ಪುಲ್ವಾಮಾ ದಾಳಿಗೆ ಜೈಷ್ ಉಗ್ರ ಸಂಘಟನೆ ವ್ಯಯಿಸಿದ್ದ ಹಣವೆಷ್ಟು?
ಶ್ರೀನಗರ, ಆಗಸ್ಟ್ 27: ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯು ಪುಲ್ವಾಮಾ ದಾಳಿಗೆ 5.7 ಲಕ್ಷ ರೂ ವೆಚ್ಚ ಮಾಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಅಷ್ಟು ಹಣವನ್ನು ವ್ಯಾನ್ ಹಾಗೂ ಸ್ಫೋಟಕ ಸಾಮಗ್ರಿಗಳನ್ನು ಖರೀದಿ ಗೆ ವೆಚ್ಚ ಮಾಡಲಾಗಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರುವರಿ 14ರಂದು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಆತ್ಮಹತ್ಯಾ ದಾಳಿ ನಡೆಸಿತ್ತು. ಈ ಘಟನೆಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.
ದಾಳಿಗೆ ಬಳಕೆ ಮಾಡಿದ್ದ ಮಾರುತಿ ಇಕೋ ವ್ಯಾನ್ ಅನ್ನು 1.85 ಲಕ್ಷ ರೂ.ಗೆ ಖರೀದಿ ಮಾಡಲಾಗಿತ್ತು. ಇದರಲ್ಲಿ ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುವ ಸಲುವಾಗಿ 35 ಸಾವಿರ ರೂ. ಖರ್ಚು ಮಾಡಿ ವ್ಯಾನ್ ಅನ್ನು ಮಾರ್ಪಾಡು ಮಾಡಲಾಗಿತ್ತು.

2.25 ಲಕ್ಷಕ್ಕೆ ರೂ.ಗೆ ಎರಡು ಐಇಡಿ (ಸುಧಾರಿತ ಸ್ಫೋಟಕ ಸಾಮಗ್ರಿ) ಹಾಗೂ ಆನ್‌ಲೈನ್ ಮೂಲಕ 30 ಸಾವಿರ ರೂ. ಮೌಲ್ಯದ ಅಲ್ಯೂಮಿನಿಯಂ ಖರೀದಿ ಮಾಡಲಾಗಿತ್ತು. ಇತರೆ ವೆಚ್ಚಗಳಿಗೆ 32 ಸಾವಿರ ರೂ. ವ್ಯಯಿಸಲಾಗಿತ್ತು. ಈ ದಾಳಿಗೆ 5.7 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ದಾಖಲಾಗಿದೆ.
2019ರ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಉಮರ್ ಫಾರೂಕ್ ಬ್ಯಾಂಕ್ ಖಾತೆಗೆ ಪಾಕಿಸ್ತಾನದ ಅಲೈದ್ ಹಾಗೂ ಮೀಜಾದ್ ಬ್ಯಾಂಕಿನಿಂದ 10 ಲಕ್ಷ ರೂಪಾಯಿ ಸಂದಾಯವಾಗಿರುವುದನ್ನು ಎನ್ಐಎ ಪತ್ತೆ ಮಾಡಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಈ ದಾಳಿ ಪ್ರಕರಣದ ತನಿಖೆ ನಡೆಸಿತ್ತು. ಬುಧವಾರ ಜಮ್ಮುವಿನ ವಿಶೇಷ ಕೋರ್ಟ್‌ನಲ್ಲಿ ಜೈಷ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸೇರಿದಂತೆ 19 ಜನರ ವಿರುದ್ಧ ಎನ್ಐಎ ದೋಷಾರೋಪ ಪಟ್ಟಿ ಸಲ್ಲಿಸಿದೆ. ಒಟ್ಟು 13,500 ಪುಟಗಳ ದೋಷಾರೋಪ ಪಟ್ಟಿಯನ್ನು ದಾಖಲಿಸಲಾಗಿದೆ.
ಈ ದಾಳಿಯ ರೂವಾರಿ ಉಗ್ರ ಮಸೂದ್ ಅಜರ್ ಅಳಿಯ ಉಮರ್ ಫಾರೂಕ್ ಎಲ್ಲಾ ಖರ್ಚು ವೆಚ್ಚಗಳನ್ನು ನೋಡಿಕೊಂಡಿದ್ದ ಎಂದು ದಾಖಲಿಸಲಾಗಿದೆ.











Click it and Unblock the Notifications