ಈ ತಿಂಗಳು ರೇಷನ್ ಸಿಗಲಿಲ್ವಾ, ಸರ್ಕಾರವೇ ಕಾಸು ಕೊಡುತ್ತೆ ತಗೋಳಿ!
ತಿರುವನಂತಪುರಂ, ಆಗಸ್ಟ್ 19: ಬಡವರ ಹಸಿವಿನ ನೋವು ನೀಗಿಸುವುದಕ್ಕಾಗಿ ಸರ್ಕಾರವೇ ಪಡಿತರ ಅಂಗಡಿಗಳ ಮೂಲಕ ಆಹಾರಧಾನ್ಯವನ್ನು ಪೂರೈಕೆ ಮಾಡುತ್ತದೆ. ಪ್ರತಿ ತಿಂಗಳಿಗೆ ಒಮ್ಮೆ ನೀಡುವ ಪಡಿತರವನ್ನು ಪಡೆಯಲು ಸಾಧ್ಯವಾಗದಿದ್ದರೆ, ನಿಮಗೆ ಪರಿಹಾರವಾಗಿ ಹಣ ನೀಡಲಾಗುತ್ತದೆ. ಕೇರಳದಲ್ಲಿ ಇಂಥದೊಂದು ವಿಶೇಷ ಘಟನೆಯು ವರದಿಯಾಗಿದೆ.
ಪಡಿತರ ಅಂಗಡಿಯಿಂದ ಮಾಸಿಕ ಆಹಾರ ಧಾನ್ಯ ಸಿಗದಿದ್ದರೆ ಸರ್ಕಾರದಿಂದ ನೀವು ಪರಿಹಾರಕ್ಕಾಗಿ ಬೇಡಿಕೆ ಸಲ್ಲಿಸಬಹುದು. ಕೇರಳದಲ್ಲಿ ಅದೇ ರೀತಿ 25 ಮಂದಿ ಪಿಡಿಎಸ್ ಅರ್ಹತೆಯನ್ನು ಪಡೆದುಕೊಂಡಿದ್ದು, ಈಗಾಗಲೇ ಪರಿಹಾರವನ್ನೂ ಸ್ವೀಕರಿಸಿದ್ದಾರೆ.
ದೇಶದ ಪ್ರತಿಯೊಬ್ಬರಿಗೂ ಆಹಾರ ಭದ್ರತೆಯನ್ನು ಒದಗಿಸಬೇಕು. ಒಂದು ವೇಳೆ ಆಹಾರ ಒದಗಿಸಲು ಸಾಧ್ಯವಾಗದಿದ್ದರೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2003ರ ಅಡಿಯಲ್ಲಿ ನಗದು ಪರಿಹಾರವನ್ನು ನೀಡಲಾಗುತ್ತದೆ. ಈ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

ಸರ್ಕಾರದಿಂದ ಪರಿಹಾರ ಪಡೆಯುವವರು ಯಾರು?
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2003ರ ಅಡಿಯಲ್ಲಿ ಪಡಿತರ ಕಾರ್ಡ್ ಹೊಂದಿರುವವರಿಗೆ ಮಾತ್ರ ಆದ್ಯತೆಯ ಮೇರೆಗೆ ಈ ಯೋಜನೆಯು ಸೀಮಿತವಾಗಿರುತ್ತದೆ. ಈ ಆಗಸ್ಟ್ ತಿಂಗಳ ನಾಗರಿಕ ಸರಬರಾಜು ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 92.78 ಲಕ್ಷ ಪಿಡಿಎಸ್ ಫಲಾನುಭವಿಗಳಿದ್ದಾರೆ. ಅವುಗಳಲ್ಲಿ ಅಂತ್ಯೋದಯ ಅನ್ನ ಯೋಜನೆ (ಎಎವೈ) ವ್ಯಾಪ್ತಿಗೆ ಒಳಪಡುವ 5.89 ಲಕ್ಷ ಕುಟುಂಬಗಳು ಮತ್ತು ಆದ್ಯತಾ ಕುಟುಂಬ (ಪಿಎಚ್‌ಎಚ್) ವರ್ಗದ ಅಡಿಯಲ್ಲಿನ 34.93 ಲಕ್ಷ ಕುಟುಂಬಗಳು ಆಹಾರ ಭದ್ರತಾ ಭತ್ಯೆಗೆ ಅರ್ಹವಾಗಿವೆ.

ರೇಷನ್ ಸಿಗದಿದ್ದರೆ ಮುಂದೆ ಮಾಡುವುದೇನು?
ಆದ್ಯತಾ ಪಡಿತರ ಕಾರ್ಡ್ ಹೊಂದಿರುವವರು ಆಹಾರ ಧಾನ್ಯಗಳು ಸಿಗದಿದ್ದಲ್ಲಿ ಜಿಲ್ಲಾ ಕುಂದುಕೊರತೆ ನಿವಾರಣಾ ಅಧಿಕಾರಿಗೆ ದೂರು ಸಲ್ಲಿಸಬಹುದು. ಡಿಜಿಆರ್ಒ ಸರ್ಕಾರದಿಂದ ಗೊತ್ತುಪಡಿಸಿದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಜಿಲ್ಲಾ ಕಲೆಕ್ಟರೇಟ್‌ನಲ್ಲಿ ADM) ಆಗಿರುತ್ತಾರೆ. ಒಂದು ವೇಳೆ ಅರ್ಜಿದಾರರು DGRO ತೀರ್ಪಿನಿಂದ ತೃಪ್ತರಾಗದಿದ್ದರೆ, ಅಂಥವರು ರಾಜ್ಯ ಆಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬಹುದು.

ರೇಷನ್ನೂ ಇಲ್ಲ, ಪರಿಹಾರವೂ ಇಲ್ಲ: ಏಕೆಂದರೆ ಜನರಿಗೆ ಗೊತ್ತೇ ಇಲ್ಲ!
ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಕೆ ವಿ ಮೋಹನ್ ಕುಮಾರ್ ಮಾತನಾಡಿ, ಆಹಾರ ಭದ್ರತಾ ಭತ್ಯೆ ನೀಡುವ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಆದ್ದರಿಂದ ಅನೇಕರು ಅದನ್ನು ಕಳೆದುಕೊಳ್ಳುತ್ತಾರೆ ಎಂದರು. ಇಂತಹ ಪ್ರಕರಣಗಳನ್ನು ಡಿಜಿಆರ್‌ಒಗಳಿಗೆ ವರದಿ ಮಾಡುವಂತೆ ಆಯೋಗವು ಜಿಲ್ಲಾ ಪೂರೈಕೆ ಅಧಿಕಾರಿಗಳಿಗೆ ಸೂಚಿಸಿದೆ. ಈ ದೂರುಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಲು ಡಿಜಿಆರ್ಒಗೆ ಹೇಳಲಾಗಿದೆ.

ಪರಿಹಾರವನ್ನು ಹೇಗೆ ಲೆಕ್ಕ ಹಾಕಲಾಗುವುದು?
ಪಡಿತರ ಕಾರ್ಡ್ ಉಳ್ಳವರಿಗೆ ರೇಷನ್ ಕಾರ್ಡ್ ಸಿಗದಿದ್ದರೆ ನೀಡುವ ಪರಿಹಾರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ವಿವರಿಸಲಾಗಿದೆ. ಸಾಮಾನ್ಯವಾಗಿ ಈಗಿನ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಕನಿಷ್ಠ ಬೆಲೆಯನ್ನು NFSA,2003 ಪಟ್ಟಿಯಲ್ಲಿ ಉಲ್ಲೇಖಿಸಿರುವ ಬೆಲೆಗಳಿಂದ ಗುಣಿಸಲಾಗುತ್ತದೆ. ಹೀಗೆ ನೀಡುವ ಪರಿಹಾರವು ಕನಿಷ್ಠ ಬೆಂಬಲ ಬೆಲೆಯು 1.25ಪಟ್ಟು ಆಗಿರುತ್ತದೆ ಎಂದರು. ಆದರೆ ಪಡಿತರ ಅಂಗಡಿಗೆ ಭೇಟಿ ಕೊಟ್ಟು, ಅಲ್ಲಿನ ಆಹಾರ ಧಾನ್ಯಗಳ ಗುಣಮಟ್ಟ ಚೆನ್ನಾಗಿಲ್ಲ ಎಂದು ತಿರಸ್ಕರಿಸಿದವರು ಈ ರೀತಿ ಪರಿಹಾರವನ್ನು ಪಡೆದುಕೊಳ್ಳುವುದಕ್ಕೆ ಅರ್ಹರಾಗಿ ಇರುವುದಿಲ್ಲ.












Click it and Unblock the Notifications