Champions Trophy: ಐಸಿಸಿ ಅಧ್ಯಕ್ಷ ಜಯ್ ಶಾಗೆ ಮಾಜಿ ಪಾಕಿಸ್ತಾನ ಕ್ರಿಕೆಟಿಗ ವಿಶೇಷ ಮನವಿ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಡಳಿಯ 15 ಸದಸ್ಯರ ಬೆಂಬಲದೊಂದಿಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಡಿಸೆಂಬರ್ ತಿಂಗಳಿನಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿ ಎನ್ನುವ ದಾಖಲೆ ಕೂಡ ಮಾಡಿದ್ದಾರೆ. ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಿಶೇಷ ಮನವಿ ಮಾಡಿದ್ದಾರೆ.
2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದ್ದು, ಭಾರತ ತಂಡವನ್ನು ಕಳಿಸಲ್ಲ ಎಂದು ಬಿಸಿಸಿಐ ಹೇಳಿತ್ತು, ಇದೀಗ ಜಯ್ ಶಾ ಅವರೇ ಐಸಿಸಿ ಅಧ್ಯಕ್ಷರಾಗಿರುವ ಕಾರಣ ಕ್ರೀಡಾ ಸ್ಫೂರ್ತಿಯನ್ನು ಎತ್ತಿ ಹಿಡಿಯಲು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಬೇಕು ಎಂದು ಪಾಕಿಸ್ತಾನದ ಮಾಜಿ ನಾಯಕ ಯೂನಿಸ್ ಖಾನ್ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಯೂನಿಸ್ ಖಾನ್, ಜಯ್ ಶಾ ಐಸಿಸಿ ಮುಖ್ಯಸ್ಥರಾಗಿ ನೇಮಕವಾಗಿದ್ದು ಕ್ರಿಕೆಟ್ ಮತ್ತಷ್ಟು ಅಭಿವೃದ್ಧಿ ಹೊಂದಬೇಖು. ಅವರು ಕ್ರೀಡಾಸ್ಫೂರ್ತಿಯನ್ನು ತೋರಿಸಿ, ಭಾರತ ತಂಡ ಪಾಕಿಸ್ತಾನಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದು ಹೇಳಿರುವುದಾಗಿ ಕ್ರಿಕೆಟ್ ಪಾಕಿಸ್ತಾನ ವರದಿ ಮಾಡಿದೆ.
ಏಕದಿನ ಮತ್ತು ಟೆಸ್ಟ್ ಮಾದರಿ ಕ್ರಿಕೆಟ್‌ಗೆ ಹೆಚ್ಚಿನ ಉತ್ತೇಜನ ನೀಡಲು ದಿಟ್ಟ ಕ್ರಮ ತೆಗೆದುಕೊಳ್ಳುವಂತೆ ಆಸ್ಟ್ರೇಲಿಯಾದ ಮಾಜಿ ಮುಖ್ಯ ತರಬೇತುದಾರ ಜಾನ್ ಬುಕಾನನ್ ಜಯ್ ಶಾ ಅವರಿಗೆ ಮನವಿ ಮಾಡಿದ್ದಾರೆ. ಪಿಟಿಐ ಜೊತೆ ಮಾತನಾಡಿರುವ ಬುಕನಾನ್, ಟಿ20 ಲೀಗ್‌ಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ರಕ್ಷಣೆ ಮಾಡಬೇಕಿದೆ ಎಂದರು.
ಪಾಕಿಸ್ತಾನಕ್ಕೆ ಹೋಗೋದು ಅನುಮಾನ
ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕಾ ಎನ್ನುವ ಬಗ್ಗೆ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಏಷ್ಯಾಕಪ್‌ನಲ್ಲೇ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಒಪ್ಪದ ಕಾರಣ, ಭಾರತದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜನೆ ಮಾಡಲಾಗಿತ್ತು. ಚಾಂಪಿಯನ್ಸ್ ಟ್ರೋಫಿ ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಯಬಹುದು ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications