಚೇರಿ ಮೇಲೆ ದುಷ್ಕರ್ಮಿಗಳು ಬಾಂಬ್ ದಾಳಿ ಎಸಗಿರುವುದು ವರದಿಯಾಗಿದೆ. ಆದರೆ, ಈ ಘಟನೆಯಲ್ಲಿ ಸಾವು ನೋವು ಆಗಿರುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಯಾರು ಈ ಬಾಂಬ್ ಹಾಕಿದ್ದು ಎಂಬುದೂ ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ.
ಕೇರಳಾದ್ಯಂತ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನಡೆಯುತ್ತಿರುವ ಹರತಾಳದ ವೇಳೆ ವಿವಿಧೆಡೆ ಹಿಂಸಾಚಾರ ಘಟನೆಗಳು ಸಂಭವಿಸಿವೆ. ಕೇರಳ ರಾಜ್ಯ ಸಾರಿಗೆ ಸಂಸ್ಥೆ ಕೆಎಸ್‌ಆರ್‌ಟಿಸಿಯ ಬಸ್ಸುಗಳು ಹೆಚ್ಚಾಗಿ ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಿವೆ. ತಿರುವನಂತಪುರಂ, ಕೊಲ್ಲಂ, ಕೋಳಿಕೋಡ್, ವಯನಾಡ್, ಅಲಪ್ಪುಳ ಮೊದಲಾದ ಜಿಲ್ಲೆಗಳಲ್ಲಿ ಬಸ್ಸುಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ. ಇದೇ ವೇಳೆ ಬಹಳಷ್ಟು ಮಂದಿಗೆ ಗಾಯಗಳಾಗಿರುವುದು ತಿಳಿದುಬಂದಿದೆ. ಕೇರಳ ಸರಕಾರ ನೀಡಿರುವ ಮಾಹಿತಿ ಪ್ರಕಾರ ೭೦ಕ್ಕೂ ಹೆಚ್ಚು ಬಸ್ಸುಗಳಿಗೆ ಹಾನಿಯಾಗಿದೆ.

ಹೈಕೋರ್ಟ್ ಸುಮೋಟೊ ಪ್ರಕರಣ
ಕೇರಳದಲ್ಲಿ ಪಿಎಫ್‌ಐ ನಡೆಸಿರುವ ಬಂದ್ ಮತ್ತು ಹಿಂಸಾಚಾರ ಘಟನೆಗಳ ಸಂಬಂಧ ಕೇರಳ ಉಚ್ಚ ನ್ಯಾಯಾಲಯ ಸ್ವಯಂ ಆಗಿ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದೆ.

ಯಾರೂ ಹರತಾಳ ನಡೆಸಕೂಡದು ಎಂದು ನ್ಯಾಯಾಲಯವೇ ಈ ಹಿಂದೆ ಆದೇಶ ನೀಡಿತ್ತು. ಆದರೂ ಪಿಎಫ್‌ಐ ಶುಕ್ರವಾರ ಹರತಾಳ ನಡೆಸಿರುವದರಿಂದ ಹೈಕೋರ್ಟ್ ಸುಮೋಟೋ ಕೇಸ್ ದಾಖಲಿಸಿದೆ. ಹರತಾಳ ನಿಷೇಧಿಸುವ ಕೋರ್ಟ್ ಆದೇಶವನ್ನು ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಕೇರಳ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಹಾಗೆಯೇ, ಯಾವುದೇ ರೀತಿಯ ಹಿಂಸಾಚಾರ ಆಗದಂತೆ ಹೇಗಾದರೂ ಮಾಡಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದೂ ಕೋರ್ಟ್ ಸೂಚಿಸಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications