ಪುಲ್ವಾಮಾ ಉಗ್ರ ದಾಳಿ, ಗಾಯಗೊಂಡಿದ್ದ ಇಬ್ಬರು ಯೋಧರು ಹುತಾತ್ಮ
ಶ್ರೀನಗರ, ಜೂನ್ 18: ಕಳೆದ ಫೆಬ್ರವರಿಯಲ್ಲಿ ನಡೆದ ಪುಲ್ವಾಮ ಉಗ್ರದಾಳಿಯನ್ನೇ ಹೋಲುವಂತೆ ಸೋಮವಾರ ನಡೆದ ದಾಳಿಯಲ್ಲಿ ಗಾಯಗೊಂಡಿದ್ದ 9 ಯೋಧರಲ್ಲಿ ಇಬ್ಬರು ಇಂದು ಮೃತರಾಗಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅರಿಹಾಲ್ ಗ್ರಾಮದಲ್ಲಿ ಸೇನೆಯ ವಿಶೇಷ ಪಡೆಗಳ ಬೆಂಗಾವಲು ವಾಹನದ ಮೇಲೆ ಈ ಸುಧಾರಿತ ಸ್ಫೋಟಕ(ಐಇಡಿ)ದ ಮೂಲಕ ಉಗ್ರರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿ ದಾಳಿ ನಡೆಸಿದ್ದ ಒಂಬತ್ತು ಯೋಧರು ಗಾಯಗೊಂಡಿದ್ದರು.
44ನೇ ರಾಷ್ಟ್ರೀಯ ರೈಫಲ್ಸ್ ನ ಬುಲೆಟ್ ಮತ್ತು ಮೈನ್ ಪ್ರೂಫ್ ವಾಹನದ ಮೇಲೆ ಈದ್ಗಾ ಅರಿಹಾಲ್ ಸಮೀಪದ ಅರಿಹಾಲ್-ಲಸ್ಸಿಪೊರಾ ರಸ್ತೆಯಲ್ಲಿ ಐಇಡಿ ದಾಳಿ ನಡೆಸಲಾಗಿತ್ತು.

ಈ ದಾಳಿ ಸಾಧ್ಯತೆಯ ಬಗ್ಗೆ ಈ ಮೊದಲೇ ಪಾಕಿಸ್ತಾನ ಮಾಹಿತಿ ನೀಡಿತ್ತು ಎನ್ನಲಾಗಿದೆ.
ಈ ದಾಳಿಯ ನಂತರ ಇಂದು ಜಮ್ಮು-ಕಾಶ್ಮೀರದ ಅನಂತ್ ನಾಗ್ ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಬಲಿಯಾದರೆ, ಓರ್ವ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗದೆ.
ಕಳೆದ ಫೆಬ್ರವರಿ 14 ರಂದು ಸಿಆರ್ ಪಿಎಫ್ ಯೋಧರಿದ್ದ ವಾಹನಕ್ಕೆ ಆರ್ ಡಿ ಎಕ್ಸ್ ಹೊತ್ತಿದ್ದ ವಾಹನವನ್ನು ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆತ್ಮಾಹುತಿ ದಾಳಿಕಾರ ಡಿಕ್ಕಿ ಹೊಡೆದಿದ್ದರಿಂದ ನಲವತ್ತಕ್ಕೂ ಹೆಚ್ಚು ಯೋಧರು ಬಲಿಯಾಗಿದ್ದರು.












Click it and Unblock the Notifications