'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಗ್ಗೆ ಕಾಶ್ಮೀರದ ಮಾಜಿ ಸಿಎಂ ಆಡಿದ ಮಾತು ಎಂಥದ್ದು?
ಹೈದ್ರಾಬಾದ್, ಮಾರ್ಚ್ 22: ದೇಶದಲ್ಲಿ ಸಖತ್ ಸದ್ದು ಮಾಡುತ್ತಿರುವ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ ಸಿನಿಮಾ ಕೇವಲ ಪ್ರಚಾರಕ್ಕಾಗಿ ಮಾಡಿರುವ ಚಿತ್ರ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ದೂಷಿಸಿದ್ದಾರೆ.
"ಅದು ಪ್ರಚಾರಕ್ಕಾಗಿ ಮಾಡಿರುವ ಚಿತ್ರ. ರಾಜ್ಯದಲ್ಲಿ ಈ ಹಿಂದೆ ನಡೆದಿರುವ ದುರಂತ ಹಿಂದೂ ಮತ್ತು ಮುಸ್ಲಿಂ ಎನ್ನದೇ ಎಲ್ಲರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಆ ದುರಂತವನ್ನು ನೆನೆಸಿಕೊಂಡರೆ, ಇಂದಿಗೂ ನನ್ನ ಮನಸ್ಸಿಗೆ ನೋವಾಗುತ್ತದೆ. ಅದರಲ್ಲಿ ಜನಾಂಗೀಯ ನಿರ್ಮೂಲನೆಯಲ್ಲಿ ಆಸಕ್ತಿ ಹೊಂದಿರುವ ರಾಜಕೀಯ ಪಕ್ಷಗಳ ಅಂಶವಿದೆ, "ಎಂದು ಅವರು ಹೇಳಿದರು.
ಕಳೆದ 1990ರಲ್ಲಿ ಕಾಶ್ಮೀರ್ ದಂಗೆಯ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರು ಅನುಭವಿಸಿದ ಕ್ರೂರ ನೋವುಗಳ ನಿಜವಾದ ಕಥೆಯನ್ನು ಕಾಶ್ಮೀರ ಫೈಲ್ಸ್ ಹೇಳುತ್ತದೆ. ಆ ಸಮಯದಲ್ಲಿ ಸರ್ಕಾರಗಳು ನಿಷ್ಕ್ರಿಯವಾಗಿದ್ದವು ಎಂಬ ಆರೋಪಗಳನ್ನು ಫಾರೂಕ್ ಅಬ್ದುಲ್ಲಾ ತಳ್ಳಿ ಹಾಕಿದ್ದಾರೆ.

ಸತ್ಯ ತಿಳಿಯಲು ಹೀಗೆ ಮಾಡಿ ಎಂದ ಫಾರೂಕ್:
ಕಾಶ್ಮೀರದಲ್ಲಿ 1990ರಲ್ಲಿ ನಡೆದ ದಂಗೆಯ ಕುರಿತು ನಿಜವಾದ ಸತ್ಯವನ್ನು ತಿಳಿಯಲು ಈ ಸಿನಿಮಾ ನೋಡಿದರೆ ಸಾಕಾಗುವುದಿಲ್ಲ. "ಜನರು ಸತ್ಯವನ್ನು ತಿಳಿದುಕೊಳ್ಳಲು ಬಯಸಿದರೆ, ಅಂದಿನ ಕಾಲದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಮುಸರ್ ರಜಾ ಅಥವಾ ಆ ಸಮಯದಲ್ಲಿ ಕೇಂದ್ರ ಸಚಿವರಾಗಿದ್ದ ಆರಿಫ್ ಮುಹಮ್ಮದ್ ಖಾನ್ ಅಂಥವರನ್ನು ಮಾತನಾಡಿಸಿ," ಎಂದರು.
ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್‌ನಿಂದ 1989ರಲ್ಲಿ ಮುಫ್ತಿ ಮೊಹಮ್ಮದ್ ಸಯೀದ್ ಪುತ್ರಿ ರುಬಯ್ಯ ಅಪಹರಣದ ಬಗ್ಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, "ಕೇಂದ್ರ ಸರ್ಕಾರದವರು ನಾವು ಬಂಧಿಸಿದ್ದ ಐದು ಜನರನ್ನು ಬಿಡುಗಡೆಗೊಳಿಸಲು ಬಯಸಿದಾಗ ಅದಕ್ಕೆ ನಾನು ನಿರಾಕರಿಸಿದೆ. ಅಂದು ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಭಾರತ ಸರ್ಕಾರದ ನೇತೃತ್ವ ವಹಿಸಿದ್ದರು," ಎಂದರು.
"ಮೃತ ವ್ಯಕ್ತಿಯ ಬಗ್ಗೆ ಈ ರೀತಿ ಮಾತನಾಡುವುದು ತಪ್ಪಾಗುತ್ತದೆ, ಆದರೆ ಆ ಕಾಲದ ರಾಜ್ಯಪಾಲರು ಕಾಶ್ಮೀರಿ ಪಂಡಿತರನ್ನು ಬಸ್‌ಗಳಲ್ಲಿ ತುಂಬಿ ಕಳುಹಿಸಿದರು. ಎರಡು ತಿಂಗಳಿನಲ್ಲಿ ನಾನು ಸೇನೆಯನ್ನು ಬಳಸಿಕೊಂಡು ಅವರನ್ನು ಮಟ್ಟ ಹಾಕುತ್ತೇನೆ. ಈ ಪ್ರತೀಕಾರದ ಸಂದರ್ಭದಲ್ಲಿ ಅದರ ಪ್ರಭಾವ ನಿಮ್ಮ ಮೇಲೆ ಆಗಬಾರದು. ಇನ್ನೆರೆಡು ತಿಂಗಳಿನಲ್ಲಿ ನಾನು ನಿಮ್ಮನ್ನೆಲ್ಲ ವಾಪಸ್ ಕರೆಸಿಕೊಳ್ಳುತ್ತೇನೆ ಅಂತಾ ಹೇಳಿದ್ದರು," ಎಂದು ಫಾರೂಕ್ ಅಬ್ದುಲ್ಲಾ ದೂಷಿಸಿದರು.
ದೇಶದಲ್ಲಿ ಸದ್ದು ಮಾಡುತ್ತಿರುವ "ದಿ ಕಾಶ್ಮೀರ್ ಫೈಲ್ಸ್"
ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ ಈ ಚಲನಚಿತ್ರದ ಕಳೆದ ಮಾರ್ಚ್ 11ರಂದು ಬಿಡುಗಡೆಯಾಗಿತ್ತು. 1990ರ ದಶಕದ ವೇಳೆಯಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು, ಎಷ್ಟರ ಮಟ್ಟಿಗೆ ಕಿರುಕುಳ ನೀಡಲಾಯಿತು ಎಂಬುದರ ಬಗ್ಗೆ ಚಿತ್ರಿಸಲಾಗಿದೆ. ಅದಲ್ಲದೇ ರಾತ್ರೋರಾತ್ರಿ ಕಾಶ್ಮೀರಿ ಪಂಡಿತರನ್ನು ಮನೆಯಿಂದ ಓಡಿಸುವುದಕ್ಕೆ ನಡೆಸಿದ ದೌರ್ಜನ್ಯದ ಕುರಿತು ಎತ್ತಿ ತೋರಿಸಲಾಗಿದೆ. ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ ಹಾಗೂ ಪ್ರಕಾಶ್ ಬೆಳವಡಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications