ಶಬರಿಮಲೆ: ಮೂವರು ಪೊಲೀಸರಲ್ಲಿ ಕೋವಿಡ್ ಪಾಸಿಟಿವ್, ತೀವ್ರ ಕಟ್ಟೆಚ್ಚರ
ತಿರುವನಂತಪುರಂ, ನವೆಂಬರ್ 28: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಸುರಕ್ಷತೆಗಾಗಿ ನಿಯೋಜಿಸಲಾಗಿರುವ ಮೂವರು ಪೊಲೀಸ್ ಸಿಬ್ಬಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತೀವ್ರ ಕಟ್ಟೆಚ್ಚರದ ಸೂಚನೆ ನೀಡಿದ್ದಾರೆ.
ಸನ್ನಿಧಾನ ಸಮೀಪದಲ್ಲಿ ಒಬ್ಬ ಸಿಬ್ಬಂದಿ ಮತ್ತು ಪಂಪಾ ಬಳಿ ನಿಯೋಜನೆಗೊಂಡ ಇಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ಹೀಗಾಗಿ ಈ ಎರಡು ಭಾಗಗಳು ಮತ್ತು ನಿಳಕ್ಕಳ್‌ನಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲು ಡಿಡಿಬಿ ಸೂಚಿಸಿದೆ.
ಶಬರಿಮಲೆ ಬಾಗಿಲು ತೆರೆದು ಈವರೆಗೆ 39 ಕೊರೊನಾ ಸೋಂಕಿತರು ಪತ್ತೆ
ಟ್ರ್ಯಾವಂಕೋರ್ ದೇವಸ್ವಂ ಮಂಡಳಿ, ಪೊಲೀಸರು, ಆರೋಗ್ಯ ಕಾರ್ಯಕರ್ತರು ಮತ್ತು ಕಂದಾಯ ಅಧಿಕಾರಿಗಳನ್ನು ಒಳಗೊಂಡ ಜಂಟಿ ಕಾರ್ಯಪಡೆಯು ದೇವಾಲಯದ ಮಂಡಳಿಯ ಸಿಬ್ಬಂದಿ ಹಾಗೂ ಪೊಲೀಸರು ಸೇರಿದಂತೆ ಸರ್ಕಾರಿ ಉದ್ಯೋಗಿಗಳ ಮೇಲೆ ಪ್ರತಿ ಘಟಕ, ವಸತಿ ಪ್ರದೇಶಗಳಲ್ಲಿ ನಿಗಾವಹಿಸುತ್ತಿದೆ ಎಂದು ಶಬರಿಮಲೆ ದೇವಸ್ವಂನ ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಪ್ರತಿ ಪ್ರವೇಶ ಭಾಗಗಳಲ್ಲಿಯೂ ಭಕ್ತರು ಮತ್ತು ಸಿಬ್ಬಂದಿ ಸದಸ್ಯರನ್ನು ಥರ್ಮಲ್ ಸ್ಕ್ಯಾನರ್ ಬಳಸಿ ಪರೀಕ್ಷಿಸಲಾಗುತ್ತದೆ. ಸಿಬ್ಬಂದಿ ದ್ವಾರ, ಮಲ್ಲಿಕಾಪುರಂ ದೇವಸ್ಥಾನ ದ್ವಾರ, ದೇವಸ್ವಂ ಮೆಸ್ ದ್ವಾರ ಮತ್ತು ಅನ್ನದಾನ ಮಂಟಪಗಳ ಬಳಿ ಸಹ ಪರೀಕ್ಷೆ ನಡೆಯುತ್ತದೆ. ತಾತ್ಕಾಲಿಕ ನೌಕರರು ಮತ್ತು ಸರ್ಕಾರಿ ಉದ್ಯೋಗಿಗಳು ಸೇರಿದಂತೆ ದೇವಸ್ವಂ ನೌಕರರನ್ನು ಸಮೀಪದಿಂದ ಗಮನಿಸಲಾಗುತ್ತದೆ. ಅವರಲ್ಲಿ ಯಾವುದೇ ರೀತಿಯ ಲಕ್ಷಣ ಕಂಡುಬಂದರೂ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕೋವಿಡ್ ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಶಬರಿಮಲೆ ಭಕ್ತರ ಸಂಖ್ಯೆ ಹೆಚ್ಚಳಕ್ಕೆ ತೀರ್ಮಾನ
ಕೌಂಟರ್‌ಗಳಲ್ಲಿನ ಉದ್ಯೋಗಿಗಳಿಗೆ ಫೇಸ್ ಶೀಲ್ಡ್‌ಗಳನ್ನು ಧರಿಸುವಂತೆ ಸೂಚಿಸಲಾಗಿದೆ. ಎಲ್ಲ ಉದ್ಯೋಗಿಗಳೂ ಮಾಸ್ಕ್ ಧರಿಸುವುದು ಕಡ್ಡಾಯ. ನಿಳಕ್ಕಳ್ ಭಕ್ತರ ಶಿಬಿರದ ಬಳಿ ಮತ್ತಷ್ಟು ಕೋವಿಡ್ ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.