ಜಮ್ಮು-ಕಾಶ್ಮೀರ: ಪ್ರಧಾನಿ ಸರ್ವಪಕ್ಷ ಸಭೆ ಫಲಿತಾಂಶದ ಬಗ್ಗೆ ಗುಪ್ಕರ್ ಒಕ್ಕೂಟದ ಅವಿಶ್ವಾಸ
ಶ್ರೀನಗರ್, ಜುಲೈ 05: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ ಪೀಪಲ್ಸ್ ಆಲಿಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ರಾಜಕೀಯ ಹಾಗೂ ಇತರೆ ಕೈದಿಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ನಡೆ ವಿಶ್ವಾಸಾರ್ಹವಾಗಿಲ್ಲ ಎಂದು ಗುಪ್ಕರ್ ಒಕ್ಕೂಟದ ವಕ್ತಾರ ಹಾಗೂ ಸಿಪಿಐ(ಎಂ) ಮುಖಂಡ ಎಂ ವೈ ತರಿಗಮಿ ಹೇಳಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ನಿವಾಸದಲ್ಲಿ ನಡೆದ ಗುಪ್ಕರ್ ಒಕ್ಕೂಟದ ಸಭೆ ಬಳಿಕ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಭಾನುವಾರವಷ್ಟೇ ನಡೆದ ಸಭೆಯಲ್ಲಿ ಗುಪ್ಕರ್ ಒಕ್ಕೂಟದ ಉಪಾಧ್ಯಕ್ಷ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಸಿಪಿಐ(ಎಂ) ಮುಖಂಡ ತರಿಗಮಿ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಹಸನೇನ್ ಮಸೂದ್, ಪೀಪಲ್ಸ್ ಮೂಮೆಂಟ್ ಮುಖ್ಯಸ್ಥ ಜಾವೇದ್ ಮುಸ್ತಾಫ್ ಮಿರ್ ಮತ್ತು ಅವಮಿ ನ್ಯಾಷನಲ್ ಕಾನ್ಫರೆನ್ಸ್ ಹಿರಿಯ ಅಧ್ಯಕ್ಷ ಮುಜಾಫರ್ ಅಹ್ಮದ್ ಶಾ ಹಾಜರಿದ್ದರು. ಜೂನ್ 24ರಂದು ದೆಹಲಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ನಿವಾಸದಲ್ಲಿ ನಡೆದ ಸರ್ವಪಕ್ಷ ಸಭೆ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿತ್ತು ಎಂದು ಗುಪ್ಕರ್ ಒಕ್ಕೂಟದ ವಕ್ತಾರರು ತಿಳಿಸಿದ್ದಾರೆ.

ಜೂನ್ 24ರ ಸರ್ವಪಕ್ಷ ಸಭೆ ಬಗ್ಗೆ ಗುಪ್ಕರ್ ಒಕ್ಕೂಟ ಅಸಮಾಧಾನ
ನವದೆಹಲಿಯಲ್ಲಿ ಜೂನ್ 24ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯ ಫಲಿತಾಂಶದ ಕುರಿತು ಗುಪ್ಕರ್ ಒಕ್ಕೂಟದ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ. "ಅಂದು ನಡೆಸಿದ ಸಭೆಯಲ್ಲಿ ರಾಜಕೀಯ ಕೈದಿಗಳು ಅಥವಾ ಇತರೆ ಕೈದಿಗಳನ್ನು ದೋಷಮುಕ್ತಗೊಳಿಸುವು ಹಾಗೂ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಯಾವುದೇ ವಿಶ್ವಾಸಾರ್ಹ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲಿಲ್ಲ. ಕೇಂದ್ರ ಸರ್ಕಾರವು 2019ರಿಂದ ಈಚೆಗೆ ಜಮ್ಮು ಕಾಶ್ಮೀರದಲ್ಲಿ ಸೃಷ್ಟಿಯಾಗಿರುವ ಉಸಿರುಗಟ್ಟಿಸುವ ವಾತಾವರಣವನ್ನು ಸುಧಾರಿಸುವ ಬಗ್ಗೆ ಪ್ರಸ್ತಾಪಿಸಲಿಲ್ಲ," ಎಂದು ಗುಪ್ಕರ್ ಒಕ್ಕೂಟದ ವಕ್ತಾರರು ಆರೋಪಿಸಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಮೋದಿ ಎದುರಿಗೆ ನಾಲ್ಕೈದು ಬೇಡಿಕೆ
"ಜಮ್ಮು-ಕಾಶ್ಮೀರದಲ್ಲಿ ರಾಜ್ಯತ್ವದ ಪುನರ್ ಸ್ಥಾಪನೆ, ಚುನಾವಣೆಗಳನ್ನು ನಡೆಸುವುದು, ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ, ಜಮ್ಮು-ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆಯ ಪುನಃಸ್ಥಾಪನೆ ಮತ್ತು ಸ್ಥಳೀಯರಿಗೆ ಭೂಮಿ ಮತ್ತು ಉದ್ಯೋಗಗಳನ್ನು ಒದಗಿಸುವ ಸಾಂವಿಧಾನಿಕ ಭರವಸೆ ಸೇರಿದಂತೆ ನಾಲ್ಕೈದು ಬೇಡಿಕೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದೆ ಪ್ರಸ್ತಾಪಿಸಲಾಗಿದೆ," ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ. ಇದರ ಜೊತೆಗೆ ಜಮ್ಮು ಕಾಶ್ಮೀರ ವಿಭಜನೆ ವಿರೋಧಿಸಿದ್ದಕ್ಕೆ ಬಂಧಿಸಿರುವ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವಂತೆ ಆಜಾದ್ ಆಗ್ರಹಿಸಿದ್ದರು.

"ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದು ಪಾಕಿಸ್ತಾನವಲ್ಲ"
"ಜಮ್ಮು-ಕಾಶ್ಮೀರಕ್ಕೆ 370ನೇ ವಿಧಿಯ ಅಡಿ ವಿಶೇಷ ಸ್ಥಾನಮಾನವನ್ನು ನಮ್ಮ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಮತ್ತು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರೇ ಹೊರತೂ ಪಾಕಿಸ್ತಾನವಲ್ಲ. ಕಳೆದ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಅಸಂವಿಧಾನಿಕವಾಗಿ ತೆಗೆದುಕೊಂಡ ನಿರ್ಧಾರದಿಂದ ಜಮ್ಮು ಕಾಶ್ಮೀರದ ಜನರು ಅವಮಾನಕ್ಕೀಡಾಗಿದ್ದಾರೆ. ತೀವ್ರವಾಗಿ ನೊಂದಿರುವ ಜನರು ಭಾವನಾತ್ಮಕವಾಗಿ ಕುಸಿದು ಹೋಗಿದ್ದಾರೆ," ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ಅಡಿ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಒತ್ತಾಯಿಸಿದರು. ರಾಜ್ಯದ ಜನರು ಅದಕ್ಕಾಗಿ ಶಾಂತಿಯುತ ಮತ್ತು ಸಾಂವಿಧಾನಿಕವಾಗಿ ತಿಂಗಳು ಮತ್ತು ವರ್ಷಗಳ ಕಾಲ ಒಟ್ಟಾಗಿ ಹೋರಾಡುತ್ತಾರೆ ಎಂದು ಪ್ರತಿಪಾದಿಸಿದರು.

2019ರಲ್ಲಿ ವಿಶೇಷ ಸ್ಥಾನಮಾನ ರದ್ದು
ಕೇಂದ್ರ ಸಂಸತ್ತಿನಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ 2019ರ ಆಗಸ್ಟ್ 5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಯಿತು. ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಂಗಡಣೆ ಮಾಡಲಾಯಿತು.












Click it and Unblock the Notifications