ಶ್ರೀನಗರದಲ್ಲಿ ಯಾಸಿನ್ ಮಲಿಕ್ ಬೆಂಬಲಿಗರಿಂದ ದಾಂಧಲೆ
ಶ್ರೀನಗರ, ಮೇ 25: ಶ್ರೀನಗರದ ಮೈಸುಮಾ ಪ್ರದೇಶದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಬೆಂಬಲಿಗರು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಬುಧವಾರ(ಮೇ 25)ದಂದು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು.
ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್‌ಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ಕೋರಿತ್ತು. ತೀರ್ಪಿನ ನಂತರ, ಶ್ರೀನಗರದ ಮೈಸುಮಾ ಮತ್ತು ಡೌನ್‌ಟೌನ್ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
2017ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಿದ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರತ್ಯೇಕತಾವಾದಿ ನಾಯಕ ಮೊಹಮ್ಮದ್ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಲಾಗಿದೆ.
ದೆಹಲಿ ವಿಶೇಷ ನ್ಯಾಯಾಲಯದ ಎದುರು ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಸೇರಿದಂತೆ ಎಲ್ಲಾ ಆರೋಪಗಳಲ್ಲಿ ತಪ್ಪೊಪ್ಪಿಕೊಂಡಿರುವುದರ ಬೆನ್ನಲ್ಲೇ ಮೇ 19ರಂದು ಯಾಸಿನ್ ಮಲಿಕ್ ಅಪರಾಧಿ ಎಂದು ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಬುಧವಾರ ಎನ್ಐಎ ವಿಶೇಷ ನ್ಯಾಯಾಲಯವು ಶಿಕ್ಷೆ ಪ್ರಮಾಣ ಪ್ರಕಟಿಸಿದೆ.

ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿದ್ದರು
ಈ ತಿಂಗಳ ಆರಂಭದಲ್ಲಿ, ಯಾಸಿನ್ ಮಲಿಕ್ ಅವರು ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಸೇರಿದಂತೆ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿದ್ದರು. ಸೆಕ್ಷನ್ 16 (ಭಯೋತ್ಪಾದನಾ ಕೃತ್ಯ) ಮತ್ತು ಸೆಕ್ಷನ್ 17 (ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹಿಸುವುದು) ಸೇರಿದಂತೆ ತನ್ನ ವಿರುದ್ಧ ಹೊರಿಸಲಾದ ಆರೋಪಗಳಿಗೆ ತಾನು ಸ್ಪರ್ಧಿಸುವುದಿಲ್ಲ ಎಂದು ಮಲಿಕ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮಲಿಕ್ ವಿರುದ್ಧ ಯುಎಪಿಎ ಸೆಕ್ಷನ್ 18
ಮಲಿಕ್ ವಿರುದ್ಧ ಯುಎಪಿಎ ಸೆಕ್ಷನ್ 18 (ಭಯೋತ್ಪಾದಕ ಕೃತ್ಯಕ್ಕೆ ಪಿತೂರಿ), ಮತ್ತು 20 (ಭಯೋತ್ಪಾದಕ ಗುಂಪು ಅಥವಾ ಸಂಘಟನೆಯ ಸದಸ್ಯ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ) ಮತ್ತು 124-ಎ (ದೇಶದ್ರೋಹ) ಪ್ರಕರಣಗಳು ದಾಖಲಾಗಿವೆ. ಮೇ 19 ರಂದು ವಿಶೇಷ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರನ್ನು ದೋಷಿ ಎಂದು ಘೋಷಿಸಿದರು ಮತ್ತು ದಂಡದ ಮೊತ್ತವನ್ನು ನಿರ್ಧರಿಸಲು ಅವರ ಆರ್ಥಿಕ ಪರಿಸ್ಥಿತಿಯನ್ನು ನಿರ್ಣಯಿಸಲು NIA ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ನಿಧಿ ಸಂಗ್ರಹಿಸಲು ಯಾಸಿನ್ ಮಲಿಕ್ ಜಗತ್ತಿನಾದ್ಯಂತ ತಮ್ಮ ನೆಟ್ ವರ್ಕ್ ಹೊಂದಿದ್ದ ಎಂದು ನ್ಯಾಯಾಲಯ ಹೇಳಿದೆ.
ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಫಾರೂಕ್ ಅಹ್ಮದ್ ದಾರ್ ಅಲಿಯಾಸ್ ಬಿಟ್ಟಾ ಕರಾಟೆ, ಶಬ್ಬೀರ್ ಶಾ, ಮಸರತ್ ಆಲಂ, ಮೊಹಮ್ಮದ್ ಯೂಸುಫ್ ಶಾ, ಅಫ್ತಾಬ್ ಅಹ್ಮದ್ ಶಾ, ನಯೀಮ್ ಖಾನ್, ಮೊಹಮ್ಮದ್ ಅಕ್ಬರ್ ಖಾಂಡೆ, ರಾಜಾ ಮೆಹ್ರಾಜುದ್ದೀನ್ ಕಲ್ವಾಲ್, ಬಶೀರ್ ಅಹ್ಮದ್ ಭಟ್, ಜಹೂರ್ ಅಹ್ಮದ್ ಶಾ ವತಾಲಿ, ಶಬೀರ್ ಅಹ್ಮದ್ ಶಾ, ಅಬ್ದುಲ್ ರಶೀದ್ ಶೇಖ್, ಮತ್ತು ನವಲ್ ಕಿಶೋರ್ ಕಪೂರ್ ಸೇರಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರ ವಿರುದ್ಧ ನ್ಯಾಯಾಲಯವು ಔಪಚಾರಿಕ ಆರೋಪಗಳನ್ನು ಮಾಡಿದೆ.

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯ
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಕ್ಕಾಗಿಯೇ ಪಾಕಿಸ್ತಾನ ಮತ್ತು ಅದರ ಏಜೆನ್ಸಿಗಳ ಮೂಲಕ ನಿಧಿ ಸಂಗ್ರಹಿಸಲಾಗುತ್ತಿದೆ. ದುಷ್ಕೃತ್ಯಗಳನ್ನು ಮಾಡುವುದಕ್ಕೆ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಸಹ ಬಳಸಲಾಗಿದೆ. ಭಯೋತ್ಪಾದನಾ ಕೃತ್ಯಗಳಿಗೆ ಅಂತಾರಾಷ್ಟ್ರೀಯ ಘೋಷಿತ ಭಯೋತ್ಪಾದಕರು ಹಾಗೂ ಆರೋಪಿ ಹಫೀಜ್ ಸಯೀದ್‌ನಿಂದಲೂ ಹಣ ಕಳುಹಿಸಲಾಗಿದೆ. ಭಾರತದ ಒಕ್ಕೂಟದಿಂದ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕಿಸುವ ಉದ್ದೇಶದಿಂದ ಕ್ರಿಮಿನಲ್ ಸಂಚು ರೂಪಿಸಲಾಗಿದೆ. ಈ ಮೂಲ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿಯೇ ಕೆಲವು ಉಗ್ರಕೃತ್ಯಗಳು ಪಿತೂರಿಯನ್ನು ನಡೆಸುವ ಕುರಿತು ಚರ್ಚಿಸಲಾಗಿದೆ ಎಂದು ಹೇಳಲಾಗಿದೆ.












Click it and Unblock the Notifications