Zaheer Khan: ಸಿಎಸ್‌ಕೆ ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡ ಬೆನ್ನಲ್ಲೇ ಜಹೀರ್ ಖಾನ್ ಮೊದಲ ಪ್ರತಿಕ್ರಿಯೆ
Zaheer Khan: ಐಪಿಎಲ್‌ನ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್‌ಗೆ ನೂತನ ಹೆಡ್ ಕೋಚ್ ಆದ ಬೆನ್ನಲ್ಲೇ ಜಹೀರ್ ಖಾನ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದ್ರೆ ಅವರು ಏನು ಹೇಳಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಐದು ಬಾರಿಯ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೂತನ ಮುಖ್ಯ ತರಬೇತುದಾರ ಯಾರೆಂಬ ಕುತೂಹಲಕ್ಕೆ ಸೋಮವಾರ (ಸೆಪ್ಟೆಂಬರ್ 22) ತೆರೆಬಿದ್ದಿದ್ದು, 2027ರ ಐಪಿಎಲ್ ಆವೃತ್ತಿಗಾಗಿ ಟೀಮ್ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ.

ಮುಖ್ಯ ಕೋಚ್ ಹುದ್ದೆ ರೇಸ್‌ನಲ್ಲಿ ಯಾರೆಲ್ಲಾ ಇದ್ದರು?
ಇಯಾನ್ ಮಾರ್ಗನ್, ಮೈಕಲ್ ಹಸ್ಸಿ ಮತ್ತು ಹೇಮಂಗ್ ಬದಾನಿ ಅವರಂತಹ ಪ್ರಮುಖ ಹೆಸರುಗಳು ಈ ರೇಸ್‌ನಲ್ಲಿ ಕೇಳಿಬಂದಿದ್ದವು. ಆದರೆ ಇದೀಗ ಜಹೀರ್ ಖಾನ್ ಅವರ ನೇಮಕವು ಹಲವರಿಗೆ ಅಚ್ಚರಿ ಮೂಡಿಸಿದೆ. ಜಹೀರ್ ಖಾನ್ ಅವರು 18 ವರ್ಷಗಳ ಕಾಲ ಸಿಎಸ್‌ಕೆ ತಂಡದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಸ್ಟೀಫನ್ ಫ್ಲೆಮಿಂಗ್ ಅವರ ಸ್ಥಾನವನ್ನು ತುಂಬಲಿದ್ದಾರೆ.
ಸಿಎಸ್‌ಕೆ ಫ್ರಾಂಚೈಸಿಯ ಮಾಲಕಿ ಹೇಳಿದ್ದೇನು?
ಈ ಕುರಿತು ಫ್ರಾಂಚೈಸಿಯ ಮಾಲಕಿ ರೂಪಾ ಗುರುನಾಥ್ ಅವರು ಮಾತನಾಡಿದ್ದು, ಚೆನ್ನೈ ಸೂಪರ್ ಕಿಂಗ್ಸ್‌ನ ಅಧಿಕಾರಿಗಳು ಅವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 'ಸಿಎಸ್‌ಕೆ ತಂಡದ ಮುಖ್ಯ ತರಬೇತುದಾರರಾಗಿ ಜಹೀರ್ ಖಾನ್ ಅವರನ್ನು ಖಚಿತಪಡಿಸಲು ನಮಗೆ ಸಂತೋಷವಾಗುತ್ತಿದೆ. ಅವರ ಸುದೀರ್ಘ ಹಾಗೂ ಶ್ರೇಷ್ಠ ಆಟದ ಜೀವನ ಮತ್ತು ಯುವ ಪ್ರತಿಭೆಗಳನ್ನು ಬೆಳೆಸುವಲ್ಲಿ ಅವರಿಗಿರುವ ಅನುಭವವು ನಮ್ಮ ತಂಡಕ್ಕೆ ದೊಡ್ಡ ಬಲವನ್ನು ನೀಡಲಿದೆ. ಅವರ ಮಾರ್ಗದರ್ಶನವು ಈ ಫ್ರಾಂಚೈಸಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ನೆರವಾಗಲಿದೆ ಎಂಬ ವಿಶ್ವಾಸ ನಮಗಿದೆ,' ಎಂದು ಫ್ರಾಂಚೈಸಿಯ ಮಾಲೀಕಿ ರೂಪಾ ಗುರುನಾಥ್ ತಿಳಿಸಿದ್ದಾರೆ.
ಕೆ.ಎಸ್. ವಿಶ್ವನಾಥನ್ ಅವರಿಂದ ಮಹತ್ವದ ಮಾಹಿತಿ
ಸಿಎಸ್‌ಕೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ವಿಶ್ವನಾಥನ್ ಮಾತನಾಡಿದ್ದು, 'ಜಹೀರ್ ವಿಶ್ವದರ್ಜೆಯ ಬೌಲರ್ ಹಾಗೂ ವರ್ಷಗಳಿಂದ ವಿಶೇಷವಾಗಿ ವೇಗದ ಬೌಲರ್‌ಗಳು ಸೇರಿದಂತೆ ಹಲವು ಯುವ ಕ್ರಿಕೆಟಿಗರಿಗೆ ಮಾರ್ಗದರ್ಶಕರಾಗಿದ್ದಾರೆ. ಇದಕ್ಕೂ ಮುನ್ನ ಟೀಮ್ ಇಂಡಿಯಾಗೆ ಉತ್ತಮ ಕೊಡುಗೆ ನೀಡಿದ್ದಾರೆ. ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಾವು ಕಾತರರಾಗಿದ್ದೇವೆ,' ಎಂದು ಹೇಳಿದ್ದಾರೆ.
ಸಿಎಸ್‌ಕೆಯ ನೂತನ ಕೋಚ್ ಆಗಿ ಆಯ್ಕೆಯಾದ ಬೆನ್ನಲ್ಲೇ ಜಹೀರ್ ಖಾನ್ ಅವರು ಮೊದಲು ಪ್ರತಿಕ್ರಿಯಿಸಿ, 'ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಸಿಎಸ್‌ಕೆಯ ಭಾಗವಾಗುತ್ತಿರುವುದು ನನಗೆ ಸಿಕ್ಕ ಗೌರವ. ಒಬ್ಬ ಕ್ರಿಕೆಟಿಗನಾಗಿ, ನಾನು ಮೈದಾನದಲ್ಲಿ ಚೆನ್ನೈ ವಿರುದ್ಧ ಆಡಿದ್ದೇನೆ ಮತ್ತು ಆ ಪೈಪೋಟಿಯನ್ನು ಪೂರ್ಣವಾಗಿ ಆನಂದಿಸಿದ್ದೇನೆ,' ಎಂದು ಹೇಳಿದರು.
'ಚೆಪಾಕ್ ಅಂಗಳದಲ್ಲಿ 'ಸೂಪರ್ ಫ್ಯಾನ್ಸ್' ನಿರ್ಮಿಸುವ ವಾತಾವರಣವು ಇದನ್ನು ಮತ್ತಷ್ಟು ವಿಶೇಷಗೊಳಿಸುತ್ತದೆ. ಇಂತಹ ಇತಿಹಾಸ ಹೊಂದಿರುವ ಐತಿಹಾಸಿಕ ಫ್ರಾಂಚೈಸಿಯನ್ನು ಸೇರಿಕೊಳ್ಳಲು ಕಾತರನಾಗಿದ್ದೇನೆ,' ಎಂದು ಹೇಳಿದ್ದಾರೆ. ಭಾರತ ಕಂಡ ಸಾರ್ವಕಾಲಿಕ ಅತ್ಯೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರೆಂದು ಪ್ರಸಿದ್ಧಿ ಪಡೆದಿರುವ ಜಹೀರ್ ಖಾನ್ ಅವರು 2011ರಲ್ಲಿ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ಕ್ರಿಕೆಟ್ ತಂಡದ ಪ್ರಮುಖ ಭಾಗವಾಗಿದ್ದರು.
ಹೇಮಂಗ್ ಬದಾನಿಗೆ ಹೆಡ್ ಕೋಚ್ ಹುದ್ದೆ ಕೈತಪ್ಪಿದ್ದೇಕೆ?
ಮಾಹಿತಿ ಪ್ರಕಾರ, ಸಿಎಸ್‌ಕೆ ಆಡಳಿತ ಮಂಡಳಿಯು ಭಾರತೀಯ ಕೋಚಿಂಗ್ ಸಿಬ್ಬಂದಿಯನ್ನು ನೇಮಿಸಲು ಆಸಕ್ತಿ ಹೊಂದಿತ್ತು. ಹೇಮಂಗ್ ಬದಾನಿ ಅವರು ಎಲ್ಲಾ ಅರ್ಹತೆಗಳನ್ನು ಹೊಂದಿದ್ದು, ಆರಂಭಿಕ ಮಾತುಕತೆಗಳು ಮತ್ತು ಹಣಕಾಸಿನ ವಿಷಯಗಳು ಅಂತಿಮ ಹಂತಕ್ಕೆ ತಲುಪಿದ್ದವು. ತಂಡವು 'ವರ್ಷದಿಂದ ವರ್ಷಕ್ಕೆ' ವಿಸ್ತರಿಸುವ ಒಪ್ಪಂದವನ್ನು ನೀಡಲು ಬಯಸಿತ್ತು. ಆದರೆ ಬದಾನಿ ಹಾಗೂ ಇತರ ಅಭ್ಯರ್ಥಿಗಳು ತಂಡವನ್ನು ಮರುಸಂಘಟಿಸಲು ಕನಿಷ್ಠ ಎರಡು ವರ್ಷಗಳ ದೀರ್ಘಾವಧಿ ಒಪ್ಪಂದವನ್ನು ಕೇಳಿದ್ದರು.
ಬದಾನಿ ಅವರಿಗೆ ಸಿಎಸ್‌ಕೆಯ ಸಾಗರದಾಚೆಗಿನ (SA20 ನ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್) ತಂಡಗಳಿಗೂ ಕೋಚ್ ಆಗುವ ನಿರೀಕ್ಷೆಯಿತ್ತು. ಆದರೆ ಅಲ್ಬಿ ಮೊರ್ಕೆಲ್ ಅವರನ್ನು ಜೋಹಾನ್ಸ್‌ಬರ್ಗ್ ತಂಡಕ್ಕೆ ಕೋಚ್ ಆಗಿ ನೇಮಿಸಿದ್ದರಿಂದ, ಬದಾನಿಗೆ ಕೇವಲ ಚೆನ್ನೈ ಸೂಪರ್ ಕಿಂಗ್ಸ್‌ನ ಜವಾಬ್ದಾರಿ ಮಾತ್ರ ಸಿಗುವಂತಾಯಿತು. ಈ ಒಪ್ಪಂದದ ಅವಧಿಯ ಭಿನ್ನಾಭಿಪ್ರಾಯವೇ ಮಾತುಕತೆ ಮುರಿಯಲು ಮುಖ್ಯ ಕಾರಣವಾಯಿತು ಎಂದು ಹೇಳಲಾಗುತ್ತಿದೆ.
ಇನ್ನೂ ನೂತನವಾಗಿ ಮುಖ್ಯ ಕೋಚ್ ಹುದ್ದೆ ಅಲಂಕರಿಸುವ ಜಹೀರ್ ಖಾನ್ ಅವರ ಈ ಒಪ್ಪಂದವು ಸುಮಾರು 5ರಿಂದ 7 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿದೆ ಎಂದು ಅಂದಾಜಿಸಲಾಗಿದೆ. ಜಹೀರ್ ಅವರಿಗೆ ಐಪಿಎಲ್‌ನಲ್ಲಿ ತರಬೇತುದಾರರಾಗಿ ಇದು ಮೂರನೇ ಜವಾಬ್ದಾರಿಯಾಗಿದೆ. ಈ ಹಿಂದೆ ಅವರು ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳಲ್ಲಿ ವಿಭಿನ್ನ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.


Click it and Unblock the Notifications
