ಸಚಿನ್ ತೆಂಡೂಲ್ಕರ್ ಮಗನನ್ನು ವಿಶ್ವದ ಶ್ರೇಷ್ಠ ಬ್ಯಾಟರ್ ಮಾಡುತ್ತೇನೆ: ಯುವರಾಜ್ ಸಿಂಗ್ ತಂದೆ
ಸಚಿನ್ ತೆಂಡೂಲ್ಕರ್ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ. ಅವರು ಮಾಡಿರುವ ಎಷ್ಟೋ ದಾಖಲೆಗಳನ್ನು ಇಂದಿಗೂ ಯಾರಿಗೂ ಮುರಿಯಲು ಆಗಿಲ್ಲ. ಅದಕ್ಕೆ ಅವರನ್ನು ಕ್ರಿಕೆಟ್ ದೇವರು ಎಂದು ಕರೆಯಲಾಗುತ್ತದೆ. ಸಚಿನ್ ಎಷ್ಟೆಲ್ಲಾ ಸಾಧನೆ ಮಾಡಿದ್ದರೂ ಅವರ ಮಗ ಅರ್ಜುನ್ ತೆಂಡೂಲ್ಕರ್ ಮಾತ್ರ ಅಪ್ಪನಂತೆ ಆಡಲು ಸಾಧ್ಯವಾಗಲೇ ಇಲ್ಲ.
ಸದ್ಯ ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ಪರವಾಗಿ ಆಡುತ್ತಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 30 ಲಕ್ಷ ರೂಪಾಯಿಗೆ ಅವರನ್ನು ಖರೀದಿ ಮಾಡಿದೆ. ಅಪ್ಪ ಸಚಿನ್ ತೆಂಡೂಲ್ಕರ್ ಬ್ಯಾಟರ್ ಆಗಿ ಸಾಕಷ್ಟು ದಾಖಲೆ ಮಾಡಿದ್ದಾರೆ, ಅರ್ಜುನ್ ತೆಂಡೂಲ್ಕರ್ ಆಲ್‌ರೌಂಡರ್ ಆಗಲು ಹೋಗಿ ಎರಡೂ ವಿಭಾಗದಲ್ಲೂ ವಿಫಲವಾಗಿದ್ದಾರೆ. ಇದೀಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಅರ್ಜುನ್ ತೆಂಡೂಲ್ಕರ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಶ್ರೇಷ್ಠ ಬ್ಯಾಟರ್ ಆಗಬಹುದು
ಭಾರತದ ಮಾಜಿ ಕ್ರಿಕೆಟಿಗ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಮತ್ತೊಮ್ಮೆ ಅರ್ಜುನ್ ತೆಂಡೂಲ್ಕರ್ ಬಗ್ಗೆ ದಿಟ್ಟ ಹೇಳಿಕೆ ನೀಡಿದ್ದಾರೆ. ಮಾಜಿ ರಾಜಸ್ಥಾನ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ತರುವರ್ ಕೊಹ್ಲಿ ಅವರೊಂದಿಗಿನ ಸಂದರ್ಶನದಲ್ಲಿ, ಅರ್ಜುನ್ ಬ್ಯಾಟಿಂಗ್ ಆಲ್‌ರೌಂಡರ್ ಆಗುವ ಬದಲು ಬ್ಯಾಟಿಂಗ್‌ನತ್ತ ಹೆಚ್ಚು ಗಮನಹರಿಸಬೇಕು ಎಂದು ಸಲಹೆ ಕೊಟ್ಟಿದ್ದಾರೆ.
ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಯೋಗರಾಜ್, ಅರ್ಜುನ್ ಬೌಲಿಂಗ್‌ಗೆ ಒತ್ತು ನೀಡುವುದರಿಂದ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಕಡೆಗಣಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ಇಬ್ಬರೂ ಗೋವಾ ತಂಡವು ಪಂಜಾಬ್ ವಿರುದ್ಧ ಆಡಲು ಬಂದಿದ್ದಾಗ ಅರ್ಜುನ್‌ಗೆ ಮಾರ್ಗದರ್ಶನ ನೀಡುವಂತೆ ಒತ್ತಾಯಿಸಿದ್ದನ್ನು ನೆನಪಿಸಿಕೊಂಡರು.
ಅರ್ಜುನ್ 10-12 ದಿನಗಳ ಕಾಲ ನನ್ನ ಜೊತೆ ಇದ್ದರು, ಆ ಸಮಯದಲ್ಲಿ ಅವರ ಆಟವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅರ್ಜುನ್ ಅವರ ಬ್ಯಾಟಿಂಗ್ ಕೌಶಲ್ಯದಿಂದ ಹೆಚ್ಚು ಪ್ರಭಾವಿತನಾಗಿದ್ದೆ, ಆದರೆ ಅವರನ್ನು ಬೌಲರ್ ಆಗಿ ಯಾಕೆ ಬಳಸುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಅರ್ಜುನ್ ಅವರ ನಿಜವಾದ ಸಾಮರ್ಥ್ಯ ಬ್ಯಾಟಿಂಗ್‌ನಲ್ಲಿದೆ ಎಂದು ಅವರು ಬಲವಾಗಿ ನಂಬಿದ್ದು ಮತ್ತು ಬ್ಯಾಟಿಂಗ್ ಆಲ್‌ರೌಂಡರ್ ಆದರೆ ಉತ್ತಮ ಪ್ರದರ್ಶನ ನೀಡಬಹುದು ಎಂದಿದ್ದಾರೆ.
"ಅರ್ಜುನ್ ತೆಂಡೂಲ್ಕರ್ ಈಗ ನನ್ನ ಬಳಿಗೆ ಬಂದರೆ, ಆರು ತಿಂಗಳಲ್ಲಿ ನಾನು ಅವರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಮಾಡುತ್ತೇನೆ. ಬ್ಯಾಟಿಂಗ್‌ನಲ್ಲಿ ಅವರ ಸಾಮರ್ಥ್ಯ ಯಾರಿಗೂ ತಿಳಿದಿಲ್ಲ. ಅವರು ನನ್ನೊಂದಿಗೆ 12 ದಿನಗಳ ಕಾಲ ಇದ್ದರು, ರಣಜಿ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿದರು. ಯಾರಾದರೂ ಅದರ ಬಗ್ಗೆ ಗಮನ ಹರಿಸಿದ್ದಾರಾ" ಎಂದು ಯೋಗರಾಜ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications