ಕುಪ್ವಾರಾದಲ್ಲಿ ಐವರು ಉಗ್ರರನ್ನು ಹೊಡೆದುರುಳಿಸಿ, ಹುತಾತ್ಮರಾದ ಐವರು ಯೋಧರು
ಶ್ರೀನಗರ, ಏಪ್ರಿಲ್ 6: ಕುಪ್ವಾರ ಬಳಿಯ ಗಡಿ ನಿಯಂತ್ರಣ ರೇಖೆ ಬಳಿ ಇರುವ ಹಿಮಚ್ಛಾದಿತ ಪ್ರರ್ವತ ಶ್ರೇಣಿಯಲ್ಲಿ ನಡೆದ ಭಾರಿ ಕಾರ್ಯಾಚರಣೆಯಲ್ಲಿ ಐವರು ಉಗ್ರರನ್ನು ಕೊಂದು ಐವರು ಯೋಧರು ಹುತಾತ್ಮರಾಗಿದ್ದಾರೆ.
ಮೃತಪಟ್ಟ ಉಗ್ರರಿಂದ ಭಾರಿ ಪ್ರಮಾಣ ಮದ್ದು ಗುಂಡುಗು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಿಮಾಚಲ ಪ್ರದೇಶದ ಸುಬೇದಾರ್ ಸಂಜೀವ್ ಕುಮಾರ್, ಉತ್ತರಾಖಂಡದ ಹವಲ್ದಾರ್ ದಾವೇಂದ್ರ ಸಿಂಗ್ , ಹಿಮಾಚಲ ಪ್ರದೇಶದ ಸಿಪಾಯಿ ಬಾಲಕೃಷ್ಣನ್, ಉತ್ತರಾಖಂಡ ಸಿಪಾಯಿ ಅಮಿತ್ ಕುಮಾರ್ ಮತ್ತು ರಾಜಸ್ಥಾನದ ಸಿಪಾಯಿ ಚತ್ರಪಾಲ್ ಸಿಂಗ್ ಹುತಾತ್ಮರಾಗಿದ್ದಾರೆ.
ಏಪ್ರಿಲ್ 1 ರಂದು ಪಹರೆಯಲ್ಲಿದ್ದ ಯೋಧರು ಹಿಮಚ್ಛಾದಿತ ಪರ್ವತ ಶ್ರೇಣಿಯಲ್ಲಿ ಅಪರಿಚಿತರ ಹೆಜ್ಜೆಗುರುತುಗಳನ್ನು ಗಮನಿಸಿದ್ದರು. ಈ ಪ್ರದೇಶ ಅತ್ಯಂತ ಕಡಿದಾಗಿದ್ದು, ಬೆಟ್ಟದ ತುದಿ ತುಂಬಾ ಮೊನಚಾಗಿದೆ. ಆದರೂ ಒಳನುಸುಳದಂತೆ ತಡೆಯಲು ಅಳವಡಿಸಿದ್ದ ಬೇಲಿಯನ್ನು ಉಗ್ರರು ಹಾರಿ ಭಾರತದ ಗಡಿಯೊಳಗೆ ಪ್ರವೇಶಿಸಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಯೋಧರ ಪಡೆಯನ್ನು ಕರೆಸಿಕೊಂಡ ಗಡಿಭಾಗದ ಯೋಧರು ಮತ್ತೆ ಶೋಧ ಕಾರ್ಯ ಮುಂದುವರೆಸಿದ್ದರು. ಏಪ್ರಿಲ್ 3ರ ಸಂಜೆ 4.30 ಮತ್ತು ಏಪ್ರಿಲ್ 4 ರಂದು ಸಂಜೆ 6.30ಕ್ಕೆ ಉಗ್ರರು ಕಾಣಿಸಿಕೊಂಡರೂ ಮತ್ತೆ ತಪ್ಪಿಸಿಕೊಂಡಿದ್ದರು.
ಬಳಿಕ ಕಾರ್ಯಾಚರಣೆ ಮುಂದುವರೆಸಿ ಉಗ್ರರು ಅಡಗಿಕೊಂಡಿರುವ ಪ್ರದೇಶಕ್ಕೆ ಹೆಲಿಕಾಪ್ಟರ್ ಮೂಲಕ ಹೋಗಿ ಅವರನ್ನು ಸದೆಬಡಿಯಲಾಯಿತು.












Click it and Unblock the Notifications