ಪುಲ್ವಾಮದಲ್ಲಿ ಉಗ್ರರ ದಾಳಿ; ಎಂಟು ಮಂದಿಗೆ ಗಾಯ
ಶ್ರೀನಗರ, ಜನವರಿ 02: ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಎಂಟು ನಾಗರಿಕರು ಗಾಯಗೊಂಡಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಪುಲ್ವಾಮ ಜಿಲ್ಲೆಯ ತ್ರಾಲ್ ಬಸ್ ನಿಲ್ದಾಣದ ಸಮೀಪ ಭದ್ರತಾ ಪಡೆ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ವಾಸಸ್ಥಳ ಪತ್ರ ಪಡೆದ ಆಭರಣ ವ್ಯಾಪಾರಿಯ ಹತ್ಯೆ: ಮತ್ತಷ್ಟು ದಾಳಿ ಎಚ್ಚರಿಕೆ ನೀಡಿದ ಉಗ್ರರು
ಬಸ್ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಆದರೆ ಗುರಿ ತಪ್ಪಿ ಆ ಗ್ರೆನೇಡ್ ಜನಜಂಗುಳಿ ತುಂಬಿದ್ದ ಮಾರುಕಟ್ಟೆಯಲ್ಲಿ ಸ್ಫೋಟಿಸಿರುವುದಾಗಿ ತಿಳಿದುಬಂದಿದೆ. ಮಾರುಕಟ್ಟೆಯಲ್ಲಿದ್ದ ಇಬ್ಬರು ಮೊದಲು ಗಾಯಗೊಂಡಿದ್ದಾಗಿ ವರದಿಯಾಗಿತ್ತು. ಆನಂತರ ಆರು ಮಂದಿ ಈ ಘಟನೆಯಲ್ಲಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ದಾಳಿ ನಡೆಯುತ್ತಿದ್ದಂತೆಯೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಾಳಿ ನಡೆದ ಬಳಿಕ ಉಗ್ರರ ತೀವ್ರ ಶೋಧ ಕಾರ್ಯವನ್ನು ಭದ್ರತಾ ಪಡೆ ಕೈಗೊಂಡಿದೆ.