ಕೇರಳದಲ್ಲಿ "ಕೊರೊನಾ"ಗಾಗಿ ಮತಯಾಚನೆ ನಡೆಸಿರುವ ಬಿಜೆಪಿ!
ತಿರುವನಂತಪುರಂ, ನವೆಂಬರ್.20: ಕೇರಳದಲ್ಲಿ ಕೊರೊನಾಗೆ ಮತ ನೀಡಿ ಎಂದು ಭಾರತೀಯ ಜನತಾ ಪಕ್ಷವು ಭರ್ಜರಿ ಪ್ರಚಾರ ಮಾಡುತ್ತಿದೆ. ಕೊರೊನಾಗೂ ಬಿಜೆಪಿಗೂ ಎಲ್ಲಿದೆಲ್ಲಿ ನಂಟು. ಕೊರೊನಾಗಾಗಿ ಬಿಜೆಪಿ ಏಕೆ ಮತಯಾಚನೆ ಮಾಡುತ್ತಿದೆ ಎಂದು ಗೊಂದಲಕ್ಕೆ ಒಳಗಾಗಬೇಡಿ.
ಕೇರಳದಲ್ಲಿ ಸ್ಥಳೀಯ ಚುನಾವಣೆ ನಡೆಯುತ್ತಿದ್ದು ಕೊಲ್ಲಂನ ಮಥಿಲಿ ವಾರ್ಡಿನ ಬಿಜೆಪಿ ಅಭ್ಯರ್ಥಿ ಹೆಸರು ಕೊರೊನಾ ಥಾಮಸ್. ಅದೇ ಕೊರೊನಾ ಥಾಮಸ್ ಗಾಗಿ ಬಿಜೆಪಿ ಕಾರ್ಯಕರ್ತರು ಮತಯಾಚನೆ ಮಾಡುತ್ತಿದ್ದು, ಸಖತ್ ಸದ್ದು ಮಾಡಿದೆ.
ಮುಜುಗರ ಉಂಟು ಮಾಡುತ್ತಿದ್ದ ಹೆಸರು ಇಂದು ಪ್ರಚಾರಕ್ಕೆ ಅಸ್ತ್ರವಾಗಿದೆ. ಜಗತ್ತಿನಾದ್ಯಂತ ಕೊರೊನಾವೈರಸ್ ಸೋಂಕು ಹರಡುತ್ತಿದ್ದ ಸಂದರ್ಭದಲ್ಲಿ ಕೊರೊನಾ ಥಾಮಸ್ ಅವರಿಗೆ ತಮ್ಮ ಹೆಸರು ಹೇಳಿಕೊಳ್ಳುವುದಕ್ಕೂ ಮುಜುಗರ ಉಂಟಾಗುತ್ತಿತ್ತು. ಕೊರೊನಾ ಎಂದು ಜನರು ಹೀಯಾಳಿಸಿದಾಗ ಮನಸಿಗೆ ನೋವಾಗುತ್ತಿತ್ತು. ಆದರೆ ಇಂದು ಅದೇ ಹೆಸರು ಚುನಾವಣಾ ಪ್ರಚಾರದ ಅಸ್ತ್ರವಾಗಿ ಬಳಕೆಯಾಗುತ್ತಿದೆ.

ಕೊರೊನಾ ಹೆಸರಿನಿಂದಲೇ ಪ್ರಖ್ಯಾತಿ:
ಕೊಲ್ಲಂನ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕೊರೊನಾ ಥಾಮಸ್ ತಮ್ಮ ಹೆಸರಿನಿಂದಲೇ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಕೊರೊನಾ ಎಂಬ ಹೆಸರು ಕೇಳಿದಾಕ್ಷಣ ಜನರು ತಮ್ಮನ್ನು ಬೇಗ ಗುರುತಿಸುತ್ತಾರೆ. ಈ ಹೆಸರಿನಿಂದಲೇ ಹೆಚ್ಚು ಪ್ರಚಲಿತದಲ್ಲಿರುವುದಕ್ಕೆ ಸಂತಸವಾಗುತ್ತದೆ. ಮತದಾನದ ಸಂದರ್ಭದಲ್ಲಿ ಜನರಿಗೆ ನನ್ನ ಹೆಸರು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೆ ಹೆಚ್ಚು ಸುಲಭವಾಗುತ್ತದೆ ಎಂದು ಕೊರೊನಾ ಥಾಮಸ್ ಹೇಳಿದ್ದಾರೆ.

ತಂದೆಯನ್ನು ಸ್ಮರಿಸಿದ ಕೊರೊನಾ ಥಾಮಸ್:
ತಮಗೆ ಕೊರೊನಾ ಎಂದು ನಾಮಕರಣ ಮಾಡಿದ ತಂದೆ ಥಾಮಸ್ ಫ್ರಾನ್ಸಿಸ್ ರನ್ನು ಕೊರೊನಾ ಥಾಮಸ್ ಈ ಸಮಯದಲ್ಲಿ ಸ್ಮರಿಸಿಕೊಂಡರು. ನನ್ನ ತಂದೆಯು ನನಗೆ ವಿಭಿನ್ನ ಮತ್ತು ವಿಶೇಷವಾಗಿರುವ ಹೆಸರನ್ನು ಇರಿಸುವ ಬಗ್ಗೆ ಆಲೋಚನೆ ಮಾಡುತ್ತಿದ್ದರು. ಅಂಥ ಸಂದರ್ಭದಲ್ಲಿ ಈ ಹಿಂದಿನ ಕಾಲದಲ್ಲಿ ಕಾಣಿಸಿಕೊಂಡಿದ್ದ ವೈರಸ್ ವೊಂದರ ಹೆಸರನ್ನು ನನಗಿಟ್ಟು ಸಂಭ್ರಮಿಸಿದ್ದರು. ಇಂದು ಅವರಿಟ್ಟ ಹೆಸರಿನಿಂದ ನಾನು ಹೆಚ್ಚು ಪ್ರಸಿದ್ಧಿ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಿದೆ ಎಂದು ಕೊರೊನಾ ಥಾಮಸ್ ಹೇಳಿದ್ದಾರೆ.












Click it and Unblock the Notifications