ಕೊರೊನಾ ಏರಿಕೆ; ಕೇರಳದಲ್ಲಿ ಮತ್ತೆ ಲಾಕ್‌ಡೌನ್ ಆಗುವುದೇ?
ತಿರುವನಂತಪುರಂ, ಸೆಪ್ಟೆಂಬರ್ 4: ಕೇರಳದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿಯೂ ಏರಿಕೆ ಕಂಡಿದೆ. ಹೀಗಾಗಿ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಬೇಕಾದ ಸಾಧ್ಯತೆ ಕುರಿತು ಮಾತುಗಳು ಕೇಳಿಬರುತ್ತಿವೆ.
ಆದರೆ ಸಂಪೂರ್ಣ ಲಾಕ್‌ಡೌನ್ ಪ್ರಸ್ತಾಪವನ್ನು ಸಿಎಂ ಪಿಣರಾಯಿ ವಿಜಯನ್ ತಳ್ಳಿಹಾಕಿದ್ದಾರೆ.
ಲಾಕ್‌ಡೌನ್ ದೊಡ್ಡ ಬಿಕ್ಕಟ್ಟನ್ನು ಸೃಷ್ಟಿಸಬಹುದು ಎಂಬುದನ್ನು ಉಲ್ಲೇಖಿಸಿ, ರಾಜ್ಯದಲ್ಲಿ ಲಾಕ್‌ಡೌನ್ ವಿಧಿಸುವುದಿಲ್ಲ ಎಂಬುದನ್ನು ಮುಖ್ಯಮಂತ್ರಿ ಕಚೇರಿ ದೃಢಪಡಿಸಿದೆ.

ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡುವುದಿಲ್ಲ. ಇದು ಜನರ ಆರ್ಥಿಕತೆ ಹಾಗೂ ಜೀವನೋಪಾಯಕ್ಕೆ ದೊಡ್ಡ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂದು ಹೇಳಿ ಲಾಕ್‌ಡೌನ್ ಮಾಡುವ ಚರ್ಚೆಗೆ ಪೂರ್ಣವಿರಾಮ ಹಾಕಿದ್ದಾರೆ.
ಆದರೆ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಸರ್ಕಾರ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, ಕೇರಳ ರಾಜ್ಯ ಸಾಂಕ್ರಾಮಿಕ ಕಾಯ್ದೆ ಹಾಗೂ ಇತರೆ ಕಾನೂನು ನಿಬಂಧನೆಗಳನ್ನು ಅನ್ವಯಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೇರಳದಲ್ಲಿ ಕೊರೊನಾ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ನಡೆದಿವೆ. ಕಳೆದ ವಾರದಿಂದ ನಿರಂತರವಾಗಿ ದಿನ ನಿತ್ಯ ಮೂವತ್ತು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದ ಮೂರನೇ ಅಲೆ ಆತಂಕವೂ ಎದುರಾಗಿದೆ.
ಕೇರಳದಲ್ಲಿ ಕೊರೊನಾ ಪ್ರಕರಣಗಳು:
ಕೇರಳದಲ್ಲಿ ಶುಕ್ರವಾರ 29,322 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. 131 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ ಮರಣ ಸಂಖ್ಯೆ 21,280 ಆಗಿದೆ. ರಾಜ್ಯದಲ್ಲಿ ಇದುವರೆಗೂ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ 2,46,437 ಆಗಿದ್ದು, ಒಟ್ಟು 38,83,186 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ರಾಜ್ಯ ಹೆಲ್ತ್ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ 163691 ಮಾದರಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಪಾಸಿಟಿವಿಟಿ ದರ 17.91% ಇದೆ.
ಕೇರಳದಲ್ಲಿ ಕೊರೊನಾ ಪಾಸಿಟಿವಿಟಿ ದರ ಹೆಚ್ಚಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಶೇ 20ಕ್ಕಿಂತ ಹೆಚ್ಚಾಗಿದೆ. ಇದು ಕೊರೊನಾ ತೀವ್ರ ಹರಡುವಿಕೆಗೆ ಕಾರಣವಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಆರೋಗ್ಯ ಸಚಿವಾಲಯದ ಸೂಚನೆ
ಕೇರಳದಲ್ಲಿ ಸುಮಾರು 85% ಕೊರೊನಾ ಸೋಂಕಿತರು ಹೋಂ ಕ್ವಾರಂಟೈನ್‌ನಲ್ಲಿದ್ದು, ರಾಜ್ಯ ಸರ್ಕಾರ ದಿನನಿತ್ಯದ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ವಿಧಿಸಬೇಕಾಗಿದೆ ಎಂದು ಆರೋಗ್ಯ ಸಚಿವಾಲಯದ ಸೂಚನೆ ನೀಡಿತ್ತು.
ಸೂಕ್ಷ್ಮ ಕಂಟೈನ್ಮೆಂಟ್ ವಲಯಗಳ ಪ್ರಾಮುಖ್ಯವನ್ನು ಎತ್ತಿ ತೋರಿಸಿರುವ ಕೇಂದ್ರ, ರಾಜ್ಯ ಕೇವಲ ಜಿಲ್ಲಾ ಮಟ್ಟದಲ್ಲಿ ನಿರ್ಬಂಧಗಳನ್ನು ಅನುಸರಿಸಬೇಕು. ಈ ಕುರಿತು ಗಮನ ಕೇಂದ್ರೀಕರಿಸಬೇಕು ಎಂದು ಸಲಹೆ ನೀಡಿದೆ.
ಹೋಂ ಕ್ವಾರಂಟೈನ್‌ನಲ್ಲಿದ್ದು, ಚೇತರಿಸಿಕೊಳ್ಳುತ್ತಿರುವ ರೋಗಿಗಳು ಕೊರೊನಾ ನಿಯಮಗಳನ್ನು ಪಾಲಿಸುತ್ತಿಲ್ಲ. ಇದು ವೈರಸ್ ಹರಡುವಿಕೆಯನ್ನು ತಡೆಯಲು ರಾಜ್ಯದ ವಿಫಲತೆಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದೆ. ಕಂಟೈನ್ಮೆಂಟ್ ವಲಯಗಳಲ್ಲಿ ಕಠಿಣ ಕ್ರಮಗಳು ಹಾಗೂ ಪ್ರಯಾಣಕ್ಕೆ ತಡೆಹಿಡಿಯುವುದು ರಾಜ್ಯ ತುರ್ತಾಗಿ ಗಮನ ಹರಿಸಬೇಕಾಗಿರುವ ಕೆಲವು ಅಂಶಗಳಾಗಿವೆ ಎಂದು ಹೇಳಿದೆ.
ಎರಡನೇ ಅಲೆ ಭೀಕರತೆ ತಗ್ಗುತ್ತಿದ್ದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಕ್ರಮೇಣ ಇಳಿಕೆಯಾದರೂ ಕೇರಳದಲ್ಲಿ ಮಾತ್ರ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಕೊರೊನಾ ಮೂರನೇ ಅಲೆ ಸಾಧ್ಯತೆ ಕುರಿತ ಎಚ್ಚರಿಕೆ ನಡುವೆ ಕೇರಳದಲ್ಲಿ ಪ್ರಕರಣಗಳು ನಿಯಂತ್ರಣಕ್ಕೆ ಬರದೇ ಇರುವುದು ಭೀತಿಗೆ ಕಾರಣವಾಗಿದೆ.












Click it and Unblock the Notifications