ಕೇರಳದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ತೊಡೆ ಮೇಲೆ ಕುಳಿತು ವಿದ್ಯಾರ್ಥಿನಿಯರ ಪ್ರತಿಭಟನೆ
ಅದೊಂದು ಕಾಲೇಜಿನ ಸಮೀಪವೇ ಇರುವ ಬಸ್ ನಿಲ್ದಾಣ. ಅಲ್ಲಿ ವಿದ್ಯಾರ್ಥಿಗಳು ಸಹಜವಾಗಿವೇ ಕುಳಿತು ಮಾತನಾಡುತ್ತಿದ್ದರು. ಹುಡುಗ-ಹುಡುಗಿಯರು ಒಟ್ಟಿಗೆ ಕುಳಿತು ಮಾತನಾಡುವುದು ಬಸ್ ನಿಲ್ದಾಣದ ಸಮೀಪವಿರುವ ಕೆಲವರಿಗೆ ಅಪರಾಧವಾಗಿ ಕಂಡಿದೆ.
ವಿದ್ಯಾರ್ಥಿ, ವಿದ್ಯಾರ್ಥಿನಿಯರು ಒಟ್ಟಿಗೆ ಕುಳಿತುಕೊಳ್ಳುವುದನ್ನು ತಪ್ಪಿಸಲು ಉದ್ದವಾದ ಸ್ಟೀಲ್ ಬೆಂಚ್ ಅನ್ನು ಕತ್ತರಿಸಿ ಬೇರ್ಪಡಿಸಿದ್ದಾರೆ. ಇಂತಹ ಮನಸ್ಥಿತಿಗಳಿಗೆ ಪಾಠ ಕಲಿಸಲು ವಿದ್ಯಾರ್ಥಿಗಳು ಮಾಡಿದ ಉಪಾಯ ಮಾತ್ರ ಈಗ ಎಲ್ಲೆಡೆ ಚರ್ಚೆಯಾಗುವಂತೆ ಮಾಡಿದೆ.
ಕಾಲೇಜು ವಿದ್ಯಾರ್ಥಿಗಳು ಉದ್ದವಾದ ಸ್ಟೀಲ್ ಬೆಂಚ್ ಅನ್ನು ಮೂರು ಆಸನಗಳಾಗಿ ಕತ್ತರಿಸಿರುವುದನ್ನು ಕಂಡು ಕೋಪಗೊಂಡಿದ್ದಾರೆ. ವಿದ್ಯಾರ್ಥಿಗಳ ತೊಡೆ ಮೇಲೆ ಕುಳಿತ ವಿದ್ಯಾರ್ಥಿನಿಯರು ಬೆಂಚ್ ಕತ್ತರಿಸಿದ ಮನಸ್ಥಿತಿಗಳನ್ನು ಖಂಡಿಸಿದ್ದಾರೆ.
ವಿದ್ಯಾರ್ಥಿಗಳ ತೊಡೆ ಮೇಲೆ ಕುಳಿತು ಫೋಟೋ ತೆಗೆಸಿಕೊಂಡಿರುವ ವಿದ್ಯಾರ್ಥಿಗಳು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನೈತಿಕ ಪೊಲೀಸ್‌ಗಿರಿ ನಮ್ಮ ಬಳಿ ನಡೆಯಲ್ಲ ಎಂದು ಸಂದೇಶ ನೀಡಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಘಟನೆ ನಡೆದಿರುವುದು ಕೇರಳದ ತಿರುವನಂತಪುರದ ಕಾಲೇಜ್ ಆಫ್ ಇಂಜಿನಿಯರಿಂಗ್ ಸಮೀಪದ ಬಸ್ ನಿಲ್ದಾಣದಲ್ಲಿ.

ಪ್ರತಿಭಟನೆಯ ಚಿತ್ರಗಳು ವೈರಲ್
ಈ ಚಿತ್ರಗಳು ವೈರಲ್ ಆಗುತ್ತಿದ್ದಂತೆ ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಅವರ ಗಮನ ಸೆಳೆದಿವೆ. ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳ ವಿನೂತನ ಪ್ರತಿಭಟನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದೇ ಜಾಗದಲ್ಲಿ ಈಗ ವೈಫೈ ಸೌಲಭ್ಯದೊಂದಿಗೆ ಹೊಸ ಬಸ್ ನಿಲ್ದಾಣ ನಿರ್ಮಿಸಲು ಆದೇಶಿಸಿದ್ದಾರೆ.
ಮತ್ತೋರ್ವ ರಾಜಕಾರಣಿಯೊಬ್ಬರು ಈ ಚಿತ್ರವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ನೀವು ಕೆಟ್ಟ ಪದ್ಧತಿಗಳನ್ನು ತಂದರೆ, ಮಕ್ಕಳು ನಿಮಗೆ ಈ ರೀತಿ ಉತ್ತರ ಕೊಡುತ್ತಾರೆ. ತಿರುವನಂತಪುರಂ ಸಿಇಟಿ ವಿದ್ಯಾರ್ಥಿಗಳಿಗೆ ಅಭಿನಂದನೆಗಳು" ಎಂದು ವಿದ್ಯಾರ್ಥಿಗಳ ಕೆಲಸವನ್ನು ಶ್ಲಾಘಿಸಿದ್ದಾರೆ.

ಹೊಸ ಬಸ್ ನಿಲ್ದಾಣ ನಿರ್ಮಾಣದ ಭರವಸೆ
ಕಾಲೇಜು ಯೂನಿಯನ್ ಸದಸ್ಯ ಅಭಿಜಿತ್ ವಿವಿ ಹೇಳುವಂತೆ, ಸೀಟುಗಳನ್ನು ಮೂರು ಭಾಗಗಳನ್ನಾಗಿ ಕತ್ತರಿಸಿದ್ದು, ವಿದ್ಯಾರ್ಥಿಗಳ ಕೋಪಕ್ಕೆ ಕಾರಣವಾಯಿತು. ಅದಕ್ಕೆ ಈ ರೀತಿ ಪ್ರತಿಭಟನೆ ಮಾಡಲಾಗಿದೆ ಎಂದು ಹೇಳಿದರು. ಮೇಯರ್ ಆರ್ಯ ರಾಜೇಂದ್ರನ್ ಘಟನೆ ಬಗ್ಗೆ ಸ್ಥಳೀಯ ನಿವಾಸಿಗಳನ್ನು ವಿಚಾರಿಸಿದಾಗ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬೆಂಚ್ ಅನ್ನು ಮೂರು ಭಾಗಗಳಾಗಿ ಕತ್ತರಿಸಲಾಗಿದೆ ಎಂದು ಅವರು ಹೇಳಿದರು, ಲಿಂಗ-ತಟಸ್ಥ ಬಸ್ ನಿಲ್ದಾಣ ಸ್ಥಾಪಿಸಲಾಗುವುದು ಎಂದು ಮೇಯರ್ ಭರವಸೆ ನೀಡಿದ್ದಾರೆ ಎಂದು ಅಭಿಜಿತ್ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ತಿರುವನಂತಪುರ ಮೇಯರ್ ಬೆಂಬಲ
ಮೇಯರ್ ರಾಜೇಂದ್ರನ್ ಫೇಸ್‌ಬುಕ್ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದು ಹೀಗೆ ಬರೆದಿದ್ದಾರೆ, "ಸಿಇಟಿ ಬಳಿಯ ಸೀಟನ್ನು ಮೂರು ಭಾಗಗಳಾಗಿ ಕತ್ತರಿಸುವುದು ಸೂಕ್ತವಲ್ಲ ಮತ್ತು ಪ್ರಗತಿಪರ ಸಮಾಜಕ್ಕೆ ಯೋಗ್ಯವಲ್ಲ. ನಮ್ಮ ದೇಶದಲ್ಲಿ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಕುಳಿತುಕೊಳ್ಳಲು ಯಾವುದೇ ನಿಷೇಧವಿಲ್ಲ. ಯಾರಾದರೂ ಹಾಗೆ ಭಾವಿಸಿದರೆ, ಅವರು ಶಿಲಾ ಯುಗದಲ್ಲಿ ಬದುಕುತ್ತಿದ್ದಾರೆ ಎಂದು ಪರಿಗಣಿಸಬೇಕಾಗಿದೆ. ಈ ವಿಷಯದ ವಿರುದ್ಧ ಬಲವಾಗಿ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ" ಎಂದಿದ್ದಾರೆ.

ಘಟನೆ ಬಗ್ಗೆ ಕಾಲೇಜು ವಿದ್ಯಾರ್ಥಿಗಳ ಪ್ರತಿಕ್ರಿಯೆ
"ನಮ್ಮ ಫೋಟೋ ನಿವಾಸಿಗಳ ವಿರುದ್ಧದ ಹೋರಾಟವಲ್ಲ, ಆದರೆ ಲಿಂಗ ಬೇಧಭಾವವಿಲ್ಲದೆ ವಿದ್ಯಾರ್ಥಿಗಳನ್ನು ವೀಕ್ಷಿಸಲು ಅವರಿಗೆ ಶಿಕ್ಷಣ ನೀಡುವ ಅವಶ್ಯಕತೆಯಿದೆ. ನಾವು ಬೆಳೆದ ಸಂದರ್ಭಗಳು ಮತ್ತು ಅವರು ಬೆಳೆದ ಸಂದರ್ಭಗಳು ವಿಭಿನ್ನವಾಗಿವೆ. ಸಮಾಜವು ಒಂದೇ ರಾತ್ರಿಯಲ್ಲಿ ಬದಲಾಗುತ್ತದೆ ಎಂದು ನಾವು ಭಾವಿಸುವುದಿಲ್ಲ, ಆದರೆ ಜನರು ವಿದ್ಯಾರ್ಥಿಗಳನ್ನು ನೋಯಿಸುವುದನ್ನು ನಿಲ್ಲಿಸಲು ಇದು ಒಂದು ಕಾರಣವಾಗಲಿ. ನಮ್ಮ ಪೋಸ್ಟ್ ವೈರಲ್ ಆದ ನಂತರ, ನಮಗೆ ಜನರಿಂದ ದೊಡ್ಡ ಬೆಂಬಲ ಸಿಕ್ಕಿತು. ಫೇಸ್‌ಬುಕ್‌ನಲ್ಲೂ ನಮಗೆ ನಕಾರಾತ್ಮಕ ಕಾಮೆಂಟ್‌ಗಳು ಬಂದಿವೆ. ಆದರೆ ನ್ಯಾಯ ನಮ್ಮ ಕಡೆ ಇರುವಾಗ ಟೀಕೆಗಳಿಗೆ ತಲೆಕೆಡಿಕೊಳ್ಳಲ್ಲ" ಎಂದು ಪ್ರತಿಭಟಿಸಿದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ನಂದನಾ ಪಿ ಎಂ ಹೇಳಿದರು.
ಕಾಲೇಜಿನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಶ್ವಿನ್ ಎಂ ಮಾತನಾಡಿ, ಬಸ್ ನಿಲ್ದಾಣ ಅನಧಿಕೃತವಾಗಿದ್ದು, ಒಂಬತ್ತು ವರ್ಷಗಳ ಹಿಂದೆ ಸಂಘದಿಂದ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಹಲವಾರು ವರ್ಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಒಟ್ಟಿಗೆ ಕುಳಿತಿದ್ದಕ್ಕಾಗಿ ಸ್ಥಳೀಯರಿಂದ ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಸಂಘಟನೆಗಳು ಕೂಡ ವಿದ್ಯಾರ್ಥಿಗಳ ಬೆಂಬಲಕ್ಕೆ ಬಂದಿವೆ.












Click it and Unblock the Notifications